Advertisement
ನೇರಳಕಟ್ಟೆ-ಚಿತ್ತೂರು ಮುಖ್ಯ ರಸ್ತೆಯ ಹಾಡಿಬಿರ್ಗಿಯಿಂದ ಕೆರಾಡಿಗೆ ಸಂಪರ್ಕಿಸುವ ಸುಮಾರು 366 ಮೀಟರ್ ಉದ್ದದ, 3.75 ಮೀಟರ್ ಅಗಲದ ಸಂಪರ್ಕ ರಸ್ತೆಗೆ ಎರಡು ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಇದಕ್ಕೆ 10 ಲಕ್ಷ ರೂ. ಮಂಜೂರಾಗಿತ್ತು. ಬಳಿಕ ಮಳೆಗಾಲದಲ್ಲಿಯೇ ಈ ರಸ್ತೆಯ ಡಾಮರು ಕಿತ್ತು ಹೋಗಿ ಅಲ್ಲಲ್ಲಿ ಬೃಹತ್ ಹೊಂಡಗಳು ಎದ್ದಿವೆ. ಅದರಲ್ಲೂ 50 ಮೀ. ರಸ್ತೆಗೆ ಡಾಮರು ಹಾಕಿದ ಜಾಗ ಸಂಪೂರ್ಣ ಕೆಸರಿನಿಂದ ಕೂಡಿದೆ.
ಹಾಡಿಬಿರ್ಗಿ ಕ್ರಾಸ್-ಕೆರಾಡಿ ರಸ್ತೆ ಹಾಳಾಗಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಆಗಿದೆ. ಒಂದೆರಡು ಕಡೆಗಳಲ್ಲಿ ಅಗತ್ಯವಿದ್ದರೂ ಮೋರಿ ಅಳವಡಿಸಿಲ್ಲ. ಅಲ್ಲದೆ ಒಂದು ಕಡೆಯಿಂದ ಜೇಡಿಮಣ್ಣಿನ ಬರೆಯಿದ್ದು, ಅದು ವರ್ಷ- ವರ್ಷವೂ ಮಳೆಗಾಲದಲ್ಲಿ ಕುಸಿಯುತ್ತದೆ. ಹಾಗಾಗಿ ಈ 1 ಕಿ.ಮೀ. ಉದ್ದದ ರಸ್ತೆಗೆ ಡಾಮರು ಹಾಕಿದರೂ ಒಂದೇ ಮಳೆಗಾಲದಲ್ಲಿ ಎದ್ದು ಹೋಗುತ್ತದೆ. ಕಾಂಕ್ರೀಟ್ ಕಾಮಗಾರಿ ನಡೆಸಿದರೆ ಮಾತ್ರ ಅನುಕೂಲವಾಗಬಹುದು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಪ್ರಮುಖ ರಸ್ತೆ
ಕೆರಾಡಿ ಹಾಗೂ ಬೆಳ್ಳಾಲ ಗ್ರಾಮಗಳೆರಡು ಸೇರಿ ಒಟ್ಟು 6 ಸಾವಿರ ಮಂದಿ ಗ್ರಾಮಸ್ಥರಿದ್ದು, ಇದರಲ್ಲಿ ಶೇ. 90ರಷ್ಟು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಕೆರಾಡಿ ಗ್ರಾ.ಪಂ., ಶಾಲೆ, ಶ್ರೀ ವರಸಿದ್ಧಿ ವಿನಾಯಕ ಕಾಲೇಜು, ಬ್ಯಾಂಕ್, ಉಪ ಆರೋಗ್ಯ ಕೇಂದ್ರಗಳಿಗೆ ತೆರಳಲು ಗ್ರಾಮಸ್ಥರಿಗೆ ಇರುವುದು ಇದೊಂದೇ ರಸ್ತೆ. ಈಗಲೇ ಇಷ್ಟೊಂದು ಹದಗೆಟ್ಟ ರಸ್ತೆ ಮಳೆಗಾಲದಲ್ಲಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.
Related Articles
ಪ್ರಸ್ತಾವನೆ ಸಲ್ಲಿಕೆ
ಹಿಂದೆ ಈ ರಸ್ತೆಗೆ ಹಾಕಲಾದ ಡಾಮರು ಮಳೆಗಾಲದಲ್ಲಿ ಎದ್ದು ಹೋಗಿದೆ. ಜೇಡಿಮಣ್ಣಿನ ಬರೆ ರಸ್ತೆಗೆ ಬೀಳುತ್ತಿದ್ದು, ಇದರಿಂದ ಡಾಮರು ಉಳಿಯುವುದಿಲ್ಲ, ಕಾಂಕ್ರೀಟ್ ಹಾಕಿದರೆ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ರಾಘವೇಂದ್ರ ಕೊಠಾರಿ, ಅಧ್ಯಕ್ಷರು, ಕೆರಾಡಿ ಗ್ರಾ.ಪಂ.
Advertisement