ತಿರುವನಂತಪುರಂ: ವರುಣನ ಆರ್ಭಟದಿಂದಾಗಿ ಬಿಹಾರ, ಅಸ್ಸಾಂ ತತ್ತರಿಸಿ ಹೋಗಿರುವ ಬೆನ್ನಲ್ಲೇ ಇದೀಗ ಕೇರಳದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಇಡುಕ್ಕಿಯ ಕಲ್ಲಾರುಕುಟ್ಟಿ ಡ್ಯಾಂನ ಒಂದು ಗೇಟನ್ನು ತೆರೆಯಲಾಗಿದ್ದು, ಇದರಿಂದಾಗಿ ಪ್ರವಾಹ ಭೀತಿ ಎದುರಾಗಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಎಎನ್ ಐ ವರದಿ ಪ್ರಕಾರ, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಪೆರಿಯಾರ್ ನದಿ ಕೂಡಾ ತುಂಬಿ ಹರಿಯುತ್ತಿದ್ದು, ಇಡುಕ್ಕಿ, ಎರ್ನಾಕುಲಂನಲ್ಲಿರುವ ಡ್ಯಾಂನ ಗೇಟ್ ನ್ನು ತೆರದು ನೀರು ಬಿಡಲಾಗಿದೆ ಎಂದು ವಿವರಿಸಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದ ಕಾಸರಗೋಡು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೇ ಇಡುಕ್ಕಿ, ಕಣ್ಣೂರು, ಕೋಝಿಕೋಡ್, ಮಲಪ್ಪುರಂ ಮತ್ತು ವಯನಾಡ್ ಪ್ರದೇಶಗಳಲ್ಲಿ ಇರುವ ಜನರಿಗೆ ಸೂಕ್ತ ಸ್ಥಳಕ್ಕೆ ತೆರಳಲು ತಯಾರಾಗಿರುವಂತೆ ಸೂಚನೆ ನೀಡಲಾಗಿದೆ.