ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಭೂಗತರಾಗಿದ್ದ ಇಬ್ಬರು ನಕ್ಸಲರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪಿಯ ಬಿ.ಜಿ. ಕೃಷ್ಣಮೂರ್ತಿ ಹಾಗೂ ಕಳಸ ತಾಲ್ಲೂಕು ಮಾವಿನಕೆರೆ ಗ್ರಾಮದ ಸಾವಿತ್ರಿ ಬಂಧಿತ ನಕ್ಸಲರಾಗಿದ್ದು, ಕೇರಳ ರಾಜ್ಯದ ಸುಲ್ತಾನ್‍ಭತ್ತೇರಿ ಎಂಬಲ್ಲಿ ಬುಧವಾರ ಮುಂಜಾನೆ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಬಿ.ಜಿ. ಕೃಷ್ಣಮೂರ್ತಿ ಸಕ್ರೀಯರಾಗಿದ್ದರು. ಕಳಸ ತಾಲ್ಲೂಕು ಸಾವಿತ್ರಿ ಅವರು ನಕ್ಸಲ್ ಚಳವಳಿ ಸೇರಿಕೊಂಡಿದ್ದರು ಎನ್ನಲಾಗುತ್ತಿದೆ.
ಮಲೆನಾಡಿನಲ್ಲಿ ನಕ್ಸಲ್ ಚಳವಳಿಗೆ ಹಿನ್ನಡೆಯಾದ ಬಳಿಕ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಹೊರ ರಾಜ್ಯಗಳಲ್ಲಿನ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡು ಭೂಗತರಾಗಿದ್ದಾರೆ ಎನ್ನಲಾಗುತ್ತಿತ್ತಾದರೂ ಇದುವರೆಗೂ ಈ ಇಬ್ಬರ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. 2018ರಲ್ಲಿ ಕೃಷ್ಣಮೂರ್ತಿ ಅವರ ತಂದೆ ಗೋಪಾಲ್‍ರಾವ್ ನಿಧನರಾಗಿದ್ದು, ಈ ವೇಳೆಯೂ ಕೃಷ್ಣಮೂರ್ತಿ ಅವರ ತಮ್ಮ ತಂದೆ ಮುಖ ನೋಡಲು ಬಂದಿರಲಿಲ್ಲ. ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 53 ಪ್ರಕರಣಗಳು ಹಾಗೂ ಸಾವಿತ್ರಿ ವಿರುದ್ಧ 22 ಪ್ರಕರಣಗಳು ಇವೆ ಎಂದು ಹೇಳಲಾಗುತ್ತಿದೆ.
ಸದ್ಯ ಜಿಲ್ಲೆಯ ಇಬ್ಬರು ನಕ್ಸಲ್ ಚಳವಳಿಯ ಮುಖಂಡರನ್ನು ಕೇರಳದಲ್ಲಿ ಅಲ್ಲಿನ ಸುಲ್ತಾನ್‍ಭತ್ತೇರಿ ಪೊಲೀಸರು ಬಂಧಿಸಿದ್ದಾರೆಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ಚಿಕ್ಕಮಗಳೂರು ಎಸ್.ಪಿ.ಎಂ.ಎಚ್.ಅಕ್ಷಯ್ ತಿಳಿಸಿ ದ್ದಾರೆ.