Advertisement

ಕೇರಳ ಶೈಲಿಯ ಮನೆ ಕರಾವಳಿಯಲ್ಲೀಗ ಆಕರ್ಷಣೆ

12:54 PM Oct 13, 2018 | |

ಸಾಂಪ್ರದಾಯಿಕ ಶೈಲಿಗೆ ಮನಸೋತ, ಕಾಂಕ್ರೀಟ್‌ ನಾಡಿನಲ್ಲಿಯೂ ಗ್ರಾಮೀಣ ಸೊಗಡನ್ನು ಉಳಿಸಲಿಚ್ಛಿಸುವವರು ಕೇರಳ ಶೈಲಿಯ ಮನೆಗಳಿಗೆ ಮನ ಸೋತಿದ್ದಾರೆ. ಹೀಗಾಗಿಯೇ ಮಂಗಳೂರು ನಗರ ಸಹಿತ ಗ್ರಾಮೀಣ ಭಾಗದಲ್ಲೂ ಸಾಂಪ್ರದಾಯಿಕ ಮಾದರಿಯ ಕೇರಳ ಶೈಲಿಯ ಮನೆಗಳು ಹೆಚ್ಚಾಗಿ ನಿರ್ಮಾಣವಾಗುತ್ತಿದೆ. ಹೆಂಚಿನ ಮನೆಯಲ್ಲಿ ವಿಭಿನ್ನತೆ, ವಿಶೇಷತೆ ಬೇಕೆಂದು ಬಯಸುವವರು ಈ ಮನೆಗಳತ್ತ ಒಲವು ತೋರುತ್ತಿದ್ದಾರೆ.

Advertisement

ನಮ್ಮದೇ ಆದ ಸುಂದರ ಮನೆಯೊಂದಿದ್ದರೆ ಮನಸ್ಸಿಗೂ ನೆಮ್ಮದಿ. ಬಾಡಿಗೆ ಕಟ್ಟುವ ಚಿಂತೆಯಿಲ್ಲ, ಏನಾದರೂ ಹಾಳದರೆ ಓನರ್‌ ಬೈಯ್ತಾರೆ ಎಂಬ ಭಯವೂ ಇಲ್ಲ. ನಮ್ಮದೇ ಮನೆ, ಹೇಗೆ ಬೇಕೋ ಹಾಗೆ ಸಿಂಗರಿಸಬಹುದು, ನಮ್ಮಿಷ್ಟದಂತೆ ನೋಡಿಕೊಳ್ಳಬಹುದು. ಅದಕ್ಕೆ ಎಲ್ಲರೂ ಪುಟ್ಟ ಮನೆಯಾದರೂ ಪರ್ವಾಗಿಲ್ಲ ಸಣ್ಣದೊಂದು ಗೂಡು ಬೇಕೆ ಬೇಕು ಎಂದು ಹಂಬಲಿಸುತ್ತಾರೆ.

ಒಂದು ಮನೆ ನೋಡಿ ಬಂದರೆ ಸಾಕು ನಮ್ಮ ಮನಸ್ಸಿನೊಳಗೂ ಅಂಥದ್ದೇ ಮನೆ, ಸಣ್ಣಪುಟ್ಟ ಬದಲಾವಣೆಯೊಂದಿಗೆ ರೂಪುಗೊಳ್ಳುತ್ತದೆ. ಮನೆ ಯಾವುದೇ ರೀತಿ ಇರಲಿ ವಾಸ್ತು ಪ್ರಕಾರ ಇರಲೇಬೇಕು ಎನ್ನುವವರು ಹಲವರು. ಇದಕ್ಕಾಗಿ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಮೆಚ್ಚಿಕೊಳ್ಳವವರಿಂದಾಗಿ ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕೇರಳ ಶೈಲಿಯ ಮನೆಗಳು ಬಾಗಿಲು ತೆರೆದು ಸ್ವಾಗತಿಸುತ್ತಿವೆ.

ತರಹೇವಾರಿ ವಿಶೇಷತೆಯ ಕಟ್ಟಡಗಳು, ಫ್ಲ್ಯಾಟ್‌ಗಳು ಮಂಗಳೂರನ್ನು ಆಕ್ರಮಿಸಿಕೊಂಡಿದ್ದರೂ ಸಾಂಪ್ರದಾಯಿಕತೆಯ ಪ್ರೀತಿ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಈ ಮನೆಗಳು.

