Advertisement

ದೇಗುಲದಲ್ಲೇ ಮುಸ್ಲಿಮರಿಗೆ ಇಫ್ತಾರ್‌!

03:45 AM Jun 03, 2017 | Team Udayavani |

ತಿರುವನಂತಪುರ: ರಂಜಾನ್‌ ಅಂಗವಾಗಿ ಒಂದು ತಿಂಗಳು ಉಪವಾಸ ವ್ರತ ಮಾಡುತ್ತಿರುವ ಮುಸ್ಲಿಮರಿಗಾಗಿ, ಕೇರಳದ ಮಲಪ್ಪುರಂ ಜಿಲ್ಲೆಯ ದೇವಾಲಯವೊಂದು ಸಸ್ಯಾಹಾರಿ ಇಫ್ತಾರ್‌ ಕೂಟ ಏರ್ಪಡಿಸುವ ಮೂಲಕ ಗಮನಸೆಳೆದಿದೆ.ಕೇಂದ್ರ ಸರ್ಕಾರದ “ವಧೆಗಾಗಿ ಜಾನುವಾರು ಮಾರಾಟ ನಿಷೇಧ’ ಅಧಿಸೂಚನೆಗೆ ಪ್ರತಿರೋಧವಾಗಿ ಈ ಸೇವಾ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆಯಾದರೂ ಇದರ ಹಿಂದಿನ ಉದ್ದೇಶವೇ ಬೇರೆ. 

Advertisement

ವೆಜ್‌ ಇಫ್ತಾರ್‌ ನಡೆಯುತ್ತಿರುವುದು ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಲಪ್ಪುರಂ ಜಿಲ್ಲೆಯ ಪುನ್ನಥಲ ಗ್ರಾಮದ ಶ್ರೀ ನರಸಿಂಹಮೂರ್ತಿ ದೇವಾಲಯದಲ್ಲಿ. ಅಧಿಸೂಚನೆ ವಿರೋಧಿಸುವ ಉದ್ದೇಶ ಒಂದೆಡೆಯಾದರೆ, ಮತ್ತೂಂದೆಡೆ ಇತ್ತೀಚೆಗೆ ನಡೆದ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಮುಸ್ಲಿಮರು ಉದಾರವಾಗಿ ದೇಣಿಗೆ ನೀಡಿ ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಇಫ್ತಾರ್‌ ಕೂಟ ಏರ್ಪಡಿಸಲಾಗಿದೆ.

ಸಾಮೂಹಿಕ ಅನ್ನದಾನ ನಡೆಸಲು ಮುಂದಾಗಿದ್ದ ಆಡಳಿತ ಮಂಡಳಿ, ನಂತರ ನಿಲುವು ಬದಲಿಸಿತು. ರಂಜಾನ್‌ ತಿಂಗಳಲ್ಲಿ ದಿನವಿಡೀ ಉಪವಾಸವಿರುವ ಮುಸ್ಲಿಮರು, ಸಂಜೆಯ ವೇಳೆ ಆಹಾರ ಸೇವಿಸುವ ಮೂಲಕ ಉಪವಾಸ ಮುರಿಯುತ್ತಾರೆ. ಹೀಗಾಗಿ ಅವರಿಗಾಗಿ ಸಸ್ಯಾಹಾರಿ ಇಫ್ತಾರ್‌ ಕೂಟ ಏರ್ಪಡಿಸಲು ನಿರ್ಧರಿಸಿತು. ಬುಧವಾರ ಸಂಜೆ ಸುಮಾರು 500ಕ್ಕೂ ಹೆಚ್ಚು ಮುಸ್ಲಿಮರು ದೇವಾಲಯ ಪ್ರವೇಶಿಸಿ ಆಹಾರ ಸೇವಿಸಿದರು. ಈ ಭಾಗ ಭಾವೈಕ್ಯತೆಗೆ ಹೆಸರಾಗಿದ್ದು, ಎಲ್ಲ ಹಬ್ಬಗಳನ್ನು ಧರ್ಮಭೇದವಿಲ್ಲದೆ ಆಚರಿಸಲಾಗುತ್ತದೆ. ದೇಗುಲದ ಜೀಣೋದ್ಧಾರಕ್ಕೆ ಧನಸಹಾಯವಷ್ಟೇ ಅಲ್ಲದೆ ನಿರ್ಮಾಣ ಕಾರ್ಯದಲ್ಲೂ ಮುಸ್ಲಿಮರು ಕೈಜೋಡಿಸಿದ್ದು, ಈ ಗ್ರಾಮದಲ್ಲಿ ಇರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next