ಹೊಸದಿಲ್ಲಿ : ಕೇರಳದ ಲವ್ ಜಿಹಾದ್ ಕೇಸಿಗೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಿಂದಾಗಿ ಬಹು ಸಮಯದಿಂದ ಸುದ್ದಿಯಲ್ಲಿರುವ ಹದಿಯಾ ಸುಪ್ರೀಂ ಕೋರ್ಟಿಗೆ ಬರೆದು ಕೊಟ್ಟಿರುವ ಅಫಿದಾವಿತ್‌ನಲ್ಲಿ “ನಾನೋರ್ವ ಮುಸ್ಲಿಮ್ ಮತ್ತು ನಾನು ಮುಸ್ಲಿಮಳಾಗಿಯೇ ಉಳಿಯ ಬಯಸುತ್ತೇನೆ’ ಎಂದು ಹೇಳಿದ್ದಾಳೆ.
“ನಾನು ಶಫೀನ್ ಜಹಾನ್ ಅವರ ಪತ್ನಿಯಾಗಿಯೇ ಉಳಿಯಲು ಬಯಸುತ್ತೇನೆ’ ಎಂದೂ ಹದಿಯಾ ತನ್ನ ಅಫಿದಾವಿತ್‌ನಲ್ಲಿ ಹೇಳಿದ್ದಾಳೆ.
2017ರ ನವೆಂಬರ್‌ನಲ್ಲಿ ಹದಿಯಾ “ನಾನೋರ್ವ ಮುಸ್ಲಿಮ್; ನಾನು ನನ್ನ ಪತಿಯ ಜತೆಗೆ ಹೋಗಲು ಬಯಸುತ್ತೇನೆ; ಯಾರೂ ನನ್ನನ್ನು ಇಸ್ಲಾಮ್ ಗೆ ಬಲವಂತದಿಂದ ಮತಾಂತರ ಮಾಡಿಲ್ಲ’ ಎಂದು ಹೇಳಿದ್ದಳು.
ಆ ನಡುವೆ 2017ರ ನವೆಂಬರ್ 27ರಂದು ಸುಪ್ರೀಂ ಕೋರ್ಟ್, “ಹದಿಯಾ ತನ್ನ ಹಿಂದಿನ ಹೆಸರಿನಲ್ಲಿ ಸೇಲಂ ಮೆಡಿಕಲ್ ಕಾಲೇಜಿನಲ್ಲಿ ತನ್ನ ಹೋಮಿಯೋಪತಿ ಅಧ್ಯಯನವನ್ನು ಮುಂದುವರಿಸಬಹುದು’ ಎಂದು ಹೇಳಿತ್ತು.
ಹದಿಯಾ ಜನ್ಮತಃ ಹಿಂದು; ಆಕೆಯ ಮೂಲ ಹೆಸರು ಅಖೀಲಾ ಅಶೋಕನ್. ಆಕೆಯ ಮದುವೆಗೆ ಹಲವು ತಿಂಗಳ ಮುನ್ನವೇ ಆಕೆ ಇಸ್ಲಾಂ ಗೆ ಮತಾಂತರಗೊಂಡಿದ್ದಳು.
ತನಗೆ ತನ್ನ ಪತಿಯ ಜತೆಗೆ ಹೋಗಲು ಅನುಮತಿ ನೀಡಬೇಕು ಎಂದು ಹದಿಯಾ ಸಿಜೆಐ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಬಿನ್ನವಿಸಿಕೊಂಡಾಗ, ಪೀಠವು ಆಕೆಯೊಡನೆ ಸಂವಹನ ನಡೆಸಿತ್ತು.
ಅದೇ ಸಂದರ್ಭದಲ್ಲಿ ನ್ಯಾಯಾಲಯ ಹದಿಯಾಳನ್ನು ಮತ್ತೆ ಸೇರಿಸಿಕೊಳ್ಳುವಂತೆ ಕಾಲೇಜು ಮತ್ತು ವಿವಿಗೆ ಆದೇಶ ನೀಡಿತ್ತಲ್ಲದೆ ಆಕೆಗೆ ಹಾಸ್ಟೆಲ್ ಸೌಕರ್ಯ ಕೊಡುವಂತೆ ಸೂಚಿಸಿತು.
ಶಫೀನ್ ಜಹಾನ್ ಜತೆಗಿನ ಮದುವೆಯನ್ನು ಕೇರಳ ಹೈಕೋರ್ಟ್ 2017ರ ಮೇ 29ರಂದು ರದ್ದು ಮಾಡಿದ ಬಳಿಕ ಸರಿಸುಮಾರು ಆರು ತಿಂಗಳ ಕಾಲ ಹದಿಯಾ ತನ್ನ ಹೆತ್ತವರ ವಶದಲ್ಲಿದ್ದಳು.