ಕೀನ್ಯಾ(ನೈರೋಬಿ): ಪತ್ನಿ ಸೇರಿದಂತೆ 42 ಮಹಿಳೆಯರನ್ನು ಹ*ತ್ಯೆಗೈದಿದ್ದ ಕೀನ್ಯಾದ ಸರಣಿ (Serial) ಹಂತಕ “ವ್ಯಾಂಪೈರ್” (Vampire) ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಹತ್ತು ಮಹಿಳೆಯರ ಶವ ಹಾಗೂ ಖ್ವೇರ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯರ ದೇಹದ ಭಾಗಗಳು ಪತ್ತೆಯಾಗಿದ್ದ ನಂತರ ಜುಲೈನಲ್ಲಿ ಸೀರಿಯಲ್ ಕಿಲ್ಲರ್ ಕೋಲ್ಲಿನ್ಸ್ ಜುಮೈಸಿ ಖಾಲುಶಾನನ್ನು ನೈರೋಬಿಯ ಪೊಲೀಸ್ ಠಾಣೆಯ ಜೈಲಿನಲ್ಲಿ ಇರಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಮಂಗಳವಾರ (ಆ.20) ಬೆಳಗ್ಗೆ ಜೈಲುಕೋಣೆಯ ತಂತಿಯ ಮೆಶ್ ಅನ್ನು ಕತ್ತರಿಸಿ, ನಂತರ ಜೈಲು ಆವರಣದ ಗೋಡೆಯನ್ನು ಹತ್ತಿ ವ್ಯಾಂಪೈರ್ ಹಾಗೂ ಇತರ 12 ಕೈದಿಗಳು ಪರಾರಿಯಾಗಿರುವುದಾಗಿ ಕ್ರಿಮಿನಲ್ ಇನ್ವೆಸ್ಟಿಗೇಷನ್ಸ್ ಡೈರೆಕ್ಟೋರೇಟ್ ನ ಮುಖ್ಯಸ್ಥ ಮೊಹಮ್ಮದ್ ಅಮಿನ್ ತಿಳಿಸಿರುವುದಾಗಿ ವರದಿಯಾಗಿದೆ.
ಇದೊಂದು ಹೈಪ್ರೋಪೈಲ್ ಪ್ರಕರಣವಾಗಿದ್ದು, ಗಂಭೀರ ಕೊ*ಲೆ ಆರೋಪಗಳನ್ನು ಎದುರಿಸುತ್ತಿರುವ ಅಪರಾಧಿಗಳು ಪರಾರಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅಮಿನ್ ನ್ಯೂಸ್ ಏಜೆನ್ಸಿ APಗೆ ತಿಳಿಸಿದ್ದಾರೆ.
ಬಂಧಿತ ಖಾಲುಶಾ ವಿಚಾರಣೆ ವೇಳೆ ತಾನು ಪತ್ನಿ ಸೇರಿದಂತೆ 42 ಮಹಿಳೆಯರನ್ನು ಕೊಂ*ದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈತನ ಮನೆಯ ಶೋಧ ನಡೆಸಿದ್ದ ವೇಳೆ ಪೊಲೀಸರಿಗೆ ನೈಲಾನ್ ಹಗ್ಗ, ಮಚ್ಚು ಹಾಗೂ ರಕ್ತಸಿಕ್ತವಾಗಿರುವ ಗ್ಲೌಸ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.