ಪಣಂಬೂರು: ಬಜಪೆ ಕೆಂಜಾರಿನ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಸಂಭವಿಸಿದ ವಿಮಾನ ದುರಂತದ 9ನೇ ವರ್ಷದ ಸ್ಮರಣಾರ್ಥ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯ ಕ್ರಮ ಬುಧವಾರ ಜರಗಿತು.
ದ.ಕ. ಜಿಲ್ಲಾಡಳಿತ, ನವಮಂಗಳೂರು ಬಂದರುಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, 9 ವರ್ಷಗಳ ಹಿಂದೆ ಸಂಭವಿಸಿದ ದುರಂತ ಯಾರ ಮನಸ್ಸಿನಿಂದಲೂ ಮಾಸದ ಕಹಿಘಟನೆಯಾಗಿದೆ. ಇಂತಹ ದುರಂತ ಭವಿಷ್ಯದಲ್ಲಿ ಯಾವತ್ತೂ ನಡೆಯಬಾರದು. ಇದಕ್ಕಾಗಿ ಎಚ್ಚೆತ್ತುಕೊಂಡ ವಿವಿಧ ಇಲಾಖೆಗಳು ತಮ್ಮ ಭದ್ರತಾ ವ್ಯವಸ್ಥೆಗಳಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡಿವೆ. ತುರ್ತು ಸಂದರ್ಭ ಎದುರಿಸಲೂ ಸನ್ನದ್ಧ ಭದ್ರತಾ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಕಲ್ಪಿಸಲಾಗಿದೆ ಎಂದರು.
ದ.ಕ. ಜಿ.ಪಂ. ಸಿಇಒ ಸೆಲ್ವಮಣಿ, ತಹಶೀಲ್ದಾರ್ ಗುರುಪ್ರಸಾದ್, ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ ಚೂಂತಾರು, ಎಸಿಪಿ ಶ್ರೀನಿವಾಸ ಗೌಡ, ಡಿವೈಎಸ್‌ಪಿ ನಟರಾಜ್, ಮನಪಾ ಸುರತ್ಕಲ್ ವಿಭಾಗೀಯ ಆಯುಕ್ತ ರವಿಶಂಕರ್, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಭಾರ ನಿರ್ದೇಶಕ ಅಬ್ರಹಾಂ ಕೊಶಿ, ರಾಜೀವ್ ಗುಪ್ತ, ವಿಶ್ವನಾಥನ್, ಹಝೆಲ್ ಕಾನ್ಸೆಸ್ಸೊ, ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು ಮೊದಲಾದವರು ಶ್ರದ್ಧಾಂಜಲಿ ಅರ್ಪಿಸಿದರು.
ದುರಂತಕ್ಕೆ 9 ವರ್ಷ
2010ರ ಮೇ22ರಂದು ದುಬಾೖಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೆಂಜಾರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಸಂಭವಿಸಿದ ದುರಂತದಲ್ಲಿ 158 ಜನರು ಮೃತಪಟ್ಟಿದ್ದರು.