Advertisement
ರಾತ್ರಿ ಗಡಿನಾಡು ತಲಪಾಡಿಯಿಂದ ಹೊರಟ ನಮ್ಮ ಬಸ್ ಮರುದಿನ ಬೆಳಗ್ಗೆ ಗುರುವಾಯೂರು ತಲುಪಿ ಶೌಚ, ಉಪಾಹಾರ ಪೂರೈಸಿತು.ಗುರುವಾಯೂರಿನಲ್ಲಿ ಹೆಚ್ಚಿನ ಜನ ಸಂದಣಿ ಇದ್ದುದರಿಂದ ದೇವಸ್ಥಾನದ ಒಳಪ್ರವೇಶಿಸುವುದು ಅಸಾಧ್ಯವಾಯಿತು.ಹೀಗಾಗಿ ಹೊರಆವರಣದಲ್ಲೇ ದೇವರಿಗೆ ನಮಸ್ಕರಿಸಿ ಹಿಂತಿರುಗಬೇಕಾಯಿತು. ಬಳಿಕ ಕೊಚ್ಚಿನ್ ಬಳಿಯ ಪತ್ರಚೊಟನಿಕ್ಕರ ಶ್ರೀ ಭಗವತೀ ದೇವಸ್ಥಾನಕ್ಕೆ ತೆರಳಿದೆವು. ಅಲ್ಲಿ ದೇವಿಯ ದರ್ಶನ ಪಡೆದು ಬಳಿಕ ಸಾಗಿದ್ದು ಕೊಚ್ಚಿನ್ ಬಂದರಿನೆಡೆಗೆ.
ಪ್ರಯಾಣದುದ್ದಕ್ಕೂ ಸೆಕೆಯಿಂದ ಬಸವಳಿದಿದ್ದ ನಮಗೆ ಕೊಚ್ಚಿನ್‌ನಲ್ಲಿ ತುಂತುರು ಮಳೆಯ ಸ್ವಾಗತ ಸಿಕ್ಕಿದ್ದು ಸಂತಸ ತಂದಿತ್ತು. ಮಳೆಯ ನಡುವೆ ಕೊಚ್ಚಿನ್ ಬಂದರಿನ ನೀರಿನ ಬೋಟಿನಲ್ಲಿ ಪ್ರಯಾಣಿಸಿ ಸಂಭ್ರಮಿಸಿದೆವು. ಸುದೀರ್ಘ ಎರಡು ಗಂಟೆಯ ನೀರಿನ ಪ್ರಯಾಣದಲ್ಲಿ ಬೋಟಿನ ಕೆಳ ಅಂತಸ್ತಿನಲ್ಲಿ ನಮ್ಮ ತಂಡದ ಯುವಕರ- ಮಕ್ಕಳ ನೃತ್ಯ ಸಾಗುತ್ತಿದ್ದರೆ,ಮೇಲಿನ ಅಂತಸ್ತಿನಲ್ಲಿದ್ದ ನಾವು ನೀರಿನ ಚೆಲು ವನ್ನು,ಸುತ್ತಲಿನ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡೆವು.
