Advertisement

ಕೆರಕಲಮಟ್ಟಿ ವಾಡೆ

08:51 AM May 04, 2019 | Vishnu Das |

ಬಾಗಲಕೋಟೆಯ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಕೆರಕಲಮಟ್ಟಿ ಗ್ರಾಮವಿದೆ. ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಈ ಗ್ರಾಮವು ನಾಡಗೌಡರ ವಾಡೆಯ ಮೂಲಕ ಪ್ರಸಿದ್ದಿ ಪಡೆದಿದೆ.

Advertisement

ಈ ವಾಡೆಯನ್ನು 1930 ರಲ್ಲಿ, ಆಗಿನ ಕೆರೂರ ಪಟ್ಟಣದ ಇನಾಮದಾರಿಕೆ ಮಾಡುತ್ತಿದ್ದ ರಾಮಚಂದ್ರಗೌಡ ನಾಡಗೌಡ ನಿರ್ಮಿಸಿದ್ದಾರೆ. ಈ ವಾಡೆಯನ್ನು ಸುಮಾರು 15 ವರ್ಷ ಕಾಲಾವಕಾಶ ತೆಗೆದುಕೊಂಡು ನಿರ್ಮಿಸಲಾಗಿದೆ.

ಈ ವಾಡೆಯ ಗೋಡೆಯು ಅಂದಾಜು 35 ಅಡಿ ಎತ್ತರವಿದ್ದು, 2 ಎಕರೆ ಜಾಗದುದ್ದಕ್ಕೂ ಹರಡಿಕೊಂಡಿದೆ ಈ ವಾಡೆಯನ್ನು ಚುಂಚನಗುಡ್ಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿನ ಕಲ್ಲು, ಉಸುಕು ಹಾಗೂ ಗಚ್ಚು ಬಳಸಿಕೊಂಡು ನಿರ್ಮಿಸಲಾಗಿದೆ. ಈ ವಾಡೆಯ ಪ್ರವೇಶಕ್ಕೆ ಸುಂದರ ಕಲಾಕೃತಿಯ ತಲಬಾಗಿಲು (ದ್ವಾರ ಬಾಗಿಲು)ಇದೆ. ವಾಡೆಯಲ್ಲಿ ಅಡುಗೆ ಕೋಣೆ, ದೇವರ ಜಗಲಿ, ಚೌಕಿ, ಖಜಾನೆ, ಶಸ್ತ್ರಾಗಾರ, ಪಡಸಾಲೆ, ಸದರ (ನ್ಯಾಯ ಮಾಡುವ ಸ್ಥಳ), ವಿಶ್ರಾಂತಿ ಗೃಹ, ಶಯ್ನಾಗಾರ, ಹೆರಿಗೆ ಕೋಣೆ, ಪ್ರಸಾದ ಕೋಣೆ, ದವಸ ಧಾನ್ಯ ಶೇಖರಿಸುವ ಸ್ಥಳ, ನೆಲಮನೆ, ದಾಖಲೆಗಳ ಕೋಣೆ, ಆಡಳಿತ ಕಚೇರಿ ಕೋಣೆ, ಕುದುರೆ ಲಾಯ, ಸೇವಕರು-ಗುಮಾಸ್ತರು-ಕೆಲಸಗಾರರು ವಾಸಿಸುವ ಕೋಣೆಗಳು ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಈ ವಾಡೆಯ ಕಟ್ಟಡದ ಮೇಲೆ ಮೂಲಕಾರಕನಾದ ಇನಾಮದಾರ ರಾಮಚಂದ್ರಗೌಡರ ಹೆಸರನ್ನು ಹಾಕಿ¨ªಾರೆಯೇ ಹೊರತು ಅದನ್ನು ಕಟ್ಟಿದ ನಿಪುಣನ ಹೆಸರನ್ನಾಗಲಿ, ಇತರೆ ದಾಖಲೆಯನ್ನೂ ಅಲ್ಲಿ ಕಾಣಸಿಗುವುದಿಲ್ಲ. ಇಂದು ಈ ವಾಡೆಯಲ್ಲಿ ರಾಮಚಂದ್ರಗೌಡರ ವಂಶಸ್ಥರು ವಾಸಿಸುತ್ತಿ¨ªಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಆಗಿನ ಕೆರೂರ ಪಟ್ಟಣದ ವ್ಯಾಪ್ತಿಯಲ್ಲಿ ಬರುತ್ತಿದ್ದ ಈ ಕೆರಕಲಮಟ್ಟಿಯ ನಾಡಗೌಡರು, ಸುತ್ತಲಿನ 14 ಹಳ್ಳಿಯ ಮೇಲುಸ್ತುವಾರಿಯ ಇನಾಮದಾರಿಕೆಯ ಜವಾಬ್ದಾರಿ ಪಡೆದುಕೊಂಡಿದ್ದರು. ಮೇಲು-ಕೀಳು, ಅಧಿಕಾರದ ದರ್ಪ ಇದ್ಯಾವುದೂ ರಾಮಚಂದ್ರಗೌಡ ಆಡಳಿತದಲ್ಲಿರಲಿಲ್ಲ. ಇದೊಂದು ಸರ್ವಜನಾಂಗದವರು ಸ್ವತಂತ್ರವಾಗಿ ಓಡಾಡುವ ಸ್ಥಳವಾಗಿತ್ತು. ರಾಮಚಂದ್ರಗೌಡರು ಒಳ್ಳೆಯ ಮನಸುಳ್ಳ ಹಾಗೂ ಸರ್ವರೂ ಸಮಾನರೆಂದು ತಿಳಿಯುತ್ತಿದ್ದ ಇನಾಮದಾರರಾಗಿದ್ದರು.

