ಕೊಲ್ಲಂ: ಪ್ರಜಾಪ್ರಭುತ್ವದ ಶಕ್ತಿಯೇ ಅಂಥದ್ದು. ಎಂಥಾ ಸಾಮಾನ್ಯ ವ್ಯಕ್ತಿಯೂ ಕೂಡ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯವಿದೆ. ಅದಕ್ಕೊಂದು ನಿದರ್ಶನ ಎಂಬಂತೆ ಕೊಲ್ಲಂ ಜಿಲ್ಲೆಯ ಪಥನಪುರಂ ಬ್ಲಾಕ್ ಪಂಚಾಯತ್‌ಗೆ ಅಧ್ಯಕ್ಷರಾಗಿ ಕೆ.ಆನಂದವಲ್ಲಿ (46)ಆಯ್ಕೆಯಾಗಿದ್ದಾರೆ. ಜತೆಗೆ ಅಧ್ಯಕ್ಷ ಹುದ್ದೆ ಮಹಿಳೆಗೆ ಮೀಸಲಾಗಿದ್ದದ್ದೂ ಅನುಕೂಲವಾಯಿತು.
2011ರಲ್ಲಿ ಅವರು ಪಂಚಾಯತ್‌ನಲ್ಲಿ ಕಸ ಗುಡಿಸುವ ಅರೆಕಾಲಿಕ ಹುದ್ದೆಗೆ ನೇಮಕಗೊಂಡಿದ್ದರು. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಆನಂದವಲ್ಲಿ ಜಯಸಾಧಿಸಿದ್ದರು. 13 ಮಂದಿ ಸದಸ್ಯರಿರುವ ಪಂಚಾಯತಿಯಲ್ಲಿ ಎಲ್‌ಡಿಎಫ್ 7, ಕಾಂಗ್ರೆಸ್ ನೇತೃತ್ವದ ಯುಡಿಎಫ್ 6 ಸ್ಥಾನಗಳನ್ನು ಗೆದ್ದಿದೆ.
“ಪಂಚಾಯಿತಿ ಅಧ್ಯಕ್ಷ ಹುದ್ದೆಗೆ ಏರುತ್ತೇನೆ ಎಂಬ ವಿಶ್ವಾಸವೇ ಇರಲಿಲ್ಲ. ಕಸ ಗುಡಿಸುವ ಅರೆಕಾಲಿಕ ಕೆಲಸ ಮಾಡುವ ಅವಧಿಯಲ್ಲಿ ಮಾತ್ರ ಕಚೇರಿಯಲ್ಲಿ ಇರುತ್ತಿದೆ’ ಎಂದು ಅವರು ಹೇಳಿದ್ದಾರೆ. ಅವರು ಸಿಪಿಎಂ ಸದಸ್ಯರಾಗಿದ್ದಾರೆ. ಆನಂದವಲ್ಲಿ ಅವರ ಪತಿ ಮೋಹನನ್ ಕೂಡ ಪತ್ನಿಗೆ ಒಲಿದು ಬಂದ ಅದೃಷ್ಟದ ಬಗ್ಗೆ ಮೂಕ ವಿಸ್ಮಿತರಾಗಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಆನಂದವಲ್ಲಿ ಆಡಳಿತ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂಬುದನ್ನು ಕಲಿತುಕೊಳ್ಳಲು ಮುಂದಾಗಿದ್ದಾರೆ. ಕಸಗುಡಿಸುವ ವೃತ್ತಿಯಲ್ಲಿದ್ದರೂ, ಚಹಾ, ನೀರು ಪೂರೈಕೆ ಮತ್ತು ಇತರ ಕಚೇರಿ ಕೆಲಸಗಳನ್ನು ಮಾಡುತ್ತಿದ್ದರು. ಸಭೆ ನಡೆಸುವ ವೇಳೆ ಕೊಠಡಿ ಪ್ರವೇಶ ಮಾಡುತ್ತಿದ್ದಾಗ ಹಲವು ವಿಚಾರಗಳು ಕೇಳುತ್ತಿದ್ದವು. ಅದರ ನೆನಪು ಮತ್ತು ಆಡಳಿತದ ಬಗ್ಗೆ ಕಲಿತುಕೊಂಡು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಪಿಯುಸಿ ವರೆಗೆ ಕಲಿತಿರುವ ಅವರು ಹುದ್ದೆ ನ್ಯಾಯ ಒದಗಿಸಬಲ್ಲರು ಎಂಬ ನಂಬುಗೆ ಸ್ಥಳೀಯರದ್ದು. 2011ರಲ್ಲಿ ಕೆಲಸಕ್ಕೆ ಸೇರಿದ್ದ ಅವರು 2017ರ ವರೆಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ಪಡೆಯುತ್ತಿದ್ದರು. ನಂತರ ಆ ಮೊತ್ತವನ್ನು 6 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಯಿತು.