Advertisement

ಕೇರಳ ಸಂಪರ್ಕ ರಸ್ತೆ ದುರಸ್ತಿಗೊಳಿಸಿದ ತಂಡ

11:40 PM Sep 30, 2019 | sudhir |

ಈಶ್ವರಮಂಗಲ: ಗಡಿಭಾಗದಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಗಳು ನಾದುರಸ್ತಿಯಲ್ಲಿದ್ದು, ಜನಪ್ರತಿನಿಧಿಗಳು ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ವಾಹನ ಸಂಚಾರವೇ ದುಸ್ತರವಾಗಿತ್ತು. ಮಳೆ ಕಡಿಮೆ ಯಾದ ತತ್‌ಕ್ಷಣ ಗಡಿಭಾಗದ‌ ಕನ್ನಡಿಗರು ಒಂದುಗೂಡಿ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿ‌ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಿದ್ದಾರೆ.

Advertisement

ಈಶ್ವರಮಂಗಲ-ಸುಳ್ಯಪದವು, ಕರ್ನೂರು- ಗಾಳಿಮುಖ ಮೊದಲಾದ ರಸ್ತೆಗಳು ಗಡಿಭಾಗದಲ್ಲಿವೆ. ಈ ರಸ್ತೆಗಳು ಕೇರಳವನ್ನು ಸಂಪರ್ಕಿಸುತ್ತಿವೆ. ಈ ರಸ್ತೆಯ ಜತೆಯಲ್ಲಿ ಪಂಚೋಡಿಯಿಂದ ಮಯ್ನಾಳವನ್ನು ಸಂಪರ್ಕಿಸುವ ರಸ್ತೆ ವಿಪರೀತ ಮಳೆಯಿಂದಾಗಿ ನೀರು ಹರಿದು ತೋಡಿನಂತಾಗಿತ್ತು.

ಪಂಚೋಡಿ ಭಜನ ಮಂದಿರದ ಪ್ರಯಾಣಿಕರ ತಂಗುದಾಣದಿಂ¨ಒಂದು ಕಿ.ಮೀ. ದೂರದಲ್ಲಿ ಕೇರಳ – ಕರ್ನಾಟಕ ಗಡಿ ಇದೆ. ಇಲ್ಲಿಂದ ದೇಲಂಪಾಡಿಗೆ ಕೇವಲ 2 ಕಿ.ಮೀ. ದೂರ. ಈ ಭಾಗದ ರಸ್ತೆ ಕೇರಳದಲ್ಲಿ ಇರುವುದರಿಂದ ರಸ್ತೆಗೆ ಡಾಮರು ಹಾಕಲಾಗಿದೆ. ಒಂದು ಕಿ.ಮೀ. ರಸ್ತೆಯಲ್ಲೇ ಮಳೆಗಾಲದಲ್ಲಿ ನೀರು ಹರಿದು ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದವು.

ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಆಯ್ದ 2 ಕಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿದೆ ಉಳಿದೆಡೆ ಹೊಂಡ-ಗುಂಡಿಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಅನಿವಾರ್ಯ ರಸ್ತೆ

ಮಯ್ನಾಳ, ದೇಲಂಪಾಡಿ, ನೂಜಿಬೆಟ್ಟು ಮುಂತಾದ ಕಡೆಯಿಂದ ಕರ್ನಾಟಕದ ಪುತ್ತೂರು, ಈಶ್ವರಮಂಗಲಕ್ಕೆ ಬರಲು ಇದು ಅತೀ ಹತ್ತಿರದ ರಸ್ತೆ. ನೂರಾರು ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಈ ರಸ್ತೆಯನ್ನು ಅವಲಂಬಿಸಿ ದ್ದಾರೆ. ಪ್ರತಿನಿತ್ಯ ಶಾಲಾ ಮಕ್ಕಳ ಬಸ್ಸುಗಳು ಕಷ್ಟಪಟ್ಟು ಸಂಚರಿಸುತ್ತಿವೆ.

