Advertisement

ವಿಜಯನ್‌ಗೆ ಸಂಕಷ್ಟ; ಚಿನ್ನದ ಬಿಸಿಯ ಜತೆಗೆ ಸಮಸ್ಯೆ ತಂದ ಕಮಿಷನ್‌ ಹೇಳಿಕೆ

12:28 AM Aug 11, 2020 | mahesh |

ಕೊಚ್ಚಿ/ತಿರುವನಂತಪುರ: ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದ ಬಿಸಿಯ ನಡುವೆಯೇ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರದ ವಿರುದ್ಧ ಮತ್ತೂಂದು ಆರೋಪ ಕೇಳಿಬಂದಿದೆ. ಚಿನ್ನ ಸಾಗಣೆ ಪ್ರಕರಣದ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್‌ ಹೊಂದಿರುವ ಬ್ಯಾಂಕ್‌ ಲಾಕರ್‌ನಿಂದ ವಶಪಡಿಸಿಕೊಂಡಿರುವ 1 ಕೋಟಿ ರೂ. ರಾಜ್ಯ ಸರಕಾರ ಜಾರಿಗೊಳಿಸಿದ “ಲೈಫ್ ಮಿಷನ್‌’ ಯೋಜನೆಯ ಅನುಷ್ಠಾನಕ್ಕಾಗಿ ಪಡೆಯಲಾಗಿರುವ ಕಮಿಷನ್‌ ಮೊತ್ತ ಎಂದು ಕೋರ್ಟ್‌ಗೆ ಹೇಳಿದ್ದಾಳೆ.

Advertisement

ಕೇರಳ ಸರಕಾರ ತನ್ನ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ “ಲೈಫ್ ಮಿಷನ್‌ ಯೋಜನೆ’ಯನ್ನು ಜಾರಿಗೊಳಿಸಿತ್ತು. ವಸತಿ ರಹಿತರಿಗೆ, ನಿರಾಶ್ರಿತರಿಗೆ ಸರಕಾರದ ವತಿಯಿಂದ ಮನೆ ಕಟ್ಟಿಕೊಡುವ ಯೋಜನೆಯಿದುದು. ಸ್ವಪ್ನಾ ಹೇಳಿಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ನೇತೃತ್ವದಲ್ಲೇ ಲೈಫ್ ಮಿಷನ್‌ ಯೋಜನೆಯನ್ನು ಜಾರಿಗೊಳಿಸಿದ್ದ ವಿಜಯನ್‌, ಅದರ ಸಂಬಂಧ ಯು.ಎ.ಇ.ಗೂ ಪ್ರಯಾಣಿಸಿ ಅಲ್ಲಿಂದ ಯೋಜನೆಯಾಗಿ 20 ಕೋಟಿ ರೂ. ದೇಣಿಗೆ ತಂದಿದ್ದರು ಎಂದು “ಟೈಮ್ಸ್‌ ನೌ’ ವರದಿ ಮಾಡಿದೆ.

