ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಸೋಮವಾರವೂ ಮುಂದುವರಿದಿದ್ದು ಹಲವು ಪ್ರದೇಶ ಪ್ರವಾಹದಿಂದ ಕಂಗೆಟ್ಟು ಹೋಗಿದ್ದು, 1942ರ ಬಳಿಕ ಭೀಕರ ಪ್ರಾಕೃತಿಕ ವಿಕೋಪಕ್ಕೆ ದೇವರ ನಾಡು ಸಾಕ್ಷಿಯಾಗಿದೆ.
ಗಾಳಿ, ಮಳೆ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 60 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಳೆ, ಪ್ರವಾಹಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಾವಿನ ಸಂಖ್ಯೆ 40ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ಸಾವಿರಾರು ಕೋಟಿ ನಷ್ಟ, ಪ್ರವಾಸೋದ್ಯಮಕ್ಕೆ ಕುತ್ತು:
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕೇರಳದ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಸುಮಾರು 10 ಸಾವಿರ ಕಿಲೋ ಮೀಟರನಷ್ಟು ರಸ್ತೆಗೆ ಹಾನಿಯಾಗಿದ್ದು, 8,316 ಕೋಟಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಗಂಟೆಗೆ 35ರಿಂದ 45ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕೇರಳ, ಲಕ್ಷದ್ವೀಪದಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೆಡ್ ಅಲರ್ಟ್:
ಇಡುಕ್ಕಿ, ವಯನಾಡ್, ಕಣ್ಣೂರ್, ಎರ್ನಾಕುಲಂ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ..ಈ ನಿಟ್ಟಿನಲ್ಲಿ ಜನರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಏತನ್ಮಧ್ಯೆ ಇಡುಕ್ಕಿ ಹಾಗೂ ಇಡಮಲಯಾರ್ ಡ್ಯಾಂಗಳಲ್ಲಿನ ನೀರಿನ ಮಟ್ಟ ಇಳಿಕೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಬರೋಬ್ಬರಿ 26 ವರ್ಷಗಳ ಬಳಿಕ ಇಡುಕ್ಕಿ ಡ್ಯಾಂನ ಗೇಟ್ ಗಳನ್ನು ತೆರೆಯಲಾಗಿತ್ತು.