ತ್ರಿಶ್ಶೂರ್: ಪ್ರತಿ ದಿನ ನೀರು ಬರೋ ಮನೆಯ ನಲ್ಲಿಗಳಲ್ಲಿ ಆಲ್ಕೋಹಾಲ್ ಬಂದರೆ! ಇಂಥ ಘಟನೆ ಕೇರಳದ ತ್ರಿಶ್ಶೂರ್ ಜಿಲ್ಲೆಯ ಸೊಲೊಮೋನ್ಸ್ ಅವೆನ್ಯೂ ಫ್ಲಾಟ್‌ನಲ್ಲಿ ನಡೆದಿದೆ.
ಅಪಾರ್ಟ್‌ಮೆಂಟ್‌ನಲ್ಲಿರುವ 18 ಮನೆಗಳ ನಲ್ಲಿಗಳಲ್ಲಿ ಆಲ್ಕೋಹಾಲ್ ಮಿಶ್ರಿತ ನೀರು ಬಂದಿದೆ. ಇದರಿಂದ ಅಚ್ಚರಿಗೊಂಡ ನಿವಾಸಿಗಳು ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ. ಕಿಡಿಗೇಡಿಗಳು ಟ್ಯಾಂಕ್‌ಗೆ ಮದ್ಯ ಬೆರೆಸಿರಬೇಕು ಅಂದುಕೊಂಡು ಸ್ಥಳ ಪರಿಶೀಲಿಸಿದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು.
ಏಕೆಂದರೆ, ಅಪಾರ್ಟ್‌ಮೆಂಟ್‌ನ ಬೋರ್‌ವೆಲ್‌ನಿಂದಲೇ ಮದ್ಯ ಮಿಶ್ರಿತ ನೀರು ಬರುತ್ತಿತ್ತು. ಹೀಗಾಗಿ ಸುತ್ತಲ ಪ್ರದೇಶ ತಪಾಸಣೆ ನಡೆಸಿ ಹಿಂದಿನ ಘಟನೆಗಳನ್ನೆಲ್ಲಾ ಕೆದಕಿ ನೋಡಿದಾಗ ಅಬಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟೇ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ.
ಆಗಿರುವುದೇನೆಂದರೆ, ಆರು ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್ ಸಮೀಪವಿರುವ ರಚನಾ ಎಂಬ ಬಾರ್‌ನಲ್ಲಿ 6 ಸಾವಿರ ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಬಾರ್ ಬಳಿಯೇ ಗುಂಡೊ ತೆಗೆದು, ಎಲ್ಲ ಬಾಟಲಿಗಳಲ್ಲಿದ್ದ ಮದ್ಯವನ್ನು ಆ ಗುಂಡಿಗೆ ಸುರಿದು ಮುಚ್ಚಲಾಗಿತ್ತು.
ಹೀಗೆ ಗುಂಡಿ ಸೇರಿದ್ದ ಮದ್ಯ, ಈಗ ಅಂತರ್ಜಲ ಸೇರಿ, ಬೋರ್‌ವೆಲ್ ಮೂಲಕ ಟ್ಯಾಂಕ್, ಬಳಿಕ ಮನೆ ಗಳ ನಲ್ಲಿಗಳಲ್ಲಿ ಬಂದಿದೆ. ಕೆಲವು ನಿವಾಸಿಗಳು ಮದ್ಯ ಮಿಶ್ರಿತ ನೀರು ಕುಡಿದು ಖುಷಿಪಟ್ಟರೆ, ಇನ್ನು ಕೆಲವರು ಅಬಕಾರಿ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.