ಸನಾ(ಯೆಮೆನ್): ಯೆಮೆನ್ ಪ್ರಜೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ:Team India; ಆಸೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಸ್ಟಾರ್
ಯೆಮೆನ್ ಪ್ರಜೆ ತಲಾಲ್ ಅಬ್ದೊ ಮಹ್ದಿಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ 2017ರಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಳು ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಅರಬ್ ದೇಶದಲ್ಲಿ ಯುದ್ಧ ನಡೆಯುತ್ತಿದ್ದ ಪರಿಣಾಮ ಭಾರತೀಯ ಪ್ರಜೆಗಳಿಗೆ ಯೆಮೆನ್ ಗೆ ಭೇಟಿ ನೀಡದಂತೆ ನಿಷೇಧ ಹೇರಿದ್ದರಿಂದ ಪ್ರಿಯಾ ತಾಯಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ತನಗೆ ಯೆಮೆನ್ ಗೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗುರುವಾರ, ಪ್ರಿಯಾ ತಾಯಿ ಯೆಮೆನ್ ಗೆ ತೆರಳುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಅರ್ಜಿದಾರರ(ಪ್ರಿಯಾ ತಾಯಿ) ಪರ ವಕೀಲರಾದ ಸುಭಾಶ್ ಚಂದ್ರನ್ ಕೆಆರ್ ಅವರು ತನ್ನ ಕಕ್ಷಿದಾರರು ಮಗಳನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಕೊಲೆಗೀಡಾದ ವ್ಯಕ್ತಿಯ ಕುಟುಂಬದ ಜತೆ ನೇರವಾಗಿ ಮಾತುಕತೆ ನಡೆಸುವುದಾಗಿದೆ. ಈ ನಿಟ್ಟಿನಲ್ಲಿ ಕಕ್ಷಿದಾರರು ಯೆಮೆನ್ ಗೆ ಖುದ್ದು ಭೇಟಿ ನೀಡಬೇಕಾಗುತ್ತದೆ ಎಂದು ವಾದಿಸಿದ್ದರು. ಆದರೆ ಪ್ರಯಾಣ ನಿಷೇಧದಿಂದಾಗಿ ಮಾತುಕತೆ ಪ್ರಕ್ರಿಯೆಗೆ ಅಡ್ಡಿಯಾದಂತಾಗಿದೆ.
ಏತನ್ಮಧ್ಯೆ ಪ್ರಿಯಾ ತಾಯಿಗೆ ಯೆಮೆನ್ ಗೆ ಪ್ರಯಾಣಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕೆಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. “ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಯೆಮೆನ್ ಪ್ರಯಾಣದ ಮೇಲಿನ ನಿಷೇಧವನ್ನು ಸಡಿಲಿಕೆ ಮಾಡುವ ಸಾಧ್ಯತೆ ಇದ್ದಿರುವುದಾಗಿ ಕೇಂದ್ರ ಪರ ವಕೀಲರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ತಲಾಲ್ ಅಬ್ಡೊ ತನ್ನ ಪಾಸ್ ಪೋರ್ಟ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದ, ಅಷ್ಟೇ ಅಲ್ಲ ತುಂಬಾ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ನಾನು ನನ್ನ ಪಾಸ್ ಪೋರ್ಟ್ ಪಡೆದುಕೊಳ್ಳಲು ಆತನಿಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿದ್ದೆ ವಿನಃ ಕೊಲ್ಲುವ ಉದ್ದೇಶ ಇರಲಿಲ್ಲ ಎಂಬುದು ನಿಮಿಷಾ ಪ್ರಿಯಾ ವಾದವಾಗಿದೆ. ಏತನ್ಮಧ್ಯೆ ನಮಗೆ 70 ಲಕ್ಷ ರೂಪಾಯಿ ಪರಿಹಾರ ನೀಡಿದರೆ ನಿಮಿಷಾಳನ್ನು ಕ್ಷಮಿಸುವುದಾಗಿ ತಲಾಲ್ ಕುಟುಂಬ ಸದಸ್ಯರು ತಿಳಿಸಿದ್ದರು. ಈ ನಿಟ್ಟಿನಲ್ಲಿ ಪ್ರಿಯಾ ತಾಯಿ ಯೆಮೆನ್ ಗೆ ತೆರಳಿ ಮಾತುಕತೆ ನಡೆಸಲು ಸಿದ್ಧತೆ ನಡೆಸಿದ್ದಾರೆ.