Advertisement

ತುಳುವರ ಕನಸಿನ “ತುಳು ಭವನ’ಇನ್ನಾದರೂ ಸಾಕಾರಗೊಂಡೀತೇ?

06:00 AM Jul 22, 2017 | |

ಕಾಸರಗೋಡು: ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಕಾಯಕಲ್ಪ ನೀಡುವ ಉದ್ದೇಶದಿಂದ ಕೇರಳ ಸರಕಾರ ಆರಂಭಿಸಿದ “ಕೇರಳ ತುಳು ಅಕಾಡೆಮಿ’ ಪುನರ್‌ ರಚಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚತ್ತಾಯ ಅಧ್ಯಕ್ಷರಾಗಿರುವ ಕೇರಳ ತುಳು ಅಕಾಡೆಮಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಿಂದಲಾದರೂ ಕನಸಿನ “ತುಳು ಭವನ’ ಸಾಕಾರಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ತುಳುವರು ಎದುರು ನೋಡುತ್ತಿದ್ದಾರೆ. 

Advertisement

ತುಳು ಭವನ ನಿರ್ಮಾಣಕ್ಕೆ ಈ ಪುನರ್‌ ರಚಿತ ಕೇರಳ ತುಳು ಅಕಾಡೆಮಿ ಸಮಿತಿ ಇಚ್ಛಾಶಕ್ತಿ ತೋರಬಹುದೇ ಎಂಬುದೇ ಮಿಲಿಯನ್‌ ಡಾಲರ್‌ ಪ್ರಶ್ನೆ! 

ವಿ.ಎಸ್‌. ಅಚ್ಯುತಾನಂದನ್‌ ಮುಖ್ಯ ಮಂತ್ರಿ ಯಾಗಿದ್ದಾಗ ತುಳು ಅಕಾಡೆಮಿಗೆ “ತುಳು ಭವನ’ ನಿರ್ಮಿಸಲು ಮಂಜೇಶ್ವರ ತಾಲೂಕಿನ ಹೊಸಂಗಡಿಯ ಕಡಂಬಾರು ಗ್ರಾಮದ ದುರ್ಗಿ ಪ್ಪಳ್ಳದಲ್ಲಿ ಜಾಗವನ್ನು ಗೊತ್ತುಪಡಿಸಲಾಗಿತ್ತು. ತುಳು ಅಕಾಡೆಮಿ ಆರಂಭಿಸಿದ ಆರಂಭಿಕ ಹಂತದಲ್ಲಿ ತುಳುನಾಡು ಕಾಸರಗೋಡಿನ ತುಳುತೇರು ವಿವಿಧ ಸಾಂಸ್ಕೃತಿಕ ಚಟುವಟಿಕೆ ಗಳೊಂದಿಗೆ ಮುಂಬಯಿ, ತಿರುವನಂತಪುರ ನಗರಗಳಲ್ಲಿ ಅನಾವರಣಗೊಂಡಿತ್ತು. ಅಂದಿನ ಮಂಜೇಶ್ವರ ಶಾಸಕರಾದ ಸಿ.ಎಚ್‌. ಕುಂಞಂಬು ಅವರ ಕನಸಿನ ಕೂಸಾದ ಕೇರಳ ರಾಜ್ಯ ತುಳು ಅಕಾಡೆಮಿ ಅವಿರತ ಪರಿಶ್ರಮದೊಂದಿಗೆ ಗರಿಗೆದರಿತ್ತು. ಕೇರಳ ರಾಜ್ಯದಲ್ಲಿ ತುಳು ಭಾಷೆ, ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ 2007ರ ಸೆಪ್ಟಂಬರ್‌ ತಿಂಗಳಲ್ಲಿ ಕೇರಳ ತುಳು ಅಕಾಡೆಮಿ ವಿಧ್ಯುಕ್ತವಾಗಿ ಆರಂಭಗೊಂಡಿತ್ತು. ರಾಜ್ಯದ ಅಂದಿನ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌ ಅಕಾಡೆಮಿಯನ್ನು ಉದ್ಘಾಟಿಸಿದ್ದರು. ತುಳು ಅಕಾಡೆಮಿಯ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನಿರಿಸಿಕೊಳ್ಳಲಾಗಿತ್ತು. ಆದರೆ ಬರಬರುತ್ತಾ ಅಕಾಡೆಮಿ ನಿಷ್ಕ್ರಿಯಗೊಂಡಿತ್ತು. ಕಳೆದ ಐದು ವರ್ಷದಿಂದ ತುಳು ಅಕಾಡೆಮಿ ಸಂಪೂರ್ಣವಾಗಿ ನೆಲಕಚ್ಚಿತ್ತು. 

