ಕಾಸರಗೋಡು: ಕ್ರಿಸ್ಮಸ್ ರಜಾವಧಿಯ ಬಳಿಕ ಕೇರಳದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗುವ ಸಾಧ್ಯತೆ ಇದೆಯೆಂದು ಆರೋಗ್ಯ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.
ಹೊಸ ರೂಪಾಂತರಿ ಬಗ್ಗೆ ಆತಂಕ ಅಗತ್ಯವಿಲ್ಲ. ಆದರೆ ಹೆಚ್ಚು ವಯಸ್ಸಾದವರು ಹಾಗೂ ಇತರ ಕಾಯಿಲೆ ಪೀಡಿತರು ಜಾಗ್ರತೆ ಪಾಲಿಸಬೇಕೆಂದು ತಿಳಿಸಲಾಗಿದೆ. ಪ್ರತಿರೋಧ ಶಕ್ತಿ ಕಡಿಮೆಯಿರುವವರು ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆಯಬೇಕೇ ಎಂಬ ಕುರಿತಾಗಿ ಇನ್ನಷ್ಟೇ ಚರ್ಚೆ ನಡೆಸಿ ತೀರ್ಮಾನಿಸಬೇಕಾಗಿದೆ.
ರಾಜ್ಯ, ದೇಶ, ಜಗತ್ತಿನಲ್ಲೇ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣೆಯ ಪ್ರಮಾಣ ಹೆಚ್ಚಿದಂತೆ ಹೆಚ್ಚೆಚ್ಚು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿವೆ. ಆದ್ದರಿಂದ ಹೆಚ್ಚು ಜನರು ಭಾಗವಹಿಸುವ ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಜಾಗ್ರತೆ ಅನಿವಾರ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಜನರು ಗುಂಪು ಸೇರುವಲ್ಲಿಗೆ ಹೋಗುವಾಗ ಮಾಸ್ಕ್ ಧರಿಸಬೇಕು. ಜ್ವರ ಲಕ್ಷಣವುಳ್ಳವರು ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಂದ ಅಂತರ ಪಾಲಿಸಬೇಕೆಂದೂ ತಿಳಿಸಿದ್ದಾರೆ.
ಕೋವಿಡ್ ಹೊಸ ರೂಪಾಂತರಿ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವುದಿಲ್ಲ. ಪ್ರಸ್ತುತ ಕೋಟ್ಟಯಂ, ಎರ್ನಾಕುಳಂ, ತಿರುವನಂತಪುರ ಜಿಲ್ಲೆಗಳಲ್ಲಿ ರೋಗ ಹರಡುವಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಆದುದರಿಂದ ಈ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಆರೋಗ್ಯ ಇಲಾಖೆ ತಜ್ಞರು ತಿಳಿಸಿದ್ದಾರೆ.
ದ.ಕ.: ಇಬ್ಬರಿಗೆ ಕೋವಿಡ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 9 ಸಕ್ರಿಯ ಪ್ರಕರಣಗಳಿವೆ. ಬುಧವಾರ ಜಿಲ್ಲೆಯಲ್ಲಿ 335 ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.