ತಿರುವನಂತಪುರ/ಹೊಸದಿಲ್ಲಿ: ದೇಶದಲ್ಲೇ ಮೊದಲ ಕೋವಿಡ್ ಸೋಂಕನ್ನು ಕಂಡಿದ್ದ ಕೇರಳದಲ್ಲಿ ಈಗ ಮೂರನೇ ಹಂತದ ವ್ಯಾಪಿಸುವಿಕೆ ಆರಂಭವಾಗಿದ್ದು, ಅದನ್ನು ಎದುರಿಸಲು ರಾಜ್ಯ ಸಕಲ ಸಿದ್ಧತೆ ನಡೆಸಿದೆ. ಅದರಂತೆ, ಏಕಕಾಲಕ್ಕೆ 50 ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡುವಂಥ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಮೊದಲ ಹಂತದ ಚಿಕಿತ್ಸಾ ಕೇಂದ್ರಗಳ ಸಂಖ್ಯೆಯನ್ನು 56ಕ್ಕೇರಿಸಲು ಸರಕಾರ ನಿರ್ಧರಿಸಿದೆ.
ಆರಂಭದಲ್ಲಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದ ಕೇರಳದಲ್ಲಿ, ಮೇ ತಿಂಗಳಿನಿಂದೀಚೆಗೆ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ 2 ತಿಂಗಳಲ್ಲಿ ಸುಮಾರು 7 ಸಾವಿರದಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ತಿಂಗಳಲ್ಲಿ ಇವುಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿಯಿದ್ದರೂ, ಯಾವುದೇ ಪರಿಸ್ಥಿತಿಯನ್ನೂ ಎದುರಿಸಲು ಸರಕಾರ ಸನ್ನದ್ಧವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.
ಈಗಾಗಲೇ ಇದ್ದ ಕೋವಿಡ್ ಚಿಕಿತ್ಸಾ ಕೇಂದ್ರಗಳ ಸಂಖ್ಯೆ ದ್ವಿಗುಣಗೊಳಿಸಲಾಗಿದ್ದು, ತಾತ್ಕಾಲಿಕವಾಗಿ ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲು ಸರಕಾರ ಮುಂದಾಗಿದೆ. ಈ ಪ್ರಕ್ರಿಯೆ ಪೂರ್ಣ ಗೊಂಡರೆ ಏಕಕಾಲಕ್ಕೆ 50 ಸಾವಿರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಯಲ್ಲೂ 2 ಕೊರೊನಾ ಆಸ್ಪತ್ರೆಗಳಿವೆ. ಪ್ರತಿ ಆಸ್ಪತ್ರೆಯಲ್ಲೂ ಒಂದೊಂದು ಎಫ್ಎಲ್‌ಟಿಸಿ (ಮೊದಲ ಹಂತದ ಚಿಕಿತ್ಸಾ ಕೇಂದ್ರ) ತೆರೆಯಲಾಗಿದೆ. ಅದರಂತೆ, ಒಟ್ಟಾರೆ ಈಗ 28 ಚಿಕಿತ್ಸಾ ಕೇಂದ್ರ ಗಳಿದ್ದು, ಈ ಸಂಖ್ಯೆಯನ್ನು 56ಕ್ಕೇರಿಸಲು ಸರಕಾರ ನಿರ್ಧರಿಸಿದೆ. ಅಂದರೆ, ಪ್ರತಿ ಆಸ್ಪತ್ರೆ ಯಲ್ಲೂ 2 ಎಫ್ಎಲ್‌ಟಿಸಿಗಳು ಕಾರ್ಯನಿರ್ವಹಿಸಲಿವೆ.
ಸಾಮುದಾಯಿಕ ವ್ಯಾಪಿಸುವಿಕೆ ಆಗಿಲ್ಲ: ಭಾರತದಲ್ಲಿ ಕೊರೊನಾ ಸೋಂಕು ಸಾಮು ದಾಯಿಕವಾಗಿ ವ್ಯಾಪಿಸಲು ಆರಂಭವಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಸ್ಪಷ್ಟಪಡಿಸಿದೆ. ಸಮು ದಾಯ ಮಟ್ಟದಲ್ಲಿ ಸೋಂಕು ವ್ಯಾಪಿ ಸುವಿಕೆ ಆರಂಭವಾಗಿದೆ ಎಂದು ಐಎಂಎ ಹೇಳಿರುವುದಾಗಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಸಂಘ ಈ ಸ್ಪಷ್ಟನೆ ನೀಡಿದೆ. ಈ ವಿಚಾರದಲ್ಲಿ ಯಾರೇ ಹೇಳಿಕೆ ನೀಡಿದರೂ, ಅದನ್ನು ಅವರ ವೈಯಕ್ತಿಕ ಹೇಳಿಕೆ ಎಂದಷ್ಟೇ ಪರಿಗಣಿಸಬೇಕು ಎಂದೂ ಹೇಳಿದೆ.
ದಾಖಲೆ: ಒಂದೇ ದಿನ 40,425 ಪ್ರಕರಣ
ಆಘಾತಕಾರಿ ಮಾಹಿತಿಯೆಂಬಂತೆ ದೇಶ ದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ 40,425 ಮಂದಿಗೆ ಸೋಂಕು ದೃಢಪ ಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದೆ. ರವಿವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ 681 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದ ಮೂರೇ ದಿನಗಳಲ್ಲಿ ಇದು 11 ಲಕ್ಷ ಕ್ಕೇರಿದೆ. ಈವರೆಗೆ 7 ಲಕ್ಷಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿದ್ದರೂ, ಗುಣ ಮುಖ ಪ್ರಮಾಣ ಅಲ್ಪಮಟ್ಟಿಗೆ ಇಳಿಕೆ ಕಂಡಿದೆ (ಶೇ.62.62) ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 24 ಗಂಟೆಗಳಲ್ಲಿ 22,664 ರೋಗಿಗಳು ಗುಣಮುಖರಾಗಿದ್ದಾರೆ. ಇದೇ ವೇಳೆ, ಭಾರತದಲ್ಲಿ ಮರಣ ಪ್ರಮಾಣ ಶೇ.2.46ರಷ್ಟಿದ್ದು, ಅತಿ ಕಡಿಮೆ ಮರಣ ಪ್ರಮಾಣ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.