Related Articles
ಅಂದು ರಾತ್ರಿ ಕೊಚ್ಚಿನ್ ಮಹಾನಗರದ ಹೊಟೇಲೊಂದರಲ್ಲಿ ವಾಸ್ತವ್ಯವಿದ್ದ ನಾವು ಮರುದಿನ ಮುಂಜಾನೆ ಸಾಗಿದ್ದು ಕೇರಳದ ಕಾಶ್ಮೀರ ಎಂದೇ ಪ್ರಸಿದ್ಧವಾಗಿರುವ ಮುನ್ನಾರ್ ಗಿರಿಧಾಮಕ್ಕೆ. ಮುನ್ನಾರ್ ಪ್ರವೇಶಿಸುತ್ತಲೇ ಹನಿಹನಿ ಮಳೆಯ ಜತೆಗೆ ಚುಮು ಚುಮು ಚಳಿಯ ಅನುಭವವಾಯಿತು. ಇದ ರಿಂದ ಸುಮಾರು 5 ಗಂಟೆಗಳ ಸುದೀರ್ಘ ಪ್ರಯಾಣದ ದಣಿವು ಮರೆಯಾಗತೊಡಗಿತು. ನಾವು ವಾಸ್ತವ್ಯದ್ದ ಹೊಟೇಲಿನ ಬದಿಯಲ್ಲಿಯೇ ಪುಟ್ಟ ತೊರೆಯೊಂದು ಹರಿಯುತ್ತಿರುವ ನಯನ ಮನೋಹರ ದೃಶ್ಯ ನಮ್ಮನ್ನು ರೋಮಾಂಚನಗೊಳಿಸಿತು. ಆ ಬಳಿಕ ಪ್ರಸಿದ್ಧ ಎಕೋ ಪಾಯಿಂಟ್ ವೀಕ್ಷಿಸಿದೆವು. ಅಲ್ಲಿನ ನೀರ ರಾಶಿಯ ಸುತ್ತಲೂ ಆಗಸದೆತ್ತರಕ್ಕೆ ಬೆಳೆದು ನಿಂತ ನೀಲಗಿರಿ ವೃಕ್ಷ ಸಂಕುಲದ ಮಧ್ಯೆ ಪೋಟೋ ಕ್ಲಿಕ್ಕಿಸಿ ಸಂತಸಪಟ್ಟೆವು. ಆ ರಾತ್ರಿ ಹೊಟೇಲು ಆವರಣದಲ್ಲಿ ಮೈಕೊರೆಯುವ ಚಳಿಯ ನಡುವೆ ಬೆಂಕಿಯನ್ನು ಉರಿಸಿ (ಫೈರ್‌ಕ್ಯಾಂಪ್) ಸಂಗೀತದ ಹಿನ್ನೆಲೆಯೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟೆವು.
Advertisement
ಹಚ್ಚ ಹಸುರಿನ ರಾಷ್ಟ್ರೀಯಉದ್ಯಾನನಮ್ಮ ಪ್ರವಾಸದ ಕೊನೆಯ ದಿನ ಬೆಳಗ್ಗೆ ಹೊಟೇಲಿನಲ್ಲಿ ಉಪಾಹಾರ ಮುಗಿಸಿ ಹೊರಟ ನಾವು ಮುನ್ನಾರಿನ ಹೆಸರಾಂತ ಪ್ರೇಕ್ಷಣೀಯ ತಾಣವಾದ ಇರಕುಳಂ ರಾಷ್ಟ್ರೀಯ ಉದ್ಯಾನದೆಡೆ ಸಾಗಿದೆವು. ಉದ್ಯಾನಕ್ಕೆ ಏರುವ ಎತ್ತರದ ಹಾದಿಯ ಇಕ್ಕೆಲಗಳಲ್ಲಿ ಚಹಾ ತೋಟಗಳನ್ನು ವೀಕ್ಷಿಸುತ್ತಾ ಸಂಭ್ರಮಿಸಿದೆವು. ದೃಷ್ಟಿ ಹಾಯಿಸಿದಷ್ಟು ದೂರಕ್ಕೆ ಹಚ್ಚಹ ಸುರಿನ ಬೆಟ್ಟ- ಗುಡ್ಡಗಳಿಂದ ಆವೃತವಾಗಿದ್ದ ಈ ನೈಸರ್ಗಿಕ ಚೆಲುವಿನ ತಾಣಕ್ಕೆ ಎಲ್ಲರೂ ಮನಸೋತೆವು. ಅತ್ಯಾಕರ್ಷಕ ಲುಲೂ ಮಾಲ್
