Advertisement
ಪಾಳು ಮನೆಯೊಳಗೆ ಮಡುಗಟ್ಟಿದ ಶೋಕಕೇರಳದ ಅಲ್ಲಲ್ಲಿ ನೆರೆ ಹಾವಳಿ ಇಳಿದಿದ್ದು, ಮನೆಗಳು ಮುಳುಗಿದ್ದರಿಂದ ನಿರಾಶ್ರಿತರ ಶಿಬಿರ ಸೇರಿದ್ದ ಹಲವರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ. ಇವರಲ್ಲಿ ಚಾಲಕ್ಕುಡಿಯ ಸುರೇಶ್ ಜಾನ್ ಕುಟುಂಬವೂ ಒಂದು. ಸೋಮವಾರ ತಮ್ಮ ಮನೆ ಪ್ರವೇಶಿಸಿದ ಇವರು ಮನೆಗಾಗಿರುವ ದುಸ್ಥಿತಿ ನೋಡಿ ಕಣ್ಣೀರಿಟ್ಟರು. ಮನೆಯಲ್ಲಿ ಎಲ್ಲಿ ನೋಡಿದರೂ ಅರ್ಧ ಅಡಿಯಷ್ಟು ಕೆಸರು ತುಂಬಿದ್ದು, ಗೋಡೆಗಳು ಶಿಥಿಲಗೊಂಡಿರುವುದರಲ್ಲದೆ, ಪೀಠೊಪಕರಣಗಳು, ಮಕ್ಕಳ ಪುಸ್ತಕಗಳು, ಅಡುಗೆ ಸಾಮಗ್ರಿಗಳು ಸೇರಿದಂತೆ ಮನೆಯ ಎಲ್ಲವೂ ಅಕ್ಷರಶಃ ನಾಶವಾಗಿವೆ. ಈ ಪರಿಸ್ಥಿತಿಯ ಬಗ್ಗೆ ಗದ್ಗದಿತರಾಗಿ ಉತ್ತರಿಸಿದ ಜಾನ್, ಈ ಮನೆಯನ್ನು ಮೊದಲ ಸ್ಥಿತಿಗೆ ತರಲು ತಿಂಗಳುಗಳೇ ಬೇಕಾಗಬಹುದು. ಆದರೆ ನನ್ನಲ್ಲಿ ಅಷ್ಟು ಹಣವಿಲ್ಲ ಎಂದು ಮರುಗಿದ್ದಾರೆ. ತಮ್ಮ ಮನೆಗಳಿಗೆ ಹಿಂದಿರುಗಿರುವ ಎಲ್ಲರ ಪರಿಸ್ಥಿತಿಯೂ ಇದೇ ಆಗಿದೆ.
ಪ್ರವಾಹದ ನೀರು ಮನೆಯೊಳಗೆ ನುಗ್ಗಿ ತನ್ನ ಶೈಕ್ಷಣಿಕ ದಾಖಲೆಗಳು ಸಂಪೂರ್ಣನಾಶವಾಗಿದ್ದಕ್ಕೆ ಮನನೊಂದ ಕೈಲಾಶ್ (19) ಎಂಬ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲ್ಲಿಕೋಟೆಯ ಕರಂತೂರ್‌ನ ನಿವಾಸಿಯಾಗಿದ್ದ ಈತನನ್ನು ಆತನ ತಂದೆ-ತಾಯಿ ಸಮೇತ 3 ದಿನಗಳ ಹಿಂದಷ್ಟೇ ರಕ್ಷಿಸಿ ನಿರಾಶ್ರಿತರ ಶಿಬಿರಕ್ಕೆ ಸೇರಿಸಲಾಗಿತ್ತು. ಇತ್ತೀಚೆಗಷ್ಟೇ, ಐಟಿಐಗೆ ಸೇರಿದ್ದ ಈತ, ಕಾಲೇಜಿಗಾಗಿ ಹೊಸ ಸಮವಸ್ತ್ರ ಖರೀದಿಸಿ, ತರಗತಿಗೆ ಹೋಗುವ ಉತ್ಸಾಹದಲ್ಲಿದ್ದ. ಆದರೀಗ ಆತನ ಕನಸುಗಳೊಂದಿಗೆ ಆತನ ಜೀವನವೇ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಮುಂದಿನ 10 ವರ್ಷದಲ್ಲಿ 16,000 ಸಾವು?
ಮುಂದಿನ 10 ವರ್ಷಗಳಲ್ಲಿ ದೇಶದ ನಾನಾ ರಾಜ್ಯಗಳಲ್ಲಿ ನೈಸರ್ಗಿಕ ಪ್ರಕೋಪಗಳು ಉಂಟಾಗಲಿದ್ದು, ಸುಮಾರು 16,000 ಮಂದಿ ಸಾವಿಗೀಡಾಗುತ್ತಾರೆ ಮತ್ತು 45,000 ಕೋಟಿ ರೂ. ನಷ್ಟವಾಗಲಿದೆ. ಇತ್ತೀಚೆಗೆ, ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾಪ್ರಾಧಿಕಾರ (ಎನ್‌ಡಿಎಂಎ) ನಡೆಸಿರುವ ಅಧ್ಯಯನದಿಂದ ಇದು ಬಹಿರಂಗವಾಗಿದೆ. ವರದಿಯಲ್ಲಿ, ರಾಜ್ಯಗಳು ತಮ್ಮಲ್ಲಿ ಉಂಟಾಗಬಹುದಾದ ವಿಕೋಪಗಳನ್ನು ಎದುರಿಸಲು ಯಾವುದೇ ರೀತಿಯಲ್ಲೂ ಸನ್ನದ್ಧವಾಗಿಲ್ಲ. ಈ ಬಗ್ಗೆ ಕೈಗೊಳ್ಳಲಾಗಿರುವ ಸುರಕ್ಷಾ ಕ್ರಮಗಳು ತುಂಬಾ ಕಡಿಮೆ. ಹೀಗಾಗಿ, ದೊಡ್ಡ ಮಟ್ಟದ ವಿಪತ್ತುಗಳನ್ನು ರಾಷ್ಟ್ರ ಎದುರಿಸಬೇಕಾಗುತ್ತದೆ ಎಂದು ಎನ್‌ಡಿಎಂಎ, ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.
Related Articles
ಕೇರಳ ಪ್ರವಾಹ ಹಿನ್ನೆಲೆಯಲ್ಲಿ, ಭಾರತೀಯ ವಿಮೆ ಕ್ಷೇತ್ರದ ಮೇಲೆ ಸುಮಾರು 1,100 ಕೋಟಿ ರೂ. ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ವೈಯಕ್ತಿಕ, ಮನೆ, ಮೋಟಾರ್, ಲೈಫ್ ಇನ್ಶೂರೆನ್ಸ್‌ಗಳಿಂದ 500 ಕೋಟಿ ರೂ. ಮೊತ್ತದ ಕ್ಲೇಮುಗಳು ಹಾಗೂ ವಾಣಿಜ್ಯ ವಿಮೆಗಳಿಂದ ಸುಮಾರು 600 ಕೋಟಿ ರೂ. ಹೊರೆ ಬೀಳಬಹುದೆಂದು ಅಂದಾಜಿಸಲಾಗಿದೆ. ಅಂದ ಹಾಗೆ, ಕೇರಳದಿಂದ ಉಂಟಾಗಲಿರುವ ಈ ಹೊರೆ, ಈವರೆಗಿನ 3ನೇ ಅತಿ ದೊಡ್ಡ ಹೊರೆ ಎನ್ನಲಾಗಿದ್ದು, 2015ರ ತಮಿಳುನಾಡು ನೆರೆ ಹಾವಳಿ ನಂತರ ಬಂದಿದ್ದ 5,000 ಕೋಟಿ ರೂ. ಕ್ಲೇಮು, ಅದಕ್ಕೂ ಮುನ್ನ ಜಮ್ಮು-ಕಾಶ್ಮೀರ, ಉತ್ತರಾಖಂಡ ನೆರೆ ಹಾವಳಿಯಿಂದ ಸುಮಾರು 2,000 ಕೋಟಿ ರೂ. ಕ್ಲೇಮು ಮೊದಲೆರಡು ಸ್ಥಾನಗಳಲ್ಲಿವೆ.
Advertisement
ಪುಟಾಣಿಗೆ ಸೈಕಲ್ ಗಿಫ್ಟ್ಸೈಕಲ್ ಖರೀದಿಸಲೆಂದು ಆ ಪುಟ್ಟ ಬಾಲಕಿ 5 ವರ್ಷಗಳಿಂದ ಹಣ ಕೂಡಿಡುತ್ತಿದ್ದಳು. ಆದರೆ, ಟಿವಿಯಲ್ಲಿ ಕೇರಳ ರಾಜ್ಯ ಪ್ರವಾಹದಲ್ಲಿ ತತ್ತರಿಸುತ್ತಿರುವುದನ್ನು ಕಂಡ ಕೂಡಲೇ ಮಮ್ಮಲ ಮರುಗಿದ ಆ ಪುಟಾಣಿ, ತಾನು ಈವರೆಗೆ ಕೂಡಿಟ್ಟಿದ್ದ 9,000 ರೂ.ಗಳನ್ನೂ ಸಹಾಯ ನಿಧಿಗಾಗಿ ಸಮರ್ಪಿಸಿದ್ದಾಳೆ. ವಿಲ್ಲುಪುರಂನ ಅನುಪ್ರಿಯಾ ಎಂಬ ಈ ಬಾಲಕಿಯ ಮಾನವೀಯ ಸ್ಪಂದನೆಗೆ ಮನಸೋತಿರುವ ಹೀರೋ ಸೈಕಲ್ಸ್ ಸಂಸ್ಥೆ, ಈಕೆಗೆ ಉಚಿತವಾಗಿ ಆಕೆಯ ಕನಸಿನ ಸೈಕಲ್ ನೀಡುವುದಾಗಿ ಘೋಷಿಸಿದೆ. ಸುಪ್ರೀಂ ಜಡ್ಜ್ಗಳಿಂದ ನೆರವು
ಕೇರಳದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪಕ್ಕೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು, ಪರಿಹಾರ ನಿಧಿಗೆ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಈ ಕುರಿತು ಸಿಜೆಐ ದೀಪಕ್ ಮಿಶ್ರಾ ಅವರೇ ಘೋಷಿಸಿದ್ದಾರೆ. 6 ಮೃತದೇಹ ಪತ್ತೆ: ಇದೇ ವೇಳೆ ಕೇರಳದಲ್ಲಿ ಪ್ರವಾಹ ತಗ್ಗುತ್ತಿದ್ದಂತೆ ಇನ್ನಷ್ಟು ಮೃತ ದೇಹಗಳು ಪತ್ತೆಯಾಗುತ್ತಿದ್ದು, ಭಾನುವಾರ ರಾತ್ರಿ 6 ಮಂದಿಯ ಮೃತದೇಹ ಸಿಕ್ಕಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವ್ಯಂಗ್ಯ ಮಾಡಿದ್ದವನ ವಜಾ
ಪ್ರವಾಹದಿಂದ ಯಾತನೆ ಅನುಭವಿಸುತ್ತಿರುವ ಸಂತ್ರಸ್ತರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಂಗ್ಯ ಮಾಡಿದ್ದ ತನ್ನ ಉದ್ಯೋಗಿಯೊಬ್ಬನನ್ನು ದುಬೈನಲ್ಲಿರುವ ಲುಲು ಕಂಪನಿ ಸೇವೆಯಿಂದ ವಜಾಗೊಳಿಸಿದೆ. ಶಿಕ್ಷೆಗೊಳಗಾಗಿರುವ ರಾಹುಲ್ ಚೆರು ಪಳ ಯಟ್ಟು ಅವರೂ ಕೇರಳದವರೇ ಆಗಿದ್ದು, ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜಲಾವೃತ ಪ್ರದೇಶಗಳಲ್ಲಿ ಸಂತ್ರಸ್ತರು ಅನುಭವಿಸುತ್ತಿರುವ ಶೌಚದ ಸಮಸ್ಯೆಯನ್ನೇ ಪ್ರಧಾನವಾಗಿಟ್ಟುಕೊಂಡು ಈತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದ. ಕೈದಿಗಳಿಂದ ಚಪಾತಿ, ಕರಿ
ಪ್ರವಾಹ ಸ್ಥಿತಿ ನಿರ್ವಹಣೆಗೆ ಕೈ ಜೋಡಿಸಿರುವ ತಿರುವಂತ ಪುರ ಕೇಂದ್ರೀಯ ಕಾರಾಗೃಹದ ಕೈದಿಗಳು ನಿರಾಶ್ರಿತ ಶಿಬಿರಗಳಲ್ಲಿರುವ ಸಂತ್ರಸ್ತರಿಗಾಗಿ ಚಪಾತಿ, ತರಕಾರಿ ಪಲ್ಯ, ಚಿಕನ್ ಕರಿ, ಜಾಮ್ ಹಾಗೂ ನೀರಿನ ಬಾಟಲಿಗಳನ್ನು ತಯಾರಿಸುವ ಸೇವೆಗೆ ಮುಂದಾಗಿದ್ದಾರೆ. ಅಸಲಿಗೆ, “ಫ್ರೀಡಂ’ ಎಂಬ ಹೆಸರಿನಲ್ಲಿ ಕೆಲ ವರ್ಷಗಳಿಂದ ಕಾರಾಗೃಹವು ಕೈದಿಗಳಿಂದ ತಯಾರಿಸಿದ ಆಹಾರ ಮಾರಾಟ ಮಾಡುತ್ತಿದೆ. ಈ ಬಾರಿ ಸಂತ್ರಸ್ತರ ನೆರವಿಗೆ ಕಾರಾಗೃಹ ಮುಂದೆ ಬಂದಿದೆ. ಶಿಬಿರಗಳಲ್ಲಿ ಅಪಾರ ಆಹಾರ ಅಗತ್ಯವಿರುವುದರಿಂದ ಹಗಲು ರಾತ್ರಿಯೆನ್ನದೆ ವಿವಿಧ ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಕಲಿ ವಿಡಿಯೋಗಳ ಬಗ್ಗೆ ನಮಗೆ ತಿಳಿಸಿ: ಸೇನೆ
ಸೇನಾ ಸಮವಸ್ತ್ರ ಧರಿಸಿ ಕೇರಳ ಸರ್ಕಾರವನ್ನು ದೂಷಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ತುಣುಕು ನಕಲಿ ಎಂದು ಸೇನೆ ಸ್ಪಷ್ಟಪಡಿಸಿದೆ. ವಿಡಿಯೋದಲ್ಲಿ, ತನ್ನನ್ನು ತಾನು ಸೇನಾಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿ, ಸಿಎಂ ಪಿಣ ರಾಯಿ ವಿಜಯನ್ ಹಾಗೂ ಸಚಿವ ಕೊಡಿ ಯೇರಿ ಬಾಲ ಕೃಷ್ಣನ್ ಅವರು ಕಾರ್ಯಾಚರಣೆಗೆ ತೊಂದರೆ ನೀಡುತ್ತಿದಾರೆಂದು ಆಪಾದಿಸಿದ್ದಾನೆ. ಸೇನೆಯ ಬಗ್ಗೆ ಇಂಥ ಸುಳ್ಳು ವಿಡಿಯೋಗಳು ಕಂಡು ಬಂದಲ್ಲಿ +917290028579 ಸಂಖ್ಯೆಗೆ ರವಾ ನಿ ಸು ವಂತೆ ಸೇನೆ ಕೋರಿದೆ. ಹೀಗೊಂದು ಧನ್ಯವಾದ