ಎಡರಂಗ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಸರಗೋಡು ಜೆಲ್ಲೆಯ ಪೆರ್ಲ, ಮಂಜೇಶ್ವರ, ಕಳಿಯೂರು, ಪೈವಳಿಕೆಗಳಲ್ಲಿ ತುಳುಕೂಟ, ತುಳುವರೆ ಆಯನೊ ಮುಂತಾದ ತುಳು ಜಾನಪದ ಸಾಂಸ್ಕೃತಿಕ  ಪ್ರದರ್ಶನವು ಬಹಳ ವಿಜೃಂಭಣೆಯೊಂದಿಗೆ ನಡೆದಿತ್ತು. ತುಳು ಆಕಾಡೆಮಿ ಸಂಸ್ಥೆಯ ಸ್ಥಾಪನೆಯಿಂದ ತುಳು ಭಾಷೆ, ಸಾಹಿತ್ಯಕ್ಕೆ ಹೊಸ ಜೀವ ತುಂಬುವ ಪ್ರಯತ್ನ ನಡೆದಿತ್ತು. ಅಕಾಡೆಮಿಯ ಚಟುವಟಿಕೆಯಿಂದ ಸಾರ್ಥಕ್ಯ ಭಾವನೆ ಜನರಲ್ಲಿ ಮೂಡಿತ್ತು. ತುಳು ಲಿಪಿಯ ಸಂಶೋಧಕರಾದ ಡಾ| ವೆಂಕಟರಾಜ ಪುಣಿಂಚತ್ತಾಯರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೊಸ ಮೆರುಗನ್ನು ನೀಡಿ, ತುಳುನಾಡಿನ ಜನರ ಪ್ರಶಂಸೆ ಮತ್ತು ಮೆಚ್ಚುಗೆಗೆ ಒಳಪಟ್ಟಿತ್ತು.ಹಲವು ತಿಂಗಳುಗಳ ಕಾಲ ತನ್ನ ಉತ್ತಮ ಕಾರ್ಯ ಚಟುವಟಿಕೆಗಳೊಂದಿಗೆ ಮಿಂಚಿದ ತುಳು ಅಕಾಡೆಮಿ  “ತೆಂಬರೆ’ ಎಂಬ ತ್ತೈಮಾಸಿಕದಲ್ಲಿ ತುಳು ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಆಚಾರ – ವಿಚಾರಗಳ ಬಗ್ಗೆ ಹೊಸ ಬೆಳಕನ್ನು ಕೂಡಾ ಮೂಡಿಸಿತ್ತು.

ತುಳು ಜಾನಪದ ಸಂಸ್ಕೃತಿಯನ್ನು ಸಕ್ರಿಯ ಗೊಳಿಸುವ ಮತ್ತು ಅಧ್ಯಯನ ಮಾಡುವ ಆಶಯದಿಂದ ಪ್ರಾರಂಭ ವಾದ ತುಳು ಅಕಾಡೆಮಿ ಇಂದು ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸದೆ ನಿರ್ಜಿàವ ಸ್ಥಿತಿಗೆ ಬಂದು ನಿಂತಿದೆ. ಅಕಾಡೆಮಿ ಮುಖೇನ ನಡೆಯುತ್ತಿದ್ದ ತುಳು ಜಾನಪದ ಜಾತ್ರೆಗಳು, ಸಾಹಿತ್ತಿಕ  ಸಂವಾದಗಳು ಇಂದು ಸ್ತಬ್ಧವಾಗಿವೆ. ತುಳುವರ ಜೀವನ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದ ದೇಸೊದ ತುಳು ಜಾತ್ರೆಯಂತಹ ಕಾರ್ಯಕ್ರಮಗಳು ನಡೆಯದಾಗಿದೆ. ತುಳುಜನ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿ ನಿರ್ಮಾಣವಾಗಬೇಕಿದ್ದ ತುಳು ಭವನದ ಕಾರ್ಯ ಇಂದು ನನೆಗುದಿಗೆ ಬಿದ್ದಿದೆ.

Advertisement

ಹಲವು ಭಾಷಾ ಸಂಗಮವಾದ ಕಾಸರಗೋಡು ಜಿಲ್ಲೆಯಲ್ಲಿ ಬಹಳಷ್ಟು ಮಂದಿ ತುಳುವರಿದ್ದಾರೆ. ಅತಿ ಮುಖ್ಯ ಸಂವಹನ ಭಾಷೆಯಾಗಿ  ತುಳು ಇಂದು ಎಲ್ಲರನ್ನೂ ಒಂದುಗೂಡಿಸುತ್ತಿದೆ. ಆದರೆ  ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಗತ ಗೊಳಿಸದಿರುವುದು ಸಂಬಂಧಪಟ್ಟವರ ಅಸಡ್ಡೆಗೆ ಹಿಡಿದ ಕನ್ನಡಿಯಾಗಿದೆ. 

