ತಿರುವನಂತಪುರಂ: “ನಾನು ಇಸ್ಲಾಂ ಧರ್ಮದಲ್ಲಿರುವ ನರಕದ ಪರಿಕಲ್ಪನೆ ಕೇಳಿ ಭಯವಾಗಿ, ಹಿಂದೂ ಧರ್ಮಕ್ಕೆ ವಾಪಸಾದೆ.’
ಹೀಗೆಂದು ಹೇಳಿರುವುದು ಇತ್ತೀಚೆಗಷ್ಟೇ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡು ಸುದ್ದಿಯಾಗಿದ್ದ ಕೇರಳದ ಕಾಸರಗೋಡಿನ 23 ವರ್ಷದ ಯುವತಿ ಅಥಿರಾ.
ಘರ್ ವಾಪ್ಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಥಿರಾ, ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಹೇಳಿಕೊಂಡಿದ್ದಾರೆ. “ಕೆಲವು ಮುಸ್ಲಿಂ ಗೆಳೆಯರು ನನ್ನ ಹಾದಿ ತಪ್ಪಿಸಿದರು. ನನಗೆ ಇಸ್ಲಾಂ ಬಗ್ಗೆ ಕುತೂಹಲವಿತ್ತು. ಹಾಗಾಗಿ, ಅದರ ಬಗ್ಗೆ ಕೇಳಿದೆ. ಅದಕ್ಕವರು ಕೆಲವೊಂದು ಪುಸ್ತಕಗಳನ್ನು ಕೊಟ್ಟರು. ಆ ಧರ್ಮದ ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸದೇ ಹೋದರೆ ನರಕ ಪ್ರಾಪ್ತಿಯಾಗುತ್ತದೆ ಎಂದರು. ಆ ನರಕದ ಪರಿಕಲ್ಪನೆ ನನಗೆ ಭಯ ತರಿಸಿತು,’ ಎಂದಿದ್ದಾರೆ ಅಥಿರಾ.
ಪಿಎಫ್ಐ ಸಂಚು: ಇದೇ ವೇಳೆ, ಕೋರ್ಟ್ ನಲ್ಲಿ ಏನು ಹೇಳಿಕೆ ನೀಡಬೇಕು ಎಂಬುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ಕೆಲವರು ನನಗೆ ತರಬೇತಿ ನೀಡಿದ್ದರು. ಅದರಂತೆ, ನಾನು ಹೇಳಿಕೆ ಕೊಟ್ಟಿದ್ದೆ. ಮನೆಗೆ ಬಂದ ಮೇಲೆ ಅರ್ಷ ವಿದ್ಯಾ ಸಮಾಜಂಗೆ ಹೆತ್ತವರು ಕರೆದೊಯ್ದರು. ಅಲ್ಲಿಗೆ ಹೋದ ಬಳಿಕ ಇಸ್ಲಾಂಗೆ ಮತಾಂತರವಾಗುವ ನನ್ನ ನಿರ್ಧಾರ ತಪ್ಪು ಎಂಬುದು ನನಗೆ ಗೊತ್ತಾಯಿತು ಎಂದಿದ್ದಾರೆ.
ಜುಲೈನಲ್ಲಿ ಕಾಸರಗೋಡಿನ ತನ್ನ ಮನೆ ಬಿಟ್ಟು ಹೋಗಿದ್ದ ಅಥಿರಾ, “ತಾನು ಇಸ್ಲಾಂ ಅಭ್ಯಾಸ ಮಾಡುವ ಸಲುವಾಗಿ ಆ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ. ಇನ್ನು ಮುಂದೆ ನನ್ನ ಹೆಸರು ಆಯೆಷಾ’ ಎಂದು 15 ಪುಟಗಳ ಪತ್ರ ಬರೆದಿಟ್ಟಿದ್ದರು. ವಿಚಾರ ತಿಳಿದು ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.