ಇತ್ತೀಚೆಗೆ, ಚೆಂಗಮನಾಡ್‌ನಲ್ಲಿ ಜಲಾವೃತಗೊಂಡಿದ್ದ ಮನೆಯ ಚಾವಣಿಯಿಂದ ಸಜಿತಾ ಜಬಿಲ್ ಎಂಬ ತುಂಬು ಗರ್ಭಿಣಿಯೊಬ್ಬರನ್ನು ಯೋಧರು ಕಾ ಪ್ಟರ್ ಮೂಲಕ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆ ಮನೆಯ ಸದಸ್ಯರು ವಿಶೇಷ ರೀತಿಯಲ್ಲಿ ಈ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಸಜಿತಾ ಅಸಹಾಯಕರಾಗಿ ನಿಂತಿದ್ದ ಮನೆಯ ಚಾ ವಣಿ ಮೇಲೆ ದಪ್ಪಕ್ಷರಗಳಲ್ಲಿ ಇಂಗ್ಲಿಷ್‌ನಲ್ಲಿ “ಥ್ಯಾಂಕ್ಸ್’ ಎಂದು ಬರೆಯ ಲಾಗಿದೆ. ಚಾವಣಿ ಮೇಲೆ ಕಾಪ್ಟರ್
ಚಾಲಕುಡಿಯ ಮನೆಯೊಂದರ ಮೇಲೆ ನೌಕಾಪಡೆಯ ಹೆಲಿಕಾಪ್ಟರ್ ಇಳಿಸಿ 26 ಜನರನ್ನು ರಕ್ಷಿಸಿದ್ದ ರೋಚಕ ವಿಡಿಯೋ ನೋಡುಗರ ಮೈನವಿರೇಳಿಸುತ್ತಿದೆ. ಚಾವಣಿ ಮೇಲೆ ಕಾಪ್ಟರ್ ಇಳಿಸುವುದು ಅಸಾಧ್ಯದ ಮಾತು. ಆದರೆ, ಇಲ್ಲಿ ಪೈಲಟ್ ಪ್ರಾಣವನ್ನೇ ಪಣಕ್ಕಿಟ್ಟು ಈ ಸಾಹಸ ಮಾಡಿದ್ದಾರೆ. ಚಾವಣಿ ಮೇಲೆ ಇಳಿಸಿ ಎಲ್ಲ ಸಂತ್ರಸ್ತರನ್ನು ಹತ್ತಿಸಿ ಕಾಪ್ಟರ್ ಗಗನಕ್ಕೆ ಚಿಮ್ಮಿದೆ. ಅಪಾಯವಾಗಿದ್ದರೆ ಏನು ಮಾಡುತ್ತಿದ್ದಿರಿ ಎಂಬ ಪ್ರಶ್ನೆಗೆ, “3-4 ಸೆಕೆಂಡುಗಳಲ್ಲಿ ಕಾಪ್ಟರ್ ಅನ್ನು ಹಾರಿಸಲು ಯೋಚಿಸಿದ್ದೆ’ ಎಂದಿದ್ದಾರೆ. ವಾಯುನೆಲೆ ಬಳಕೆ
ಕೊಚ್ಚಿಯಲ್ಲಿರುವ ನೌಕಾಪಡೆಯ ವಾಯು ನೆಲೆಯಲ್ಲಿ ಸೋಮವಾರದಿಂದ ಖಾಸಗಿ ವಿಮಾನ ಸಂಚಾರ ಆರಂಭವಾಗಿದೆ. ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಬಂದಿಳಿಯಿತು. ನೆರೆಯಿಂದಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಿರುವ ಕಾರಣ ನೌಕಾಪಡೆಯ ಈ ವಾಯು ನೆಲೆಯನ್ನು ನಾಗರಿಕ ವಿಮಾನಗಳ ನಿಲ್ದಾಣದಂತೆ ಬಳಸಲು ಕೇಂದ್ರ ಅನುಮತಿ ನೀಡಿದೆ.