ದೇಶದ ಅತ್ಯಂತ ಬೃಹತ್ ಶಾಪಿಂಗ್ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೊಚ್ಚಿನ್‌ನ ಲುಲೂ ಮಾಲ್ ವೀಕ್ಷಿಸಿದೆವು. ಸಮಯಾವಕಾಶದ ಕೊರತೆಯಿಂದ ಇಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ರಾತ್ರಿ ಊಟ ಮುಗಿಸಿ ಮಂಗಳೂರಿನತ್ತ ಹಿಂತಿರುಗಿದೆವು. ಗ್ರಾಮೀಣ ಸೊಗಡು
ಕೊಚ್ಚಿನ್ ಬೋಟಿಂಗ್‌ನಲ್ಲಿ ಬೃಹತ್ ನೌಕೆಗಳನ್ನು ಹಾಗೂ ಗಗನದೆತ್ತರಕ್ಕೆ ಚಾಚಿಕೊಂಡ ಕಟ್ಟಡ ಸಂಕೀರ್ಣ ಕಾಣುವ ಸಂಭ್ರಮವಾದರೆ, ಅಲಪ್ಪಿ ದೋಣಿ ವಿಹಾರದಲ್ಲಿ ಅಪ್ಪಟಗ್ರಾಮೀಣ ಸೊಗಡನ್ನು ವೀಕ್ಷಿಸಿದ ಅಪೂರ್ವಅನುಭವ ನಮ್ಮದಾ ಯಿತು. ಆಳಪ್ಪಿಯ ವೆಂಬನಾಡು ಸರೋವರದಲ್ಲಿ ಒಂದು ಗಂಟೆಯ ಅವಧಿಯ ಬೋಟಿಂಗ್ ನಮಗೆಲ್ಲರಿಗೂ ಅದ್ಭುತ ಅನುಭವ ನೀಡಿತು. ಹಿನ್ನೀರಿನ ಈ ಸರೋವರದ ತುಂಬೆಲ್ಲ 500ಕ್ಕೂ ಹೆಚ್ಚಿನ ವೈವಿಧ್ಯಮಯ ವಿನ್ಯಾಸದ ಆಕರ್ಷಕ ಬೋಟುಗಳನ್ನು ಕಂಡು ದಂಗಾದೆವು. ರೂಟ್ ಮ್ಯಾಪ್
-ಮಂಗಳೂರಿನಿಂದ ಗುರುವಾಯೂರಿಗೆ 330 ಕಿ.ಮೀ. ದೂರ ವಿದೆ. ಸ್ವಂತ ಅಥವಾ ಬಾಡಿಗೆ ವಾಹ ನ ದಲ್ಲಿ ತೆರ ಳುವುದಾದರೆ ಸುಮಾರು 8 ಗಂಟೆಗಳ ಪ್ರಯಾಣ
– ಗುರುವಾಯೂರಿನಿಂದ ಕೊಚ್ಚಿನ್‌ಗೆ ಸುಮಾರು 92.7 ಕಿ.ಮೀ. ದೂರ ವಿದ್ದು, 3 ಗಂಟೆ ಪ್ರಯಾಣ
– ಕೊಚ್ಚಿನ್‌ನಿಂದ ಮುನ್ನಾರಿಗೆ ಸುಮಾರು 5 ಗಂಟೆಗಳ ಪ್ರಯಾಣ
– ಕೊಚ್ಚಿನ್ ಹಾಗೂ ಮುನ್ನಾರಿನಲ್ಲಿ ಮೊದಲೇ ವಸತಿ ಕಾದಿರಿಸಬೇಕು
– ಪ್ರವಾಸಿ ತಾಣಗಳಾಗಿರುವುದರಿಂದ ಊಟ, ಉಪಾಹಾರಕ್ಕೆ ಸಮಸ್ಯೆಯಿಲ್ಲ.
-ಖಾಸಗಿ ವಾಹನ ಮಾಡಿಕೊಂಡು ಹೋದರೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಅಡ್ಡಿಯಿಲ್ಲ. - ಸತೀಶ್ ಶೆಟ್ಟಿ,ಕೊಡಿಯಾಲಬೈಲ್