Advertisement
ವಿಧಾನಸಭೆಯಲ್ಲಿ ಕಸ್ತೂರಿರಂಗನ್ ವರದಿ ಕುರಿತಂತೆ ನಿಯಮ 69ರಡಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮಂಡಿಸಿದ್ದ ಪ್ರಸ್ತಾವಕ್ಕೆ ಸರಕಾರದ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಬುಧವಾರ ಸಚಿವ ಸಂಪುಟ ಉಪಸಮಿತಿ ಸದಸ್ಯರು ಹಾಗೂ ಪಶ್ಚಿಮಘಟ್ಟ ಭಾಗದ ಶಾಸಕರ ಸಭೆ ಕರೆಯಲಾಗುವುದು. ಸಭೆಗೆ ಅಧಿಕಾರಿಗಳನ್ನೂ ಆಹ್ವಾನಿಸಲಾಗುವುದು. ಈ ಸಭೆಯಲ್ಲಿ ಯಾವ ರೀತಿ ಆಕ್ಷೇಪಣೆ ಸಲ್ಲಿಸಬೇಕು ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಜಾರಿ ಕುರಿತ ಕೇಂದ್ರದ ಕರಡು ಅಧಿಸೂಚನೆಗೆ ಆಕ್ಷೇಪ ಸಲ್ಲಿಸುವಲ್ಲಿ ಸರಕಾರ ಎಡವಿದೆ ಎಂದು ಆರೋಪಿಸಿದ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ, ಡಿ.ಎನ್. ಜೀವರಾಜ್, ಅಪ್ಪಚ್ಚು ರಂಜನ್, ಸುನೀಲ್‌ಕುಮಾರ್, ಎಸ್. ಅಂಗಾರ, ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್‌ನ ಬಿ.ಬಿ. ನಿಂಗಯ್ಯ ಮತ್ತು ಎಚ್.ಕೆ.ಕುಮಾರಸ್ವಾಮಿ, ಕೇರಳ ಮಾದರಿಯಲ್ಲಿ ಆಕ್ಷೇಪ ಸಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಿದರೂ ಅದನ್ನು ಏಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿದರು.
Related Articles
Advertisement
ಈ ಆಕ್ಷೇಪಣೆಯನ್ನು ಅಂಗೀಕರಿಸಿದ್ದ ಕೇಂದ್ರ ಸರಕಾರ ಕಸ್ತೂರಿರಂಗನ್ ವರದಿಯಿಂದ ಕೇರಳವನ್ನು ಕೈಬಿಟ್ಟಿತ್ತು. ಅಲ್ಲದೆ, ಇದೇ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೂ ಸೂಚಿಸಿತ್ತು. ಇನ್ನೊಂದೆಡೆ ಪಶ್ಚಿಮ ಘಟ್ಟ ಭಾಗದ ಶಾಸಕರೂ ಗ್ರಾಮಸಭೆಗಳನ್ನು ನಡೆಸಿ ಮತ್ತು ಸ್ಥಳೀಯವಾಗಿ ಸರ್ವೇ ಮಾಡಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಆದರೂ ರಾಜ್ಯ ಸರಕಾರ ಅದನ್ನು ಪರಿಗಣಿಸದೆ ಉಪಗ್ರಹ ಸರ್ವೇ ಆಧರಿಸಿ ಮತ್ತು ಮಂತ್ರಿಗಳ ವರದಿಯನ್ವಯ ಆಕ್ಷೇಪಣೆ ಸಲ್ಲಿಸಿದ್ದೇ ರಾಜ್ಯದ ಆಕ್ಷೇಪಣೆಯನ್ನು ಕೇಂದ್ರ ಸರಕಾರ ಪರಿಗಣಿಸಲಿಲ್ಲ ಎಂದು ಆರೋಪಿಸಿದರು.
ಕೇರಳ ಸರಕಾರ ಆಕ್ಷೇಪಣೆ ಸಲ್ಲಿಸಿದ ಬಳಿಕ ಅಲ್ಲಿನ ಮುಖ್ಯಮಂತ್ರಿಗಳು ಹಲವು ಬಾರಿ ಪ್ರಧಾನಿ ಮತ್ತು ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಕೇರಳವನ್ನು ಕಸ್ತೂರಿರಂಗನ್ ವರದಿಯಿಂದ ಕೈಬಿಡುವಂತೆ ಕೋರಿದ್ದರು. ಆದರೆ, ನಮ್ಮ ಮುಖ್ಯಮಂತ್ರಿಗಳು ಪ್ರತಿಯೊಂದಕ್ಕೂ ಕೇಂದ್ರ ಸರಕಾರ ಮತ್ತು ಪ್ರಧಾನಿಯವರನ್ನು ದೂರುತ್ತಾ ಕಾಲ ಕಳೆದರೇ ಹೊರತು ಯಾವತ್ತೂ ರಾಜ್ಯದ ಪರವಾಗಿ ಪ್ರಧಾನಿ ಮತ್ತು ಪರಿಸರ ಖಾತೆ ಸಚಿವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ ಎಂದರು.
ಒಂದು ವೇಳೆ ಈ ಬಾರಿಯೂ ರಾಜ್ಯ ಸರಕಾರ ಆಕ್ಷೇಪ ಸಲ್ಲಿಸುವಲ್ಲಿ ಎಡವಿದರೆ ಕಸ್ತೂರಿರಂಗನ್ ವರದಿ ಕುರಿತು ಅಂತಿಮ ಅಧಿಸೂಚನೆ ಹೊರಡಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಕೇಂದ್ರ ಸರಕಾರ ಇದೆ. ಒಂದು ವೇಳೆ ಅಂತಿಮ ಅಧಿಸೂಚನೆ ಹೊರಡಿಸಿದರೆ ಕಸ್ತೂರಿರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾಗುವುದರ ಜತೆಗೆ ಅದರ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಪಶ್ಚಿಮಘಟ್ಟದ ಅನೇಕ ಹಳ್ಳಿಗಳ ಜತೆಗೆ ಕೆಲವು ಪಟ್ಟಣಗಳೂ ಈ ವ್ಯಾಪ್ತಿಗೆ ಬಂದು ಅಭಿವೃದ್ಧಿ ಕುಂಠಿತವಾಗಲಿದೆ. ಜನರು ತಮ್ಮ ಮನೆ, ಆಸ್ತಿ ಕಳೆದುಕೊಳ್ಳಲಿದ್ದಾರೆ.