Advertisement

ಸೋಂಕು: ಕೇರಳ ಪಾಲು ಶೇ.68

11:38 PM Aug 26, 2021 | Team Udayavani |

ತಿರುವನಂತಪುರ/ಹೊಸದಿಲ್ಲಿ: ಕೇರಳದಲ್ಲಿ ಸತತ ಎರಡನೇ ದಿನವಾದ ಗುರುವಾರವೂ 30,007 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 162 ಮಂದಿ ಅಸುನೀಗಿದ್ದಾರೆ. ಹಲವು ಹಬ್ಬಗಳಿಗಾಗಿ ರಾಜ್ಯ ಸರಕಾರ ನಿಯಮ ಸಡಿಲಿಕೆ ಮಾಡಿದ್ದರಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶಾದ್ಯಂತ ದೃಢಪಟ್ಟ 46,164 ಹೊಸ ಪ್ರಕರಣಗಳ ಪೈಕಿ ಕೇರಳದ್ದೇ 31,445 ಕೇಸುಗಳಿವೆ. ಕಳೆದ ವಾರದ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಕೇರಳದ ಪಾಲೇ ಶೇ. 68ರಷ್ಟು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

Advertisement

ರಾಜ್ಯದ ಪರಿಸ್ಥಿತಿ ಬಗ್ಗೆ ಗುರುವಾರ ಪರಿಶೀಲನೆ ನಡೆಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್‌, ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇದ್ದವರಿಗೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹಬ್ಬಿದೆ. ಇತ್ತೀಚಿನ ಅಧ್ಯಯನ ಪ್ರಕಾರ ಮನೆಯಲ್ಲಿಯೇ ಇರುವ ಶೇ.35 ಮಂದಿಗೆ ಸೋಂಕು ದೃಢಪಟ್ಟಿದೆ. ಹೋಮ್‌ ಕ್ವಾರಂಟೈನ್‌ ನಿಯಮಗಳ ಉಲ್ಲಂಘನೆಯಿಂದಾಗಿ ಪರಿಸ್ಥಿತಿ ಕೈಮೀರಿದೆ ಎಂದಿದ್ದಾರೆ.

ರಾಜಕೀಯ ಲಾಭ: ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌, “ಸೋಂಕಿನ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರ ತನ್ನ ರಾಜಕೀಯ ಲಾಭಗಳಿಗಾಗಿ ಬಳಕೆ ಮಾಡುತ್ತಿದೆ. ಸೋಂಕನ್ನು ತಡೆಯಲು ವೈಜ್ಞಾನಿಕ ಮಾರ್ಗ ಅನುಸರಿಸುವ ಬದಲು, ರಾಜಕೀಯ ಲಾಭ ಹೇಗೆ ಪಡೆಯಬಹುದು ಎಂದು ಯೋಚನೆಯಲ್ಲಿದೆ. ಐಸಿಎಂಆರ್‌ನ ನೀತಿಗಳನ್ನು ರಾಜ್ಯ ಸರಕಾರ ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರಕಾರ ಶೇ.54 ಮಂದಿಗೆ ಲಸಿಕೆ ಹಾಕಿಸಿರುವುದಾಗಿ ಹೇಳಿರುವುದರ ಬಗ್ಗೆಯೇ ಸಂಶಯವಿದೆ ಎಂದೂ ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕ ರಮೇಶ್‌ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿ, ರಾಜ್ಯ ಸರಕಾರ ಸೋಂಕಿನ ನಿರ್ವಹಣೆ ವಿಚಾರದಲ್ಲಿ ವಿಫ‌ಲವಾಗಿದೆ ಎಂದು ಟೀಕಿಸಿದ್ದಾರೆ.

ಎಚ್ಚರಿಕೆಯಿಂದ ಹಬ್ಬ: ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ದೇಶ ಇನ್ನೂ ಎರಡನೇ ಅಲೆಯ ನಡುವೆ ಇದೆ. ಹಬ್ಬಗಳನ್ನು ಎಚ್ಚರಿಕೆಯಿಂದ ಆಚರಿಸಬೇಕು. ಸೆಪ್ಟಂಬರ್‌- ಅಕ್ಟೋಬರ್‌ ಅವಧಿಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದಿದ್ದಾರೆ. ಕೇರಳದ ಸ್ಥಿತಿ ಬಗ್ಗೆ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ರಾಜ್ಯಕ್ಕೆ ಹಲವು ಸಲಹೆಗಳನ್ನೂ ನೀಡಿದ್ದಾರೆ. ದೇಶದ 41 ಜಿಲ್ಲೆಗಳಲ್ಲಿ ಪ್ರಸ್ತುತ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಹೆಚ್ಚಾಗಿದೆ ಎಂದೂ ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿದೆ.

ಅಂತರ ಇಳಿಕೆ?: ಕೊವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರವನ್ನು ತಗ್ಗಿಸುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ರೀತಿಯ ಯಾವ ಪ್ರಸಾವವೂ ಸದ್ಯಕ್ಕೆ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಒಂದು ಡೋಸ್‌ ಪಡೆದ 12-16 ವಾರಗಳ ಬಳಿಕವೇ ಎರಡನೇ ಡೋಸ್‌ ಪಡೆಯಲು ಅವಕಾಶವಿದೆ.

