Advertisement

Kerala ಬಾಂಬ್‌ ಸ್ಫೋಟ ಹಿನ್ನೆಲೆ: ದ.ಕ. ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

12:21 AM Oct 30, 2023 | Team Udayavani |

ಮಂಗಳೂರು: ಕೇರಳದಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿರುವ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಗಡಿಭಾಗದಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಚೆಕ್‌ಪೋಸ್ಟ್‌ ಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಬಂದೋಬಸ್ತ್ ನಿಗಾ ವಹಿಸಿದ್ದಾರೆ. ಮಂಗಳೂರು ನಗರ ಕೇಂದ್ರ ಭಾಗ ಸೇರಿದಂತೆ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿಯೂ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ವಿಮಾನ ನಿಲ್ದಾಣ, ಬಂದರು, ಧಾರ್ಮಿಕ ಕ್ಷೇತ್ರಗಳು, ತೀರ ಪ್ರದೇಶಗಳು, ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ.

ಕೇರಳ ಗಡಿಭಾಗದಿಂದ ಮಂಗಳೂರು ಪ್ರವೇಶಿಸುವ ಸ್ಥಳಗಳು ಸೇರಿದಂತೆ ವಿವಿಧೆಡೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಉಳ್ಳಾಲ: ವಾಹನಗಳ ತಪಾಸಣೆ
ಉಳ್ಳಾಲ: ಕೇರಳದಲ್ಲಿ ರವಿವಾರ ನಡೆದ ಸರಣಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಪೊಲೀಸ್‌ ಚೆಕ್‌ ಪಾಯಿಂಟ್‌ ಮೂಲಕ ಪೊಲೀಸರು ಕೇರಳ ಮತ್ತು ಕರ್ನಾಟಕ ಪ್ರವೇಶಿಸುವ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿ, ತಚ್ಚಾಣಿ, ದೇವಿಪುರ ಗಡಿಭಾಗದಲ್ಲಿ ಚೆಕ್‌ ಪಾಯಿಂಟ್‌ಗಳನ್ನು ಹಾಕಲಾಗಿದ್ದು, ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮುದುಂಗಾರುಕಟ್ಟೆ, ನಾರ್ಯ, ನಂದರಪಡ್ಪು, ತೌಡುಗೋಳಿ ಕ್ರಾಸ್‌, ನೆತ್ತಿಲಪದವು ಗಡಿಭಾಗದಲ್ಲಿ ಚೆಕ್‌ಪಾಯಿಂಟ್‌ಗಳ ಮೂಲಕ ಕರ್ನಾಟಕ ಒಳಬರುವ ವಾಹನಗಳು ಮತ್ತು ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

Advertisement

ಚರ್ಚ್‌ ಸೇರಿದಂತೆ
ಧಾರ್ಮಿಕ ಕೇಂದ್ರಗಳಿಗೆ ಭದ್ರತೆ
ಉಳ್ಳಾಲ ಪೊಲೀಸ್‌ ಠಾಣ ವ್ಯಾಪ್ತಿಯ ಪೆರ್ಮನ್ನೂರು, ತೊಕ್ಕೊಟ್ಟು ಡಿವೈನ್‌ ಕೇಂದ್ರ, ಚೆಂಬುಗುಡ್ಡೆ ಪ್ರಾರ್ಥನಾ ಕೇಂದ್ರ, ಬಬ್ಬುಕಟ್ಟೆ, ಪಾನೀರು, ರಾಣಿಪುರ ಚರ್ಚ್‌ಗಳಿಗೆ ಭದ್ರತೆ ಏರ್ಪಡಿಸಲಾಗಿದೆ.ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಡಿಪು, ಪಜೀರು, ಎಲಿಯಾರ್‌ ಪದವು, ಮುಡಿಪು ಬೆಟ್ಟದಲಿರುವ ಚರ್ಚ್‌ ಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಉಳ್ಳಾಲ, ಸೋಮೇಶ್ವರ ಬೀಚ್‌ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ, ಮಸೀದಿ, ದೇವಸ್ಥಾನಗಳ ಬಳಿಯೂ ಪೊಲೀಸ್‌ ಗಸ್ತು ಪಡೆ ಕಾರ್ಯ ನಿರ್ವಹಿಸುತ್ತಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ವ್ಯಾಪಕ ತಪಾಸಣೆ
ಕಾಸರಗೋಡು: ಕಲಮಸ್ಸೆರಿಯಲ್ಲಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ವ್ಯಾಪಕ ತಪಾಸಣೆ ನಡೆಸಲಾಯಿತು. ಬಾಂಬ್‌ ಸ್ಕ್ವಾಡ್‌ ಆರ್‌ಪಿಎಫ್‌, ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.

ಬಸ್‌ ನಿಲ್ದಾಣ ಸಹಿತ ಜನರು ಸೇರುವ ಪ್ರದೇಶಗಳಲ್ಲಿ ಪೊಲೀಸ್‌ ಭದ್ರತೆ ಬಿಗುಗೊಳಿಸಲಾಗಿದೆ. ವಾಹನ ತಪಾಸಣೆ ನಡೆಯುತ್ತಿದೆ. ಟೂರಿಸಂ ಕೇಂದ್ರಗಳಲ್ಲಿ ವಿಶೇಷ ಜಾಗ್ರತೆ ವಹಿಸಲಾಗಿದೆ. ಹೊಟೇಲ್‌ಗ‌ಳು, ವಸತಿ ಗೃಹಗಳಲ್ಲಿ ತಪಾಸಣೆ ನಡೆಸಲು ನಿರ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next