ತಿರುವನಂತಪುರ: ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗಿದ್ದ ಕೇರಳದಲ್ಲಿ ಮಳೆ ಕಡಿಮೆಯಾಗಿದ್ದು, ಸ್ವಲ್ಪಮಟ್ಟಿಗೆ ನಿರಾಳವಾಗಿದೆ. ಕೇರಳದ 12 ಜಿಲ್ಲೆಗಳಿಗೆ ನೀಡಲಾಗಿದ್ದ ರೆಡ್ ಅಲರ್ಟ್ ಅನ್ನು ರವಿವಾರ ಹಿಂಪಡೆಯಲಾಗಿದೆ. ಚೆಂಗನ್ನೂರು, ಪಟ್ಟಣಂತಿಟ್ಟ, ಅಲುವಾ ಮತ್ತು ಅಡೂರು ಹೊರತುಪಡಿಸಿ ಉಳಿದೆಡೆ ಮಳೆ ಇಳಿಮುಖವಾಗಿದೆ. ಆದರೆ ನೆರೆ ನೀರು ಮಾತ್ರ ಇನ್ನೂ ಇಳಿದಿಲ್ಲ. ಕಲ್ಲಿಕೋಟೆ, ಕಣ್ಣೂರು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಾತ್ರ ಧಾರಾಕಾರ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಸಾಂಕ್ರಾಮಿಕ ರೋಗ ಭೀತಿ
ಇನ್ನೊಂದೆಡೆ, ಪ್ರವಾಹ ಪೀಡಿತರ ಶಿಬಿರದಲ್ಲಿ ಇದೀಗ ಸಾಂಕ್ರಾಮಿಕ ರೋಗಗಳು ಉಂಟಾಗುವ ಭೀತಿ ಎದುರಾಗಿದೆ. ಅಲುವಾ ಪಟ್ಟಣದಲ್ಲಿರುವ ಶಿಬಿರವೊಂದರಲ್ಲಿ ಮೂವರಿಗೆ ಸೀತಾಳ ಸಿಡುಬು (ಚಿಕನ್‌ಪಾಕ್ಸ್) ಪತ್ತೆಯಾಗಿದೆ. ಈ ಮೂವರನ್ನೂ ಪ್ರತ್ಯೇಕವಾಗಿ ಇರಿಸಲಾಗಿದ್ದು, ರೋಗಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.