ಲೆಕ್ಕ ಕೊಡಿ: ಈ ಬಗ್ಗೆ ಸಿಎಂ ಪಿಣರಾಯಿ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಯೋಜನೆಗಾಗಿ ವಿಜಯನ್‌ ಅವರು ಯುಎಇ ಮೂಲದ ರೆಡ್‌ ಕ್ರೆಸೆಂಟ್‌ ಸಂಸ್ಥೆಯಿಂದ 20 ಕೋಟಿ ರೂ. ದೇಣಿಗೆ ತಂದಿದ್ದರು. ಅದು ಖರ್ಚಾಗಿದ್ದು ಹೇಗೆ ಎಂಬ ಲೆಕ್ಕವನ್ನು ಪಿಣರಾಯಿ ಅವರು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆರೋಪ ನಿರಾಕರಿಸಿದ ವಿಜಯನ್‌: ಸ್ವಪ್ನಾ ಸುರೇಶ್‌ ಹೇಳಿಕೆಯನ್ನು ಸಿಎಂ ಪಿಣರಾಯಿ ವಿಜಯನ್‌ ನಿರಾಕರಿಸಿದ್ದಾರೆ. “ಮೊದಲು, ರಾಜತಾಂತ್ರಿಕ ನಿಯಮಗಳ ಅಡಿಯಲ್ಲಿ ನಡೆಯುತ್ತಿದ್ದ ಕಳ್ಳಸಾಗಣೆ ನನಗೆ ಗೊತ್ತಿತ್ತು ಎಂದು ಬಿಂಬಿಸಲಾಯಿತು. ಈಗ, ಸರ್ಕಾರಿ ಯೋಜನೆ ಜಾರಿ ವಿಚಾರದಲ್ಲಿ ಆರೋಪಿ ಸ್ವಪ್ನಾ ಸುರೇಶ್‌ ಅವರಿಗೆ 1 ಕೋಟಿ ರೂ.ಗಳಷ್ಟು ಕಮೀಷನ್‌ ಕೊಟ್ಟಿದ್ದೇನೆ ಎಂದು ಹೇಳಲಾಗುತ್ತಿದೆ. ಇದೆಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಇಲ್ಲಿ ಕೆಲವು ಮಾಧ್ಯಮಗಳೂ ಕೂಡ ನನ್ನ ವಿರುದ್ಧ ಕೆಲಸ ಮಾಡುತ್ತಿವೆ’ ಎಂದು ಅವರು ಗುಡುಗಿದ್ದಾರೆ.

ಸ್ವಪ್ನಾ ಜಾಮೀನು ಅರ್ಜಿ ತಿರಸ್ಕೃತ
ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಪ್ನಾ ಸುರೇಶ್‌ ಅವರಿಗೆ ಜಾಮೀನು ನೀಡಲು ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯ ನಿರಾಕರಿಸಿದೆ. ಅರ್ಜಿಯಲ್ಲಿ ಅವರು, ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಧಾರ ರಹಿತವಾಗಿ ತಮ್ಮನ್ನು ಬಂಧಿಯನ್ನಾಗಿಸಿದೆ ಎಂದು ಆರೋಪಿಸಿದ್ದರು.

Advertisement

ಸ್ವಪ್ನಾ ಅವರ ಜಾಮೀನು ಅರ್ಜಿಗೆ ಪ್ರತಿಯಾಗಿ ತನ್ನ ವಾದ ಮಂಡಿಸಿದ ಎನ್‌ಐಎ, ಪ್ರಕರಣದ ತನಿಖೆಯಲ್ಲಿ ಈವರೆಗೆ ತಾನು ಸಾಧಿಸಿರುವ ಪ್ರಗತಿಯನ್ನು ಒಳಗೊಂಡಿರುವ ಕೇಸ್‌ ಡೈರಿಯನ್ನು ನ್ಯಾಯಾಲಯದ ಮುಂದೆ ಸಾದರಪಡಿಸಿತು. ಡೈರಿಯಲ್ಲಿ, ಆರೋಪಿ ಸ್ವಪ್ನಾ ಸುರೇಶ್‌ ಕಳೆದ ವರ್ಷ ನವೆಂಬರ್‌ನಿಂದ ಇಲ್ಲಿಯವರೆಗೆ ರಾಜತಾಂತ್ರಿಕ ಮುಖವಾಡದಡಿ ಕಳ್ಳಸಾಗಣೆ ಮಾಡಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅಪರಾಧವಾಗಿದ್ದು, ಆ ಬಗ್ಗೆ ಮತ್ತಷ್ಟು ಹೆಚ್ಚಿನ ವಿವರಣೆಗಳನ್ನು ಕಲೆ ಹಾಕಬೇಕಿದೆ. ಹಾಗಾಗಿ, ಸ್ವಪ್ನಾ ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದು ಎನ್‌ಐಎ ವಿವರಿಸಿತು. ಕೇಸ್‌ ಡೈರಿ ಹಾಗೂ ಎನ್‌ಐಎ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಸ್ವಪ್ನಾರವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next