Advertisement

ಮೂರೇ ತಿಂಗಳಿಗೆ ರಾಡಿಯೆದ್ದ ಕೆರಾಡಿ ರಸ್ತೆ: ಮರು ಡಾಮರಿಗೆ ಆಗ್ರಹ

06:00 AM Aug 28, 2018 | Team Udayavani |

ಕೆರಾಡಿ: ಊರವರ ಅನೇಕ ವರ್ಷಗಳ ಬೇಡಿಕೆಗೆ ಸ್ಪಂದಿಸಿ, ತರಾತುರಿಯಲ್ಲಿ ರಸ್ತೆಗೆ ಡಾಮರೇನೋ ಆಯಿತು. ಆದರೆ ಮೂರೇ ತಿಂಗಳಿಗೆ ಡಾಮರು ಕಿತ್ತು ಹೋಗಿದೆ. 10 ಲಕ್ಷ ರೂ. ವೆಚ್ಚದಲ್ಲಿ ನಡೆದ ಕೆರಾಡಿ ರಸ್ತೆಯ ಕಾಮಗಾರಿ ಪ್ರಯೋಜನಕ್ಕಿಲ್ಲದಂತಾಗಿದೆ.
 
ಹಾಡಿಬಿರ್ಗಿ ಕ್ರಾಸ್‌ನಿಂದ ಕೆರಾಡಿಗೆ ಸುಮಾರು 366 ಮೀಟರ್‌ ಉದ್ದದ, 3.75 ಮೀಟರ್‌ ಅಗಲದ ಸಂಪರ್ಕ ರಸ್ತೆಗೆ ಕಳೆದ ಎಪ್ರಿಲ್‌ – ಮೇನಲ್ಲಿ ಡಾಮರೀಕರಣಗೊಂಡಿತ್ತು. ಮುಖ್ಯಮಂತ್ರಿಯವರ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಇದಕ್ಕೆ 10 ಲಕ್ಷ ರೂ. ಕೂಡ ಮಂಜೂರಾಗಿತ್ತು. ಒಂದೇ ಮಳೆಗಾಲಕ್ಕೆ ಆ ರಸ್ತೆಯೆಲ್ಲ ಕಿತ್ತು ಹೋಗಿದೆ. ಅಲ್ಲಲ್ಲಿ ಬೃಹತ್‌ ಹೊಂಡಗಳು ಎದ್ದಿವೆ. ಕೆಲವೆಡೆ ಡಾಮರೇ ಕಾಣುತ್ತಿಲ್ಲ. ವಾಹನ ಸವಾರರಂತೂ ಈ ರಸ್ತೆಯಲ್ಲಿ ಸರ್ಕಸ್‌ ಮಾಡಿ ಸಂಚರಿಸಬೇಕಾದ ಸ್ಥಿತಿ ಇದೆ. ಅದರಲ್ಲೂ 50 ಮೀ. ರಸ್ತೆಗೆ ಡಾಮರು ಹಾಕಿದ ಜಾಗ ತುಂಬಾ ಜೇಡಿಮಣ್ಣೇ ಇದ್ದು, ಅಲ್ಲಿ ಸಂಪೂರ್ಣ ಕೆಸರುಮಯವಾಗಿದೆ. 

Advertisement

ಸರಿಯಾದ ಚರಂಡಿಯಿಲ್ಲ
ಹಾಡಿಬಿರ್ಗಿ ಕ್ರಾಸ್‌ – ಕೆರಾಡಿ ರಸ್ತೆ ಈ ಪರಿ ಹದಗೆಡಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಒಂದೆರಡು ಕಡೆಗಳಲ್ಲಿ ಮೋರಿ ಅಗತ್ಯವಿದ್ದರೂ, ಅಲ್ಲಿ ಮೋರಿ ನಿರ್ಮಿಸಲು ಮುಂದಾಗಿಲ್ಲ. 

ಮರು ಡಾಮರು ಕಾಮಗಾರಿಗೆ ಆಗ್ರಹ
ಡಾಮರೀಕರಣಗೊಂಡ ಮೂರೇ ತಿಂಗಳಲ್ಲಿ ಡಾಮರು ಕಿತ್ತುಹೋಗಿರುವುದರಿಂದ ಇದರ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರೇ ಮರು ಡಾಮರೀಕರಣ ಮಾಡಿಕೊಡಲಿ. ಈ ಸಂಬಂಧ ಶಾಸಕರು, ಸಂಸದರಿಗೂ ದೂರು ನೀಡಲಾಗುವುದು ಎಂದು ಸ್ಥಳೀಯರು ಹೇಳಿದ್ದಾರೆ.

ಕಳಪೆ ಕಾಮಗಾರಿ: ಆರೋಪ
ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆ ಡಾಮರೀಕರಣ ಮಾಡುತ್ತಾರೆ. ಅದು ಒಂದು ಮಳೆಗಾಲಕ್ಕೆ ಕೂಡ ಸರಿಯಾಗಿ ಉಪಯೋಗಕ್ಕೆ ಬರದಿದ್ದರೆ ಹೇಗೆ? 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ 366 ಮೀಟರ್‌ ಉದ್ದದ ರಸ್ತೆಯು ಕಳಪೆ ಕಾಮಗಾರಿಯಿಂದಾಗಿಯೇ ಮೂರೇ ತಿಂಗಳಿಗೆ ಹಾಳಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.  

ಮತ್ತೆ ಡಾಮರು ಕಾಮಗಾರಿಗೆ ಪ್ರಯತ್ನ
ಕೆರಾಡಿ ಮತ್ತು ಕಂಡ್ಲೂರು ರಸ್ತೆ ಕಳೆದ ಎಪ್ರಿಲ್‌ – ಮೇನಲ್ಲಿ ಡಾಮರೀಕರಣಗೊಂಡಿತ್ತು. ಅದೀಗ ಹಾಳಾಗಿ ಹೋಗಿದ್ದು, ಈ ಸಂಬಂಧ ಮುಖ್ಯ ಎಂಜಿನಿಯರ್‌ ಬಳಿ ಮಾತನಾಡಿದ್ದೇನೆ. ಗುತ್ತಿಗೆ ವಹಿಸಿಕೊಂಡವರೇ ಮತ್ತೆ ಡಾಮರೀಕರಣ ಮಾಡಿಕೊಡುತ್ತಾರೆ ಅಂತ ಹೇಳಿದ್ದಾರೆ. 
– ಬಿ.ಎಂ. ಸುಕುಮಾರ್‌ ಶೆಟ್ಟಿ, 
ಬೈಂದೂರು ಶಾಸಕರು

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next