ಕೊಚ್ಚಿ: ಥಿಯೇಟರ್ ನಲ್ಲಿ ಸಿನಿಮಾವನ್ನು ರಹಸ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುತ್ತಿದ್ದ ಕುಖ್ಯಾತ ತಮಿಳು ರಾಕರ್ಸ್ (Tamil Rockers) ಗುಂಪಿನ ಅಡ್ಮಿನ್ ನೊಬ್ಬನನನ್ನು ಕೊಚ್ಚಿಯ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಜೆಬ್ ಸ್ಟೀಫನ್ ರಾಜ್(33) ಬಂಧಿತ. ಈತ ತಿರುವನಂತಪುರಂ ಥಿಯೇಟರ್‌ನಲ್ಲಿ ಇತ್ತೀಚೆಗೆ ತೆರೆಕಂಡ ಧನುಷ್ ಅವರ “ರಾಯನ್” ಸಿನಿಮಾವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಿಕ್ಕಿಬಿದ್ದದ್ದು ಹೇಗೆ?: ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಅವರ ʼಗುರುವಾಯೂರ್ ಅಂಬಲನಡಾಯಿಲ್ʼ ಸಿನಿಮಾ ರಿಲೀಸ್ ಆದ ಒಂದೇ ದಿನದಲ್ಲಿ ಅದರ ಕಾಪಿಯನ್ನು ಪೈರಸಿ (Piracy) ಮಾಡಲಾಗಿತ್ತು. ಇದರ ಬಗ್ಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಸುಪ್ರಿಯಾ ಮೆನನ್ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.
ಶುಕ್ರವಾರ (ಜು.26ರಂದು) ಆರೋಪಿಯನ್ನು ವಶಕ್ಕೆ ಪಡೆದು, ಶನಿವಾರ ವಿಚಾರಣೆ ನಡೆಸಿದ್ದಾರೆ. “ಕಲ್ಕಿ” ಮತ್ತು “ಮಹಾರಾಜ”ನಂತಃ ಸಿನಿಮಾಗಳನ್ನು ಈತ ಪೈರಸಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯ ಮೊಬೈಲ್ ಪರಿಶೀಲಿಸಿದಾಗ, ಆತನ ಮೊಬೈಲ್ ನಲ್ಲಿ ಹೆಚ್ ಡಿ ಕ್ವಾಲಿಟಿಯ ಅನೇಕ ಸಿನಿಮಾಗಳಿದ್ದವು. ಸ್ಟೀಫನ್ ರಾಜ್ ಯಾರಿಗೂ ತಿಳಿಯದಂತೆ ಥಿಯೇಟರ್ ಸೀಟ್ ನಲ್ಲಿನ ಕಪ್ ಹೋಲ್ಡರ್ ನಲ್ಲಿ ಮೊಬೈಲ್ ಇಟ್ಟು ಸಿನಿಮಾವನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಒಂದೂವರೆ ವರ್ಷದಿಂದ ತಿರುವನಂತಪುರಂನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಪೈರಸಿ ಗ್ಯಾಂಗ್ ನೊಂದಿಗೆ ನಂಟು ಹೊಂದಿದ್ದ. ಪೈರಸಿ ಮಾಡುವ ಚಿತ್ರಗಳ ಬುಕಿಂಗ್ ನ್ನು ಮುಂಚಿತವಾಗಿ ಮಾಡುತಿದ್ದ ಜೆಬ್, ಅದನ್ನು ತನ್ನ ದುಬಾರಿ ಫೋನಿನಲ್ಲಿ ಚಿತ್ರೀಕರಿಸಿ, ಆ ಬಳಿಕ ವಾಟ್ಸಾಪ್ ಮೂಲಕ ಇತರೆ ಅಡ್ಮಿನ್ ಗಳಿಗೆ ಹೇಳುತ್ತಿದ್ದ.
ರೆಕಾರ್ಡ್ ಮಾಡಿದ ಚಿತ್ರಗಳನ್ನು ಅಪ್ ಲೋಡ್ ಮಾಡಲು ತಮಿಳು ರಾಕರ್ಸ್ ಅಡ್ಮಿನ್ ಗಳಿಂದ 5000 ರೂ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.