ಕಾಂಕ್ರೀಟ್‌ ಕಟ್ಟಡದಲ್ಲಿ ಒಂದಕ್ಕಿಂತ ಒಂದು ವಿಭಿನ್ನ- ವಿಶೇಷ ಎನ್ನುವ ಮನೆಗಳಿವೆ. ಒಂದೊಂದು ಮನೆಯೂ ಒಂದೊಂದು ರೀತಿಯ ಅನುಭವ ಕೊಡುತ್ತದೆ  ಎಂಬುದನ್ನು ಬಹುತೇಕ ಜನರು ಒಪ್ಪಿಕೊಂಡಿದ್ದರೂ ಕೂಡ ಕೆಲವರಿಗೆ ‘ಇದಷ್ಟೇ ಮನೆ’ ಎಂಬ ಅನುಭವ ಬರುವುದಿಲ್ಲ. ಬದಲಾಗಿ ಇದಕ್ಕೂ ಮೀರಿದ ಮನಸ್ಸಿಗೆ ಆಹ್ಲಾದತೆಯನ್ನು ಸೃಷ್ಟಿಸುವ ಮನೆಗಳು ಬೇಕು ಎಂದು ನಿರೀಕ್ಷಿಸುತ್ತಾರೆ. ಹೀಗಿರುವಾಗಲೇ ಕೇರಳ ಶೈಲಿಯ ಮನೆಗಳು ಕರಾವಳಿ ಜನರ ಮನಸ್ಸು ತಟ್ಟುತ್ತಿದೆ. ಇರುವ ಸ್ವಲ್ಪ ಜಾಗದಲ್ಲೇ ಪ್ರತ್ಯೇಕವಾಗಿ ಕೇರಳ ಶೈಲಿಯ ಮನೆ ಕಟ್ಟಿ ಕೊಂಡು ಕಾಂಕ್ರೀಟ್‌ ನಾಡಿನ ನಡುವೆಯೇ ಬದುಕಿನ ಜಂಜಾಟದಿಂದ ದೂರವಾಗಿ ನೆಮ್ಮದಿಯಿಂದ ಬದುಕಬೇಕು ಎಂದು ಕೊಂಡವರು ಇಂಥ ಮನೆಗಳ ನಿರ್ಮಾಣಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.

Advertisement

ಹೆಚ್ಚಾ ಕಡಿಮೆ ನಗರದಲ್ಲಿ 10ರಿಂದ 15 ಮನೆಗಳು ಕೇರಳ ಶೈಲಿಯದ್ದೇ ಇದೆ. ಹೀಗಾಗಿ, ಹಿಂದೆ ಕೇರಳದಲ್ಲಿ ಮಾತ್ರ ಕಾಣುತ್ತಿದ್ದ ಇಂತಹ ಮನಸುಗಳು ಈಗ ಮಂಗಳೂರಿಗೆ ಬಂದಂತಾಗಿದೆ. ಮೂಲತಃ ಕೆಲವು ಕೇರಳದವರು ಮಂಗಳೂರಿಗೆ ಬಂದು ಇಲ್ಲಿ ಅಲ್ಲಿನ ಮನೆ ಕಟ್ಟಿದವರಿದ್ದರೆ, ಇನ್ನೂ ಕೆಲವರು ಕೇರಳದ ಶೈಲಿ ಹಾಗೂ ವಿಶೇಷತೆಯ ಬೆರಗಿನಿಂದ ಕೇರಳ ಶೈಲಿಯ ಮನೆಗೆ ಮನಸ್ಸು ಮಾಡಿದ್ದಾರೆ.

ದೇವಾಲಯದ ಮಾದರಿಯ ಮನೆಗಳು
ಕೇರಳ ಶೈಲಿಯ ಮನೆಗಳು ದೇವಾಲಯ ಶೈಲಿಯಲ್ಲಿರುತ್ತವೆ ಎಂಬುದು ಸಹಜ ಮಾತು. ಸಾಂಪ್ರದಾಯಿಕ ಚೌಕಟ್ಟನ್ನು ಮನೆಯಲ್ಲಿ ಸಮ್ಮಿಲಿತಗೊಳಿಸಿದ ಪರಿಣಾಮ ಆ ಮನೆಗಳು ಇನ್ನಷ್ಟು ಆಕರ್ಷಕವಾಗಿರುತ್ತದೆ. ವಿಶೇಷವೆಂದರೆ ಇದರ ಜತೆಗೆ ಈಗಿನ ಕಾಲಕ್ಕೆ ಸಂಬಂಧಿಸಿದಂತೆ ಆಧುನಿಕ ಟಚ್‌ ಕೂಡ ಆ ಮನೆಯೊಳಗೆ ಸೇರಿ ರು ತ್ತವೆ. ಹೀಗಾಗಿ ಜನರಿಗೆ ಇದೊಂದು ಭಾವನಾತ್ಮಕವಾಗಿ ಅನುಭೂತಿಯ ಪ್ರಸಂಗ ಎಂದೇ ಪರಿಗಣಿತ.

