ತಿರುವನಂತಪುರಂ:ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿರುವುದಾಗಿ ಶಂಕಿಸಲಾಗಿರುವ ಕೇರಳದ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಇದರೊಂದಿಗೆ 2016ರ ಜೂನ್ ನಲ್ಲಿ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿಯಲ್ಲಿ ನಾಲ್ವರು ಸಾವನ್ನಪ್ಪಿದಂತಾಗಿದೆ.
ಕಾಸರಗೋಡಿನ ಶಾಜೀರ್ ಎಂ ಅಬ್ದುಲ್ಲಾ ಎಂಬ ಯುವಕನ ಮೃತದೇಹದ ಫೋಟೋಗಳನ್ನು ಕಾಸರಗೋಡಿನ ಸಾಮಾಜಿಕ ಕಾರ್ಯಕರ್ತ ಬಿಸಿ ಅಬ್ದುಲ್ ರೆಹಮಾನ್ ಎಂಬವರ ವಾಟ್ಟ್ ಆಪ್ ಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಫೋಟೋ ಮತ್ತು ಮಾಹಿತಿಯ ಸಂದೇಶವನ್ನು ತನಗೆ ಕಾಸರಗೋಡಿನ ಮತ್ತೊಬ್ಬ ವ್ಯಕ್ತಿ ಫಾರ್ವರ್ಡ್ ಮಾಡಿರುವುದಾಗಿ ರೆಹಮಾನ್ ತಿಳಿಸಿದ್ದು, ಮೃತ ಯುವಕ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿರಬೇಕೆಂದು ಶಂಕಿಸಿರುವುದಾಗಿ ವರದಿ ವಿವರಿಸಿದೆ.
ಶಾಜೀರ್ ಎಂ ಅಬ್ದುಲ್ಲಾ ಬಗ್ಗೆ ನನಗೆ ಬೇರೆ ಯಾವುದೇ ಮಾಹಿತಿ ಗೊತ್ತಿಲ್ಲ. ಆತ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ಸಂದೇಶದಲ್ಲಿ ತಿಳಿಸಿರುವುದಾಗಿ ರೆಹಮಾನ್ ಪಿಟಿಐ ಜತೆ ಮಾತನಾಡುತ್ತ ಹೇಳಿದ್ದಾರೆ. ಆದರೆ ಸಂದೇಶದಲ್ಲಿ ಆತ ಯಾವ ಕಾರಣದಿಂದ ಸಾವನ್ನಪ್ಪಿದ್ದಾನೆ, ಯಾವ ದಿನಾಂಕ ಎಂಬುದು ನಮೂದಿಸಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಕೋಝಿಕೋಡ್ ಪೊಲೀಸರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ತಮಗೆ ಅಬ್ದುಲ್ಲಾ ಸಾವಿನ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶಾಜೀರ್ ಕೋಝಿಕೋಡ್ ನ ಚೇವಾಯೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂಝಿಕ್ಕಲ್ ನಿವಾಸಿ. ಆತ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಆತ ಉದ್ಯೋಗ ನಿಮಿತ್ತ ಮಧ್ಯ ಏಷ್ಯಾಕ್ಕೆ ತೆರಳಿದ್ದ. ನಮ್ಮಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.