ಅಂಥ ಅಪರೂಪದ ವ್ಯಕ್ತಿತ್ವ ಹೊಂದಿರುವ ನಾಡಗೌಡರ ಮನೆತನದ ವಾಡೆಯು ಒಂದು ನ್ಯಾಯ ದೇವತೆಯ ಸ್ಥಳದಂತೆ ಜನರು ಭಾವಿಸಿಕೊಂಡು ಇಂದಿಗೂ ತಮ್ಮ ಸಣ್ಣಪುಟ್ಟ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತಾರೆ. ರಾಮಚಂದ್ರಗೌಡ ನಾಡಗೌಡರ ವಾಡೆಯಲ್ಲಿ ಅಂದೂ ನಿರಂತರ ದಾಸೋಹ ಇರುತ್ತಿತ್ತು. ಇಂದಿಗೂ ಆ ಊರಿನ ಜನರಲ್ಲಿ ವಾಡೆಯ ಬಗ್ಗೆ ಕಿಂಚಿತ್ತೂ ಗೌರವ, ಅಭಿಮಾನ ಕಡಿಮೆಯಾಗಿಲ್ಲ. ತನ್ನ ಕಲಾವಿನ್ಯಾಸದಿಂದಲೇ ನೋಡುಗರನ್ನು ವಿಸ್ಮಯಗೊಳಿಸುತ್ತದೆ.

Advertisement

ಅಪೂರ್ಣಗೊಂಡ ವಾಡೆ
14 ಹಳ್ಳಿಗಳಿಂದ ಬರುವ ಆದಾಯದಿಂದ ರಾಮಚಂದ್ರಗೌಡ ನಾಡಗೌಡರು ಈ ವಾಡೆಯ ಕೆಲಸ ಪ್ರಾರಂಭಿಸಿದರು. 1930 ರಲ್ಲಿ ವಾಡೆಯ ಅರ್ಧ ಕಾಮಗಾರಿ ಪೂರ್ಣಗೊಂಡಿತ್ತು. ಜ್ಯೋತಿಷಿಯೊಬ್ಬರು ಈ ವಾಡೆಯ ವಾಸ್ತು ಸರಿಯಿಲ್ಲ ಎಂದು ಹೇಳಿದರಂತೆ. ಆ ಜ್ಯೋತಿಷಿಯ ಮಾತು ಕೇಳಿದ ನಾಡಗೌಡರು ವಾಡೆಯ ಕಟ್ಟಡದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು. ರಾಮಚಂದ್ರಗೌಡರು ಅಪೂರ್ಣಗೊಳಿಸಿದ ವಾಡೆಯ ಕಟ್ಟಡವನ್ನು ಪೂರ್ಣಗೊಳಿಸುವ ಸಾಹಸ ಕಾರ್ಯಕ್ಕೆ ಅವರ ವಂಸಸ್ಥರು ಕೈ ಹಾಕಲಿಲ್ಲ. ವಾಡೆಯು ಅಪೂರ್ಣವಾಗಿದ್ದರೂ ನೋಡುಗಗನ್ನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ.

