Advertisement

ಗುಜರಾತ್‌ ಅಧ್ಯಯನಕ್ಕೆ ಹೊರಟ ಕೇರಳ :ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ಯುಡಿಎಫ್ ಕಿಡಿ

11:46 PM Apr 28, 2022 | Team Udayavani |

ತಿರುವನಂತಪುರ/ಅಹ್ಮದಾಬಾದ್‌: ಗುಜರಾತ್‌ ಮಾದರಿ ಎಂದರೆ ಸಿಡಿದು ಬೀಳುವ ಕೇರಳದ ಎಲ್‌ಡಿಎಫ್ ಸರ್ಕಾರ ಈಗ ಅದೇ ರಾಜ್ಯಕ್ಕೆ ಅಧ್ಯಯನ ತಂಡ ಕಳುಹಿಸಿಕೊಟ್ಟಿದೆ.

Advertisement

ವಿಜಯ ರೂಪಾಣಿ ಗುಜರಾತ್‌ ಸಿಎಂ ಆಗಿದ್ದ ವೇಳೆ ನ್ಯಾಷನಲ್‌ ಇನ್ಫೊರ್ಮಾಟಿಕ್‌ ಸೆಂಟರ್‌ (ಎನ್‌ಐಸಿ) ಸಹಯೋಗದಲ್ಲಿ ಇ-ಆಡಳಿತ ವ್ಯವಸ್ಥೆಯಲ್ಲಿ ಜಾರಿ ತಂದಿರುವ ಡ್ಯಾಶ್‌ಬೋರ್ಡ್‌ ವ್ಯವಸ್ಥೆಯನ್ನು ಅರಿತುಕೊಳ್ಳಲು ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್‌ ನೇತೃತ್ವದಲ್ಲಿ ಇಬ್ಬರು ಸದಸ್ಯರ ತಂಡವನ್ನು ಗಾಂಧಿನಗರಕ್ಕೆ ಕಳುಹಿಸಿಕೊಟ್ಟಿದೆ. ಇತ್ತೀಚೆಗಷ್ಟೇ ಕಣ್ಣೂರಿನಲ್ಲಿ ಮುಕ್ತಾಯಗೊಂಡಿರುವ ಸಿಪಿಎಂ ಸಮ್ಮೇಳನದಲ್ಲಿ “ಕೇರಳ ಮಾದರಿ ಅಭಿವೃದ್ಧಿ’ಯನ್ನು ದೇಶಾದ್ಯಂತ ಪ್ರಚಾರ ಮಾಡಲು ನಿರ್ಣಯ ಕೈಗೊಂಡಿರುವಂತೆಯೇ ಅಚ್ಚರಿಯ ನಿರ್ಧಾರ ಪ್ರಕಟವಾಗಿದೆ.

ಈ ಬೆಳವಣಿಗೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ನ ಟೀಕೆಗೆ ಕಾರಣವಾಗಿದೆ. ಇದರಿಂದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಗಾಢ ಮೈತ್ರಿ ಜಾಹೀರಾಗಿದೆ ಎಂದು ಎಂದು ಕಾಂಗ್ರೆಸ್‌ ಟೀಕಿಸಿದೆ.

ತಂಡ ಕಳುಹಿಸುವ ಬಗ್ಗೆ ಸಿಪಿಎಂ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, “ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಜತೆಗೆ ಮಾತನಾಡಿದ ಪಕ್ಷದ ಹೆಸರು ಬಹಿರಂಗಪಡಿಸಲಿಚ್ಛಿಸದ ನಾಯಕರೊಬ್ಬರು ” ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜತೆಗೆ ಮಾತನಾಡಿದ್ದ ವೇಳೆ ಗುಜರಾತ್‌ನಲ್ಲಿರುವ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸುವಂತೆ ಸಲಹೆ ನೀಡಿದ್ದರು’ ಎಂದರು. ಗುಜರಾತ್‌ ಸರ್ಕಾರ ಕೂಡ ಕೇರಳ ತಂಡ ಆಗಮಿಸುತ್ತಿ ರುವ ಬಗ್ಗೆ ಖಚಿತಪಡಿಸಿದೆ.

ಬಿಜೆಪಿ ಸ್ವಾಗತ: ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್‌ ಮಾತ ನಾಡಿ ಕೊನೆಗೂ ಪಿಣರಾಯಿ ವಿಜಯನ್‌ ಗುಜರಾತ್‌ ಮಾದರಿ ಆಡಳಿತ ಅಳವಡಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ, ವೈಫ‌ಲ್ಯ ಕಂಡ ಕೇರಳ ಮಾದರಿಗೆ ವಿದಾಯ ಹೇಳಲಿ ಎಂದಿದ್ದಾರೆ.

Advertisement

ಏನಿದು ಡ್ಯಾಶ್‌ಬೋರ್ಡ್‌?
ಎನ್‌ಐಸಿ ಸಹಯೋಗದ ಜತೆಗೆ ಕೊರೊನಾ ಸೋಂಕು ವ್ಯವಸ್ಥೆ ನಿರ್ವಹಣೆ, ಸೋಂಕು ಸಂಖ್ಯೆಗಳ ಪರಿಶೀಲನೆ ಮತ್ತು ನಿಗಾ, ಆಸ್ಪತ್ರೆಗಳಲ್ಲಿ ಜನರಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆಯೇ, ಜನರ ಅಭಿಪ್ರಾಯಗಳ ಸಲ್ಲಿಕೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಡ್ಯಾಶ್‌ ಬೋರ್ಡ್‌ ಅಳವಡಿಸಲಾಗಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಅಧಿಕಾರಿಗಳು ಗುಜರಾತ್‌ಗೆ ಭೇಟಿ ನೀಡಿ ಅದರ ಅಧ್ಯಯನ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next