ಕೆಂಗೇರಿ: ಕೆಂಗೇರಿ ವಾರ್ಡ್‌ನ ಬಂಡೆಮಠ ಸಮೀಪದ ಕೆ.ಎಚ್.ಬಿ ಬಡಾವಣೆಗೆ ಕಾವೇರಿ ನೀರು ಸರಬರಾಜು ಮಾಡಲು ಜಲಮಂಡಳಿ ಕೈಗೊಂಡಿರುವ ಪೈಪ್ ಅಳವಡಿಕೆ ಹಾಗೂ ಒಳಚರಂಡಿ ಕಾಮಗಾರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಗುರುವಾರ ಗುದ್ದಲಿ ಪೂಜೆ ನೆರೆವೇರಿಸಿದರು. ಈ ವೇಳೆ ಮಾತನಾಡಿದ ಅವರು “ಹಲವು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬಡಾವಣೆಗೆ ಮೂಲಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ನಾನು ಬದ್ಧನಾಗಿದ್ದೇನೆ,” ಎಂದು ತಿಳಿಸಿದರು. ಕೆಂಗೇರಿ ಉಪನಗರದಿಂದ ಸನ್ ಸಿಟಿ ಬಡಾವಣೆಗೆ ತೆರಳುವ ಮಾರ್ಗ ಮಧ್ಯೆ ಇರುವ ರಾಜ ಕಾಲುವೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮೇಲು ಸೇತುವೆ ಕಾಮಗಾರಿಗೂ ಶಾಸಕರು ಪೂಜೆ ಸಲ್ಲಿಸಿದರು.
ಮಾದರಿ ಬಡಾವಣೆ ಮಾಡುವ ಇಂಗಿತ: ಬಡಾವಣೆಯನ್ನು ಕೆಎಚ್‌ಬಿ ಅಭಿವೃದ್ಧಿಪಡಿಸಿದರೆ ಮಾತ್ರ ಬಡಾವಣೆಯನ್ನು ಬಿಬಿಎಂಪಿ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತದೆ. ಆದರೂ, ಬಡಾವಣೆಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಾಗ ಕೆಎಚ್‌ಬಿ ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಉದ್ಯಾನವನ, ಆಟದ ಮೈದಾನ ನಿರ್ಮಿಸಿ ಮಾದರಿ ಬಡಾವಣೆಯನ್ನಾಗಿ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಚಿತ್ರ ನಟ ವಿಜಯಕಾಶಿ, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ಜಲ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಮುಖಂಡರಾದ ಕೆ.ಎಸ್.ಮಂಜುನಾಥಯ್ಯ, ಸಂಘದ ಅಧ್ಯಕ್ಷ ಮುಕುಂದರಾವ್, ಉಪಾಧ್ಯಕ್ಷೆ ಸಮಿತಾ ಶಿವಣ್ಣ, ಕಾರ್ಯದರ್ಶಿ ಮುಕುಂದ, ಪದಾಧಿಕಾರಿಗಳಾದ ವಿಶ್ವನಾಥ, ಶರಣಪ್ಪ, ಪ್ರಸನ್ನಾಚಾರ್ ಮತ್ತಿತರರು ಉಪಸ್ಥಿತರಿದ್ದರು.