ಒಂದೆಡೆ ಮನಸ್ಸಿಗೆ ಮುದ ಸಿಗುವುದಿದ್ದರೆ ಇನ್ನೊಂದೆಡೆ ಪ್ರಶಾಂತ ಹಾಗೂ ಕೂಲ್‌ ವಾತಾವರಣ ಇಂಥ ಮನೆಗಳಲ್ಲಿರುತ್ತವೆ. ಕೇರಳ ಶೈಲಿಯ ಮನೆಗಳ ಮುಂಭಾಗದಲ್ಲಿ ಎರಡು ಬಾಗಿಲು, ಎದುರು ಸಿಟೌಟ್‌ನಲ್ಲಿ ಸಾಂಪ್ರದಾಯಿಕವಾದ ಕುಳಿತುಕೊಳ್ಳುವ ವಿಧಾನಗಳಿವೆ. ಮನೆಯ ಮೇಲೆ ಮುಗುಳಿಯಂಥ ವ್ಯವಸ್ಥೆಯೂ ಇರುತ್ತದೆ.

ಜತೆಗೆ ಮನೆಯ ಹೊರಾಂಗಣದಲ್ಲಿ ಮರದ ಪೀಠೊಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುವಂತಿ ರುವ ಈ ಮನೆಗಳ ನಿರ್ಮಾಣಕ್ಕೆ ಈಗ ಮಂಗಳೂರಿನಲ್ಲಿ ಡಿಮ್ಯಾಂಡ್‌ ಹೆಚ್ಚಿದೆ. 

ಹೆಂಚಿನ ಮನೆಯ ವಿಭಿನ್ನತೆ
ತುಳುನಾಡಿನಲ್ಲಿ ಗುತ್ತಿನ ಮನೆ ಅಥವಾ ಮನೆತನದ ಮನೆಗಳು ಒಂದು ರೀತಿಯಲ್ಲಿ ಕೇರಳ ಶೈಲಿಯನ್ನೇ ಹೋಲುವಂತ ರೀತಿಯಲ್ಲೇ ಇವೆ. ಇವುಗಳಲ್ಲಿ ಕೆಲವು ಮನೆಗಳು ಇನ್ನೂ ಹಿಂದಿನಂತೆ ಜೀವಂತವಾಗಿದ್ದರೆ, ಉಳಿದ ಮನೆಗಳು ತನ್ನ ಚೆಲುವು ಕಳೆದುಕೊಂಡಿವೆ. ಆಧುನಿಕ ಟಚ್‌ ಪಡೆ ದು ಕೊಂಡಿವೆ. ಆದರೆ, ಬಹುತೇಕ ಮಂದಿಗೆ ಅಂತಹ ಮನೆಗಳ ಮೇಲೆಯೇ ಆಸೆ. ಹೀಗಾಗಿ ಕೆಲವರು ಅಂತಹ ಮನೆ ನಿರ್ಮಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ.

ಒಂದರ್ಥದಲ್ಲಿ ಬಜೆಟ್‌ ಸ್ವಲ್ಪ ದುಬಾರಿ ಅನಿಸಿದರೂ ಕೂಡ ಕೇರಳ ಶೈಲಿಯ ಮನೆಗೆ ಹೆಚ್ಚು ಮಾನ್ಯತೆ ಇದೆ ಎಂಬುದು ಸಾರ್ವತ್ರಿಕ ಸತ್ಯ. ಜತೆಗೆ ಮನೆಯ ಮಧ್ಯೆ ‘ಮುಂದಿಲ್‌’ (ಮಳೆ ನೀರು ಬೀಳುವ ಜಾಗ) ನಿರ್ಮಾಣಕ್ಕೂ ಹೆಚ್ಚಿನ ಜನರು ಒಲವು ತೋರಿಸುತ್ತಿದ್ದಾರೆ. ಹಂಚಿನ ಮನೆಯಲ್ಲಿ ವಿಭಿನ್ನತೆಯನ್ನು ಕಾಣುವ ಬಗ್ಗೆಯೂ ಯೋಚಿಸುವವರು ಕೆಲವರಿದ್ದಾರೆ. ಇದೆಲ್ಲವೂ ಕೇರಳ ಭಾಗದಲ್ಲಿ ತುಂಬ ಫೇಮಸ್‌. ಅದನ್ನು ಇನ್ನಷ್ಟು ಮನ ಸ್ನೇಹಿಯಾಗಿ ಮಾಡುವ ಬಗ್ಗೆ ಮಂಗಳೂರಿನವರೂ ಆಸಕ್ತಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಗುತ್ತಿಗೆದಾರರಾದ ಪ್ರದೀಪ್‌ ಶೆಟ್ಟಿ ಎಕ್ಕಾರು. 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next