ತಿರುವನಂತಪುರಂ: ಶಬರಿ ಮಲೆ ಏರಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಬೇಕೆಂಬ ವಿವಾದಾತ್ಮಕ ಚಳುವಳಿಗಾರ್ತಿ ರೆಹನಾ ಫಾತಿಮಾ ಅವರ ಪ್ರಯತ್ನಕ್ಕೆ ಕೇರಳ ಸರಕಾರ ಅನುಮತಿ ನಿರಾಕರಿಸಿದೆ. ಈ ಬಾರಿಯೂ ಇರುಮುಡಿ ಧರಿಸಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಫಾತಿಮಾ ನಿರ್ಧರಿಸಿದ್ದರು ಮತ್ತು ಈ ಸಂದರ್ಭದಲ್ಲಿ ತನಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಅವರು ಕೇರಳ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣ ಮತ್ತೆ ಸುಪ್ರೀಂಕೋರ್ಟಿನ ಅಂಗಳದಲ್ಲಿರುವುದರಿಂದ ಅವರಿಗೆ ಪೊಲೀಸ್ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಸರಕಾರ ತಿಳಿಸಿದೆ.
30 ವರ್ಷ ಪ್ರಾಯದ ರೆಹನಾ ಫಾತಿಮಾ ಅವರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಶಬರಿಮಲೆಗೆ ಹೋಗುವ ವ್ಯರ್ಥ ಪ್ರಯತ್ನ ನಡೆಸಿದ್ದರು. ಆ ಸಂದರ್ಭದಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು. ಆದರೆ ಆಕೆ ಮಲೆಗ ಹೋಗುವ ಮಾರ್ಗ ಮಧ್ಯದಲ್ಲಿ ಭಾರೀ ಪ್ರತಿಭಟನೆ ಎದುರಾಗಿದ್ದರಿಂದ ಶಬರಿ ಮಲೆ ಏರಿ ಅಯ್ಯಪ್ಪ ದರ್ಶನ ಪಡೆಯುವ ಫಾತಿಮಾ ಅವರ ಇಚ್ಛೆ ಪೂರ್ಣಗೊಂಡಿರಲಿಲ್ಲ.
ಈ ಬಾರಿಯ ಶಬರಿ ಮಲೆ ಯಾತ್ರೆ ನವಂಬರ್ 17ರಿಂದ ಪ್ರಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಮತ್ತೆ ಶಬರಿ ಮಲೆಗೆ ಮಾಲಾಧಾರಿಯಾಗಿ ಹೋಗುವ ಉದ್ದೇಶದಿಂದ ಫಾತಿಮಾ ಅವರು ಪೊಲೀಸ್ ರಕ್ಷಣೆ ಕೋರಿ ಈ ಮನವಿಯನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.
ಶಬರಿ ಮಲೆಗೆ 10 ರಿಂ 50 ವರ್ಷ ಪ್ರಾಯದೊಳಗಿನ ಮಹಿಳೆಯರು ಪ್ರವೇಶಿಸಬಾರದೆಂದು ವಿಧಿಸಲಾಗಿದ್ದ ಧಾರ್ಮಿಕ ನಿರ್ಬಂಧವನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ತೆಗದುಹಾಕಿತ್ತು. ಮತ್ತು ಸುಪ್ರೀಂಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳನ್ನು ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಸುಪ್ರೀಂಕೋರ್ಟಿನ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತಾದರೂ ಈ ಹಿಂದೆ ನೀಡಿದ್ದ ತನ್ನ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಆದರೆ ಸುಪ್ರೀಂ ಕೋರ್ಟಿನ ಈ ನಿರ್ಧಾರದ ಬಳಿಕ ಕೇರಳ ಸರಕಾರ ಎಚ್ಚರಿಕೆಯ ನಡೆ ಇರಿಸಿದ್ದು. ಶಬರಿ ಮಲೆ ಎಂಬುದು ಒಂದು ಧಾರ್ಮಿಕ ಶ್ರದ್ಧಾಕೇಂದ್ರವೇ ಹೊರತು ಚಳುವಳಿಗಾಗಿ ಇರುವ ಸ್ಥಳವಲ್ಲ ಎಂದು ಹೇಳುವ ಮೂಲಕ ಶಬರಿಮಲೆಗೆ ನಿರ್ಧಿಷ್ಟ ವಯೋಮಾನ ನಿಷೇಧಿತ ಮಹಿಳೆಯರ ಪ್ರಚಾರ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿರಿಸಿದೆ.
ಶಬರಿ ಮಲೆಗೆ 10 ರಿಂದ 50 ವರ್ಷ ಪ್ರಾಯದೊಳಗಿನ ಮಹಿಳೆಯರ ಪ್ರವೇಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಇದೀಗ ಸುಪ್ರೀಂ ಕೋರ್ಟ್ ಮರುಪರಿಶೀಲಿಸುತ್ತಿರುವುದರಿಂದ ಅಲ್ಲಿಗೆ ಹೋಗಬೇಕೆಂದು ಬಯಸುವ ನಿಷೇಧಿತ ಪ್ರಾಯವರ್ಗದೊಳಗಿನ ಮಹಿಳೆಯರಿಗೆ ರಕ್ಷಣೆ ಒದಗಿಸಲು ಸಾಧ್ಯವಿಲ್ಲ. ಆದರೆ ಫಾತಿಮಾ ಅವರು ನ್ಯಾಯಾಲಯದ ಆದೇಶವನ್ನು ಪಡೆದುಕೊಂಡು ಬಂದಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸುವ ವಿಚಾರವನ್ನು ಪರಿಶೀಲಿಸಬಹುದು ಎಂದು ಕೇರಳ ಸರಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಯ್ಯಪ್ಪ ಭಕ್ತರು ಮತ್ತು ಶಬರಿಮಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆಂಬ ಆರೋಪದಲ್ಲಿ ರೂಪದರ್ಶಿ ಮತ್ತು ಚಳುವಳಿಗಾರ್ತಿಯಾಗಿರುವ ರೆಹನಾ ಫಾತಿಮಾ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಇನ್ನು ನೈತಿಕ ಪೊಲೀಸ್ ಗಿರಿ ವಿರೋಧಿಸಿ ಕೇರಳದಲ್ಲಿ 2014ರಲ್ಲಿ ನಡೆದಿದ್ದ ಕಿಸ್ ಆಫ್ ಲವ್ ಪ್ರತಿಭಟನೆಯಲ್ಲಿಯೂ ಸಹ ಫಾತಿಮಾ ಅವರು ಭಾಗವಹಿಸಿದ್ದರು.