Advertisement

ಶೈಕ್ಷಣಿಕ, ಸಾಮಾಜಿಕ, ವಾಣಿಜ್ಯ, ಧಾರ್ಮಿಕ ವಾಗಿ ಸಂಬಂಧ ಬೆಳೆಯಲು ಈ ರಸ್ತೆ ಅನಿವಾರ್ಯವಾಗಿದೆ. ಪಂಚೋಡಿ- ಮಯ್ನಾಳ ರಸ್ತೆ ಹಲವು ವರ್ಷ ಗಳಿಂದ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಯಾಗಿಲ್ಲ. ಎರಡು ರಾಜ್ಯಗಳ ನಡುವೆ ಸಂಪರ್ಕ ಬೆಸೆಯುವ ಹತ್ತಿರದ ರಸ್ತೆಯಾಗಿದೆ. ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಬೇಕಾಗಿದೆ.

ರಸ್ತೆ ದುರಸ್ತಿ
ರಸ್ತೆಯ ದುರವಸ್ಥೆಯನ್ನು ಕಂಡು ಸದಸ್ಯರು ಸಾರ್ವಜನಿಕರ ಸಹಕಾರ ದೊಂದಿಗೆ ದುರಸ್ತಿಗೊಳಿಸಿದರು. ಸ್ಥಳೀಯರು ಉಪಾಹಾರ, ಊಟದ ವ್ಯವಸ್ಥೆಯನ್ನು ಮಾಡಿದರು. ಶ್ರಮದಾನದಲ್ಲಿ ಮಯ್ನಾಳ ಭೈರವಗುಡ್ಡೆ ಮೂಕಾಂಬಿಕಾ ಕಲಾಸಂಗಮದ ಸದಸ್ಯರಾದ ಸದಾನಂದ ಪೂಜಾರಿ ಮಯ್ನಾಳ, ರಾಜಕುಮಾರ ಮಯ್ನಾಳ, ಅಶೋಕ ಸುವರ್ಣ ಮಯ್ನಾಳ, ಹರೀಶ್‌ ಸುವರ್ಣ, ರಮೇಶ್‌ ಸುವರ್ಣ, ಜೀವನ್‌, ಪುರುಷೋತ್ತಮ ಬೊಲ್ಪರ್‌, ರವಿ, ರಮೇಶ್‌ ಗೊಳಿತಡ್ಕ, ವಿನಯ ಎಂಕನಮೂಲೆ, ಗಿರೀಶ್‌ ಮಯ್ನಾಳ, ದಿನೇಶ್‌ ಮಯ್ನಾಳ, ಪ್ರಶಾಂತ್‌ ಮಯ್ನಾಳ, ಯೋಗೀಶ್‌ ಅರಂಬೂರು, ರಮೇಶ್‌ ಮಯ್ನಾಳ, ಆನಂದ ಬೋಲ್ಪರ್‌, ಚೇತನ ಶಾಂತಿಮಲೆ ಭಾಗವಹಿಸಿದ್ದರು.

ಇಚ್ಛಾಶಕ್ತಿಯ ಕೊರತೆ?
ಗಡಿಭಾಗದ ರಸ್ತೆಗಳ ಅಭಿವೃದ್ಧಿಗೆ ಹಲವು ಯೋಜನೆಗಳು ಇದ್ದರೂ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಇಚ್ಛಾ ಶಕ್ತಿಯ ಕೊರತೆ ಕಾರಣವಾಗಿದೆ. ದೊಡ್ಡ ಮೊತ್ತದ ಅನುದಾನದಿಂದ ರಸ್ತೆ ಅಭಿವೃದ್ಧಿ ಗೊಳಿಸಿ ಎರಡು ರಾಜ್ಯಗಳ ನಡುವೆ ಸಂಬಂಧ ವೃದ್ಧಿಯಾಗಬೇಕಾಗಿದೆ.

ಶಾಸಕರಿಗೆ ಮನವಿ
ಗ್ರಾ.ಪಂ.ನಿಂದ ಉದ್ಯೋಗ ಖಾತರಿಯಲ್ಲಿ ಎರಡು ಕಡೆ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಯಾಗಬೇಕಾದರೆ ದೊಡ್ಡ ಮೊತ್ತದ ಅನುದಾನದ ಅಗತ್ಯವಿದೆ. ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಗಿದೆ. ಭರವಸೆ ನೀಡಿದ್ದಾರೆ.
– ಶ್ರೀರಾಮ್‌ ಪಕ್ಕಳ,
ಉಪಾಧ್ಯಕ್ಷರು, ನೆಟ್ಟಣಿಗೆಮುಟ್ನೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next