Advertisement

ಭಾರತ- ಯುಕೆ ಅಧ್ಯಯನ ಗಿನ್ನೆಸ್‌ ದಾಖಲೆಗೆ ಸೇರ್ಪಡೆ :

ಯುಕೆ ಆರೋಗ್ಯ ತಜ್ಞರ ನೇತೃತ್ವದಲ್ಲಿ ಭಾರತದ ವಿವಿಧ ಆಸ್ಪತ್ರೆಗಳಲ್ಲಿ ನಡೆದ ಕೋವಿಡ್‌-19 ವಿಶ್ವವ್ಯಾಪಿ ಅಧ್ಯಯನವು ಈಗ ಗಿನ್ನೆಸ್‌ ವಿಶ್ವದಾಖಲೆ ಮಾಡಿದೆ. “ಜಗತ್ತಿನ ಅತೀ ದೊಡ್ಡ ವೈಜ್ಞಾನಿಕ ಸಹಭಾಗಿತ್ವ’ ಎಂದು ಇದನ್ನು ಬಣ್ಣಿಸಲಾಗಿದೆ. ಭಾರತ ಸೇರಿದಂತೆ 116 ದೇಶಗಳಲ್ಲಿ 1.40 ಲಕ್ಷ ರೋಗಿಗಳ ಮೇಲೆ ಈ ಅಧ್ಯಯನ ನಡೆದಿತ್ತು. ಕೊರೊನಾ ವೈರಸ್‌ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿತ್ತು ಎಂದು ಭಾರತೀಯ ಮೂಲದ ಸರ್ಜನ್‌, ಬರ್ಮಿಂಗ್‌ಹ್ಯಾಂ ವಿವಿಯ ಅನಿಲ್‌ ಭಾಂಗು ತಿಳಿಸಿದ್ದಾರೆ.

ಇಸ್ರೇಲ್‌ನಲ್ಲಿ “ಎ.ವೈ.12′ ಹೆಸರಿನ ಕೊರೊನಾ ಉಪವಂಶಸ್ಥ ಪತ್ತೆ! :

ಕೊರೊನಾ ವೈರಾಣುವಿನ ಹೊಸ ಪ್ರಭೇದವಾದ ಡೆಲ್ಟಾ ವೈರಾಣುವಿನ ಬಗ್ಗೆ ನಾವು ಕೇಳಿದ್ದೇವೆ. ದೂರದ ಇಸ್ರೇಲ್‌ನಲ್ಲಿ ಡೆಲ್ಟಾ ಪ್ರಭೇದವನ್ನೇ ಮೀರಿಸಬಲ್ಲ ಕೊರೊನಾದ ಉಪವಂಶವೊಂದು ಸೃಷ್ಟಿಯಾಗಿದೆ! ವಿಜ್ಞಾನಿಗಳು ಅದಕ್ಕೆ “ಎ.ವೈ. 12′ ಎಂದು ಹೆಸರಿಟ್ಟಿದ್ದಾರೆ. ಇದು ಡೆಲ್ಟಾ ವೈರಾಣುವಿನಿಂದಲೇ ಸೃಷ್ಟಿಯಾದ, ಸ್ವರೂಪದಲ್ಲಿ ಸಾಂಪ್ರದಾಯಿಕ ಕೊರೊನಾ ವೈರಾಣುವಿಗಿಂತ ಭಿನ್ನವಾಗಿರುವ ವೈರಾಣು ಎಂದು ಹೇಳಲಾಗಿದೆ. ಇದಕ್ಕೆ ಸಾರ್ಸ್‌-ಕೋವ್‌-2, ಎ.ವೈ. 12 ಎಂದು ಹೆಸರಿಡಲಾಗಿದ್ದು, ಇದನ್ನು ಅಧ್ಯಯನ ಮಾಡಲೆಂದೇ “ಸಾರ್ಸ್‌-ಕೋವ್‌-2 ಜೆನೋಮಿಕ್ಸ್‌ ಕನ್ಸೋರ್ಟಿಯಂ ಐಎನ್‌ಎಸ್‌ಎಸಿಒಜಿ’ ಎಂಬ ತಜ್ಞರುಳ್ಳ ಸಮಿತಿಯನ್ನೂ ರಚಿಸಲಾಗಿದೆ. ಈ ಹೊಸ ವೈರಾಣುವಿನಿಂದ ಉಂಟಾಗುವ ಸೋಂಕನ್ನು ಎ.ವೈ. 12 ಸೋಂಕು ಎಂದೇ ಪರಿಗಣಿಸಲಾಗುತ್ತದೆ. ಇಸ್ರೇಲ್‌ನಲ್ಲಿ ಈಗಾಗಲೇ ಶೇ. 60 ಮಂದಿಗೆ ಪೂರ್ಣಪ್ರಮಾಣದಲ್ಲಿ “ಫೈಜರ್‌’ ಲಸಿಕೆ ನೀಡಲಾಗಿದೆ. ಆದರೆ ಆ ಲಸಿಕೆಗಳು ಎ.ವೈ. 12 ಸೋಂಕನ್ನು ನಿರ್ಬಂಧಿಸಬಲ್ಲವೇ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಹಾಗಾಗಿ, “ಎ.ವೈ.12′ ವೈರಾಣು ಆ ದೇಶದಲ್ಲಿ ಹೊಸ ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next