ಹೊಸದಿಲ್ಲಿ : ಕೇರಳದ ಪಾಲಕ್ಕಾಡ್‌ನಲ್ಲಿ ಅಮಾನವೀಯವಾಗಿ ಹತ್ಯೆಗೀಡಾದ ಗರ್ಭಿಣಿ ಆನೆ ಆಕಸ್ಮಿಕವಾಗಿ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಅಭಿಪ್ರಾಯಪಟ್ಟಿದೆ.
‘ಆನೆಗೆ ಉದ್ದೇಶಪೂರ್ವಕವಾಗಿ ಪಟಾಕಿ ತುಂಬಿದ ಹಣ್ಣನ್ನು ನೀಡಲಾಗಿಲ್ಲ. ತೋಟಗಳಿಗೆ ಕಾಡುಹಂದಿಗಳು ಬರದಂತೆ ತಡೆಯಲು ರೈತರು ಅಕ್ರಮವಾಗಿ ಪಟಾಕಿ ತುಂಬಿದ ಹಣ್ಣನ್ನು ಜಮೀನಿನ ಅಂಚಿನಲ್ಲಿ ಇಡುತ್ತಾರೆ.
ಆನೆ ಇದನ್ನು ಆಕಸ್ಮಿಕವಾಗಿ ಸೇವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಸಚಿವಾಲಯ ತಿಳಿಸಿದೆ. “ಕೇರಳ ಸರಕಾರದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಇನ್ನೂ ನಡೆಯುತ್ತಿದೆ. ಆರೋಪಿಯನ್ನು ತಡವಾಗಿ ಬಂಧಿಸಿರುವುದಕ್ಕೆ ಕಾರಣವನ್ನೂ ತಿಳಿಯುತ್ತಿದ್ದೇವೆ’ ಎಂದು ಹೇಳಿದೆ.
ಎನ್‌ಜಿಟಿ ಸಮಿತಿ ರಚನೆ: ಗರ್ಭಿಣಿ ಆನೆ ಹತ್ಯೆಯ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸತ್ಯಾಸತ್ಯತೆ ಕಲೆಹಾಕಲು ಸ್ವಯಂ ಪ್ರೇರಿತವಾಗಿ ಸಮಿತಿಯನ್ನು ರಚಿಸಿದೆ. ಘಟನೆ ಕುರಿತು ಸಮಿತಿ ಶೀಘ್ರವೇ ವರದಿ ಸಲ್ಲಿಸಲಿದೆ.
‘ಮಾನವ ಮತ್ತು ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪಾಲಕ್ಕಾಡ್ ಜಿಲ್ಲಾಧಿಕಾರಿ ಸೇರಿದಂತೆ, ಕೇರಳದ ವಿವಿಧ ವಿಭಾಗಗಳ ಅರಣ್ಯಾಧಿಕಾರಿಗಳು ಈ ಸಮಿತಿಯಲ್ಲಿರುತ್ತಾರೆ’ ಎಂದು ಎನ್‌ಜಿಟಿ ತಿಳಿಸಿದೆ.