ಮುಳುಗಿದ ವಾಡೆಗಳು

ಬಾಗಲಕೋಟೆ ಜಿಲ್ಲೆಯಲ್ಲಿನ ಕೆಲವು ವಾಡೆಗಳು ಸಂರಕ್ಷಿಸದೇ ನೆಲಕಚ್ಚಿವೆ. ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಸುಮಾರು 15 ವಾಡೆಗಳು ಮತ್ತು ಮಲಪ್ರಭಾ ನದಿಗೆ ಕಟ್ಟಲಾಗಿರುವ ರೇಣುಕಾ ಅಣೆಕಟ್ಟೆ
ಹಿನ್ನೀರ ಒಡಲಲ್ಲಿ ಕನಿಷ್ಠ ಎರಡು ವಾಡೆಗಳು ಮುಳುಗಿ ಹೋಗಿವೆ. ಈ ಬಾಗಲಕೋಟೆ ಜಿಲ್ಲೆಯ ಪೈಕಿ 89-90 ವರ್ಷವಾದರೂ ಮಳೆ, ಗಾಳಿ, ಬರ-ಸಿಡಿಲಿಗೂ ಅಂಜದೇ ತನ್ನ ಸೌಂದರ್ಯ ಕಾಪಾಡಿಕೊಂಡು ಈ ವಾಡೆಯು ಕಂಗೊಳಿಸುತ್ತಿದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ 250ಕ್ಕೂ ಅಧಿಕ ವಾಡೆಗಳಿದ್ದು, ಅವುಗಳು ನಮ್ಮ ಇತಿಹಾಸ, ಸಂಸ್ಕೃತಿ ಸಂಪ್ರದಾಯದ ಪ್ರತಿರೂಪದ ಜತೆಗೆ ಹಿಂದಿನ ಕಾಲದ ಜಹಗೀರುದಾರರ, ದೇಸಾಯಿ, ಇನಾಮದಾರಿಕೆ ಮನೆತನದ ಆಳ್ವಿಕೆಯ ಚಿತ್ರಣ ಕಟ್ಟಿಕೊಡುತ್ತವೆ.

ಬೆಳ್ಳಿ ತೆರೆಯ ನಂಟು

ಸಿನಿಮಾ ಪ್ರಪಂಚದಲ್ಲೂ ವಾಡೆಗಳು ತನ್ನ ಗತ್ತು ಗೈರತ್ತು ತೋರಿಸಿವೆ. ದೇವರಾಜ್‌ ಅಭಿನಯದ ಹುಲಿಯಾ, ಅಕ್ಷಯಕುಮಾರ ಅಭಿನಯದ ರೌಡಿ ರಾಠೊಡ್‌, ದುನಿಯಾ ವಿಜಯ್‌ ಅಭಿನಯದ ಭೀಮಾ ತೀರದಲ್ಲಿ, ಕಿಚ್ಚ ಸುದೀಪ ಅಭಿನಯದ ವೀರ ಮದಕರಿ ಚಿತ್ರಗಳಲ್ಲಿ ಈ ವಾಡೆಯ ಖದರ… ಎದ್ದು ಕಾಣುತ್ತದೆ. ಅಂತಃಪುರ ಧಾರಾವಾಹಿ ಸೇರಿದಂತೆ ಪ್ಯಾಟಿ ಹುಡುಗಿಯರ ಹಳ್ಳಿ ಲೈಫ್ ರಿಯಾಲಿಟಿ ಶೋ ಕೂಡಾ ಈ ವಾಡೆಯಲ್ಲಿ ಚಿತ್ರೀಕರಣಗೊಂಡಿದೆ.

ರೇವಣ್ಣ ಅರಳಿ

Advertisement

Udayavani is now on Telegram. Click here to join our channel and stay updated with the latest news.

Next