ತಿರುವನಂತಪುರ:ಕೇರಳದ ವಿವಿಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ಈಗ ಅಂಗೀಕಾರಕ್ಕಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕಳುಹಿಸಿಕೊಡಲಾಗಿದೆ. ಈಗಾಗಲೇ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಕೇರಳ ಕಲಾಮಂಡಲಂ ಡೀಮ್ಡ್ ವಿವಿಯ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದು ಹಾಕಲಾಗಿದೆ.
ಆದರೆ, ಬಹುನಿರೀಕ್ಷಿತ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವುದು ಅನುಮಾನ. ರಾಜಭವನ ಕೂಡ ಸರ್ಕಾರದ ವತಿಯಿಂದ ಸುಗ್ರೀವಾಜ್ಞೆಯ ಕಡತ ಸ್ವೀಕೃತವಾಗಿರುವುದನ್ನು ದೃಢಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ವಿವಿಗಳಲ್ಲಿ ಯುಜಿಸಿ ನಿಯಮದ ಅನ್ವಯ ಕುಲಪತಿ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ನೇಮಕ ನಡೆದಿಲ್ಲ. ಅನರ್ಹರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಪಾಲರು ಆರೋಪಿಸಿದ್ದರು. ಅದೇ ವಿಚಾರ ಎಲ್‌ಡಿಎಫ್ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಖಾನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ರಾಜ್ಯಪಾಲರಿಗೆ ಹಿನ್ನಡೆ:
ಮತ್ತೊಂದು ಬೆಳವಣಿಗೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಕುಲಪತಿ ಸ್ಥಾನಕ್ಕೆ ಶಿಜಾ ಥಾಮಸ್ ಅವರನ್ನು ರಾಜ್ಯ ಸರ್ಕಾರದ ಜತೆಗೆ ಸಮಾಲೋಚನೆ ನಡೆಸದೆ ನೇಮಕ ಮಾಡಿರುವುದು ಮೇಲ್ನೋಟಕ್ಕೆ ಸರಿಯಾಗಿಲ್ಲ ಎಂದು ಕೇರಳ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಈ ಬೆಳವಣಿಗೆ ರಾಜ್ಯಪಾಲರಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂದಿನ ವಿಚಾರಣೆ ನ.18ಕ್ಕೆ ನಡೆಯಲಿದೆ.