ನವದೆಹಲಿ: ಯುದ್ಧಗ್ರಸ್ಥ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ಕ್ರೌರ್ಯವನ್ನು ಟೀಕಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕೇರಳದ ಮಾಜಿ ಸಚಿವ, ಮುಸ್ಲಿಂ ಲೀಗ್ ಪಕ್ಷದ ಶಾಸಕ ಎಂ.ಕೆ.ಮುನೀರ್ ಅವರಿಗೆ ಕೊಲೆ ಬೆದರಿಕೆಯ ಅನಾಮಧೇಯ ಪತ್ರವೊಂದು ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಆ.27: ಸಂಜೆ 4 ಗಂಟೆಗೆ ಸಮಾಜ ಸೇವಕ ರವಿ ಕಟಪಾಡಿ ಜತೆ ಉದಯವಾಣಿ ಫೇಸ್ ಬುಕ್ ಲೈವ್
“24 ಗಂಟೆಯೊಳಗೆ ತಾಲಿಬಾನ್ ವಿರುದ್ಧದ ಫೇಸ್ ಬುಕ್ ಪೋಸ್ಟ್ ಅನ್ನು ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ಶಿಕ್ಷಕ ಜೋಸೆಫ್ ಸರ್ ಅವರ ಹಸ್ತವನ್ನು ಕತ್ತರಿಸಿ ಹಾಕಿದ ಸ್ಥಿತಿಯನ್ನು ನೀವು (ಶಾಸಕ ಮುನೀರ್) ಎದುರಿಸಬೇಕಾಗುತ್ತದೆ ಎಚ್ಚರ” ಎಂದು ಕೊಲೆ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ವಿವರಿಸಿದೆ.
ಪಿಟಿಐ ವರದಿ ಪ್ರಕಾರ, ಬೆದರಿಕೆ ಪತ್ರವನ್ನು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರದೇಶದಿಂದ ಪೋಸ್ಟ್ ಮಾಡಲಾಗಿದೆ ಎಂದು ತಿಳಿಸಿದೆ. ಏತನ್ಮಧ್ಯೆ ತಾಲಿಬಾನ್ ವಿರುದ್ಧದ ತನ್ನ ನಿಲುವು ಸ್ಪಷ್ಟವಾಗಿರುವುದಾಗಿ ಶಾಸಕ ಮುನೀರ್ ತಿಳಿಸಿದ್ದಾರೆ. ಶಾಸಕ ಮುನೀರ್ ಅವರು ಆಗಸ್ಟ್ 17ರಂದು ತಮ್ಮ ಫೇಸ್ ಬುಕ್ ನಲ್ಲಿ ತಾಲಿಬಾನ್ ಟೀಕಿಸಿ ಬರೆದ ಪೋಸ್ಟ್ ಅನ್ನು ಹಾಕಿರುವುದಾಗಿ ವರದಿ ವಿವರಿಸಿದೆ.
ಮುನೀರ್ ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿತ್ತು?
“ತಾಲಿಬಾನ್ ತಾರತಮ್ಮ ಧೋರಣೆಯ ಪ್ರತಿಗಾಮಿ ರಾಜಕೀಯ ನಿಲುವನ್ನು ಹೊಂದಿದೆ. ತಾಲಿಬಾನ್ ಉಗ್ರ ಮೂಲಭೂತವಾದ ಹೊಂದಿರುವ, ಮಾನವ ಹಕ್ಕುಗಳನ್ನು ಗೌರವಿಸದ ಸಂಘಟನೆಯಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ತೀವ್ರವಾದ ಮಾನವ ವಿರೋಧಿ ಮತ್ತು ಮಹಿಳಾ ವಿರೋಧಿ ರಾಜಕೀಯದ ಸಿದ್ಧಾಂತ ಹೊಂದಿದೆ. ಈ ಎಲ್ಲಾ ಸಿದ್ಧಾಂತಗಳು ಅಪಾಯಕಾರಿ ಮತ್ತು ಜನರ ಮುಕ್ತ ಜೀವನಕ್ಕೆ ಅಡ್ಡಿಯನ್ನುಂಟು ಮಾಡಲಿದೆ. ಯಾವುದೇ ಹಂತದ ನಂಬಿಕೆಯಾಗಲಿ, ತಾಲಿಬಾನ್ ಅಮಾನವೀಯ ಸಂಘಟನೆ ಹಾಗೂ ಇದನ್ನು ವಿರೋಧಿಸಬೇಕಾದ ಅಗತ್ಯವಿದೆ” ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.