Advertisement

29 ವರ್ಷ ಬಳಿಕ ವಿವಾಹ ಮರುನೋಂದಣಿ ಮಾಡಿಕೊಂಡ ದಂಪತಿ!

01:24 PM Mar 09, 2023 | Team Udayavani |

ತಿರುವನಂತಪುರ: ಕೇರಳದ ಕಾಸರಗೋಡಿನ ಈ ಮುಸ್ಲಿಂ ದಂಪತಿ ಮದುವೆಯಾಗಿ ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೊಮ್ಮೆ ವಿವಾಹವಾಗಿದ್ದಾರೆ!

Advertisement

ನಟ-ವಕೀಲ ಸಿ.ಶುಕೂರ್‌ ಮತ್ತು ಡಾ.ಶೀನಾ 2ನೇ ಬಾರಿಗೆ ವಿವಾಹವಾದ ದಂಪತಿ. ತಮ್ಮ ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ದಂಪತಿ ಹೊಸದಾಗಿ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಇಂಥದ್ದೊಂದು ಪ್ರಕರಣ ನಡೆದಿದ್ದು ಇದೇ ಮೊದಲು.

ತಮ್ಮ ಮರುವಿವಾಹಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನೇ ಇವರು ಆಯ್ಕೆ ಮಾಡಿಕೊಂಡಿದ್ದು ಮತ್ತೂಂದು ವಿಶೇಷ. ಶುಕೂರ್‌ ಮತ್ತು ಡಾ.ಶೀನಾ 1994ರ ಅಕ್ಟೋಬರ್‌ನಲ್ಲೇ ವಿವಾಹವಾಗಿದ್ದರು. ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಗಂಡು ಮಕ್ಕಳಿಲ್ಲ. ಮುಸ್ಲಿಂ ಉತ್ತರಾಧಿಕಾರ ಕಾನೂನಿನಲ್ಲಿ ಇರುವ ಕೆಲವು ಷರತ್ತುಗಳೇ ಅವರು ತಮ್ಮ ಮದುವೆಯನ್ನು ಮರುನೋಂದಣಿ ಮಾಡಿಕೊಳ್ಳಲು ಕಾರಣ!

ಮೊದಲಿಗೆ ಅವರು ಶರಿಯಾ ಕಾನೂನಿನ ಪ್ರಕಾರ ಮದುವೆಯಾಗಿದ್ದರು. ಆದರೆ, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಅಪ್ಪನ ಆಸ್ತಿಯ ಮೂರನೇ ಎರಡು ಭಾಗವಷ್ಟೇ ಅವರ ಹೆಣ್ಣುಮಕ್ಕಳಿಗೆ ಸಲ್ಲುತ್ತದೆ. ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಉಳಿದ ಆಸ್ತಿಯೆಲ್ಲ ಆ ವ್ಯಕ್ತಿಯ ಸಹೋದರರ ಪಾಲಾಗುತ್ತದೆ. ಆದರೆ, ತಾವು ತಮ್ಮ ಮಕ್ಕಳಿಗಾಗಿ ದುಡಿದು, ಉಳಿತಾಯ ಮಾಡಿಟ್ಟ ಆಸ್ತಿಯು ಬೇರೆಯವರ ಪಾಲಾಗುವುದು ಶುಕೂರ್‌ ಮತ್ತು ಶೀನಾ ದಂಪತಿಗೆ ಇಷ್ಟವಿಲ್ಲ. ಹಾಗಾಗಿ, ಎಲ್ಲ ಆಸ್ತಿಯೂ ತಮ್ಮ ಹೆಣ್ಣುಮಕ್ಕಳಿಗೇ ಸಿಗಲಿ ಎಂಬ ಕಾರಣಕ್ಕೆ ದಂಪತಿ, ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ಮರುನೋಂದಣಿ ಮಾಡಿಕೊಂಡಿದ್ದಾರೆ.

ಮಕ್ಕಳ ಭವಿಷ್ಯವೇ ಮುಖ್ಯ:
ಈ ಕುರಿತು ಮಾತನಾಡಿರುವ ಶುಕೂರ್‌, “ನಮ್ಮ ಮಕ್ಕಳ ಆತ್ಮವಿಶ್ವಾಸ ಮತ್ತು ಘನತೆಯನ್ನು ಅಲ್ಲಾಹನು ಹೆಚ್ಚಿಸಲಿ ಎಂದು ಪ್ರಾರ್ಥಿಸುತ್ತೇನೆ. ಭಗವನಂತ ಮತ್ತು ಸಂವಿಧಾನದ ಎದುರು ಎಲ್ಲರೂ ಸಮಾನರು. ನಾವಿಲ್ಲಿ ಶರಿಯಾ ಕಾನೂನನ್ನು ನಿರಾಕರಿಸುತ್ತಿಲ್ಲ. ಬದಲಿಗೆ ನಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಸಂರಕ್ಷಿಸುತ್ತಿದ್ದೇವೆ’ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next