ಸುಮಾರು 25 ಲಕ್ಷ ಜನರು ಮಾತನಾಡುವ ತುಳು ಭಾಷೆ ಅತೀ ಪುರಾತನವಾದ ದ್ರಾವೀಡ ಭಾಷಾ ವಿಭಾಗಕ್ಕೆ ಸೇರಿದೆ.ತುಳು ಭಾಷೆಯ ತಿಗಳಾರ ಲಿಪಿ ಮಲಯಾಳ ಲಿಪಿಯ ಜನಕ. ಅಂದರೆ ತುಳು ಲಿಪಿ ಅತ್ಯಂತ ಪ್ರಾಚೀನವೆಂಬುದನ್ನು ಸಂಶೋಧಕರೂ ಕೂಡ ತಿಳಿಯಪಡಿಸಿದ್ದಾರೆ. ಹುಲಿವೇಷ, ಕಂಬಳ, ಭೂತಕೋಲ, ಪಾಡªನಗಳು ತುಳು ಜನಾಂಗದವರ ಅನನ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಕಲೆಗಳ ರಕ್ಷಣೆ, ಪುನರುಜ್ಜೀವನಗೊಳಿಸಲು ಸಹಾಯಕವಾಗಬಲ್ಲ ತುಳು ಅಕಾಡೆಮಿಯ ಕಾರ್ಯದಕ್ಷತೆಯನ್ನು ಕಾಪಾಡುವಲ್ಲಿ ಎಲ್ಲರೂ ಕಾಯೊìàನ್ಮುಖರಾಗಬೇಕು.

ತುಳು ಭವನದ ನಿರ್ಮಾಣಕ್ಕೆ ಎಂಜಿನಿಯರ್‌ಗಳಿಂದ ರೂಪುರೇಶೆ ಸಿದ್ಧಪಡಿಸಲಾಗುತ್ತಿದೆ. ಹಿಂದಿನ ಸರಕಾರ 25 ಲಕ್ಷ ರೂ. ಭವನ ನಿರ್ಮಾಣಕ್ಕಾಗಿ ಮೀಸಲಿರಿಸಿತ್ತು. ಶಾಸಕರ ನಿಧಿಯಿಂದ ಸುಮಾರು 45 ಲಕ್ಷ ರೂ. ಮೊತ್ತ ಸಿಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕಾವåಗಾರಿಯ ಶಂಕುಸ್ಥಾಪನೆ ಸಾಧ್ಯತೆಗಳು ಇವೆೆ. ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲು ಅಗತ್ಯವಾದ ಧನಸಹಾಯ ಲಭಿಸದ ಕಾರಣ ಅವುಗಳನ್ನು ಮುಂದು ವರಿಸಲು ಸಾಧ್ಯವಾಗಿರಲಿಲ್ಲ.

ಕೇರಳ ತುಳು ಅಕಾಡೆಮಿ ಸಮಿತಿ ಪುನರ್‌ ರಚನೆ 
ಪ್ರತಿಷ್ಠಿತ ಸಂಸ್ಥೆಯಾದ ಕೇರಳ ತುಳು ಅಕಾಡೆಮಿಯನ್ನು  ಕಾಸರಗೋಡಿನ ಖ್ಯಾತ ಚಿತ್ರ ಕಲಾವಿದರಾದ ಪಿ.ಎಸ್‌. ಪುಣಿಂಚತ್ತಾಯ ಅವರ ಅಧ್ಯಕ್ಷತೆಯಲ್ಲಿ  ಜರಗಿದ ಸಭೆಯಲ್ಲಿ  ಪುನಾರಚಿಸಲಾಗಿದೆ. 

ತುಳು ಅಕಾಡೆಮಿಯ ಅಧ್ಯಕ್ಷರಾಗಿ ಪಿ.ಎಸ್‌. ಪುಣಿಂಚತ್ತಾಯ ಅವರನ್ನು  ಆರಿಸಲಾಗಿದೆ.ಅಕಾಡೆಮಿಯ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿಗಾರ್‌, ಕೋಶಾಧಿಕಾರಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಅವರನ್ನು  ಆಯ್ಕೆ ಮಾಡಲಾಗಿದೆ.

ಸಮಿತಿಯ ಸದಸ್ಯರಾಗಿ ಕಾಸರಗೋಡು ಸಂಸದ ಪಿ. ಕರುಣಾಕರನ್‌, ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌, ಉಮೇಶ್‌ ಎಂ. ಸಾಲಿಯಾನ್‌, ವಿಶ್ವನಾಥ ಕುದುರು, ರಾಮಕೃಷ್ಣ   ಕಡಂಬಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಎಂ.ಜಿ. ನಾರಾಯಣ ರಾವ್‌, ಶಾಲಿನಿ, ಗೀತಾ ಸಾಮಾನಿ, ಡಿ.ಎಂ.ಕೆ. ಮೊಹಮ್ಮದ್‌, ರವೀಂದ್ರ ರೈ ಮಲ್ಲಾವರ, ಭಾರತಿ, ಸುಚಿತ್ರಾ ರೈ, ರಾಜೀವಿ, ರಾಜು ಸ್ಟೀಫನ್‌ ಡಿ’ಸೋಜಾ, ಎಸ್‌. ನಾರಾಯಣ ಭಟ್‌ ಅವರನ್ನು  ನೇಮಿಸಲಾಗಿದೆ.

– ಪ್ರದೀಪ್‌ ಬೇಕಲ್‌ 

Advertisement

Udayavani is now on Telegram. Click here to join our channel and stay updated with the latest news.

Next