ತಿರುವನಂತಪುರಂ: ಬೆಲೆ ಏರಿಕೆ ಬಿಸಿ, ತೈಲದ ಅಭಾವ ಹೀಗೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಸೋಮವಾರ (ಜೂನ್ 21) ಪರಿಸರ ಸ್ನೇಹಿ ಎಂದೇ ಪರಿಗಣಿತವಾಗಿರುವ ದ್ರವೀಕೃತ ನೈಸರ್ಗಿಕ ಅನಿಲ(ಎಲ್ ಎನ್ ಜಿ) ಚಾಲಿತ ಮೊದಲ ಬಸ್ ಗೆ ಚಾಲನೆ ನೀಡಿದೆ.
ಇದನ್ನೂ ಓದಿ:ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್ ಸಂಚಾರ ಆರಂಭ
ಐದು ವರ್ಷಗಳ ಹಿಂದೆಯೇ ಎಲ್ ಎನ್ ಜಿ ಬಸ್ ಪ್ರಯೋಗಕ್ಕೆ ಮುಂದಾಗಿದ್ದ ಕೇರಳ, ತಿರುವನಂತಪುರಂನಲ್ಲಿ ಪ್ರಾಯೋಗಿಕ ಸಂಚಾರ ನಡೆಸಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ಎಲ್ ಎನ್ ಜಿ ಬಸ್ ಸಾರ್ವಜನಿಕರ ಪ್ರಯಾಣಿಕರ ಓಡಾಟಕ್ಕೆ ಸಿದ್ಧವಾಗಿದ್ದು, ಸಾರಿಗೆ ಸಚಿವ ಆ್ಯಂಟನಿ ರಾಜು ಅವರು ತಿರುವನಂತಪುರಂನ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದಾರೆ.
ಈ ದ್ರವೀಕೃತ ನೈಸರ್ಗಿಕ ಅನಿಲ(ಎಲ್ ಎನ್ ಜಿ) ಚಾಲಿತ ಬಸ್ ತಿರುವನಂತಪುರಂನಿಂದ ಎರ್ನಾಕುಲಂ ಹಾಗೂ ಎರ್ನಾಕುಲಂನಿಂದ ಕೋಝಿಕೋಡ್ ಮಾರ್ಗದಲ್ಲಿ ಸಂಚರಿಸಲಿದೆ ಎಂದು ವರದಿ ತಿಳಿಸಿದೆ.
ಎರಡು ಮುಖ್ಯ ಉದ್ದೇಶದೊಂದಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಎಲ್ ಎನ್ ಜಿ ಚಾಲಿತ ಬಸ್ ಸೇವೆ ನೀಡಲು ಮುಂದಾಗಿದೆ. ಎಲ್ ಎನ್ ಜಿ ಚಾಲಿತ ಬಸ್ ನಿಂದ ಅಗ್ಗದ ಇಂಧನದಿಂದ ಹೆಚ್ಚುತ್ತಿರುವ ನಷ್ಟವನ್ನು ತಡೆಯುವುದು ಹಾಗೂ ಪರಿಸರಕ್ಕೆ ಕಡಿಮೆ ಪ್ರಮಾಣದ ಹಾನಿಕಾರ ಎಂದು ಪರಿಗಣಿಸಲಾದ ಇಂಧನ ಬಳಕೆಗೆ ಆದ್ಯತೆ ನೀಡುವುದಾಗಿದೆ ಎಂದು ಹೇಳಿದೆ.
ಏನಿದು ಎಲ್ ಎನ್ ಜಿ ಬಸ್:
ಮಿಥೇನ್ ಹಾಗೂ ಈಥೇನ್ ಗಳ ಸಂಯುಕ್ತವಾಗಿರುವ ದ್ರವೀಕೃತ ನೈಸರ್ಗಿಕ ಅನಿಲ ಇದಾಗಿದೆ. ಎಲ್ ಎನ್ ಜಿ ಡೀಸೆಲ್ ಮತ್ತು ಸಿಎನ್ ಜಿ(ಸಾಂದ್ರೀಕೃತ ನೈಸರ್ಗಿಕ ಅನಿಲ)ಗಿಂತಲೂ ಹೆಚ್ಚು ಪರಿಸರ ಸ್ನೇಹಿ ಹಾಗೂ ಮಿತವ್ಯಯಿ ಎಂದು ಪರಿಗಣಿಸಲಾಗಿದೆ. ಅಲ್ಲದೇ ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಜಲಜನಕವನ್ನು ಇಂಧನವಾಗಿ ಹೊಂದಿರುವ ವಾಹನದ ಪ್ರಾತ್ಯಕ್ಷಿಕೆ ನಡೆಸಿತ್ತು. ಈ ವಾಹನವನ್ನು ಇಸ್ರೋ ಮತ್ತು ಟಾಟಾ ಮೋಟಾರ್ಸ್ ಸಂಶೋಧನೆಗಳ ಮೂಲಕ ಜಂಟಿಯಾಗಿ ಅಭಿವೃದ್ಧಿಪಡಿಸಿತ್ತು. ಭವಿಷ್ಯದಲ್ಲಿ ಜಲಜನಕವೇ ಪ್ರಧಾನ ಇಂಧನವಾಗಲಿದ್ದು, ಅದನ್ನು ಆಧರಿಸಿ ವಾಹನಗಳು ಮುಖ್ಯವಾಹಿನಿಗೆ ಬಂದು ನಿಲ್ಲಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.