ಚಿತ್ರದುರ್ಗ: ಜಿಲ್ಲೆಯಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಶೌಚಾಲಯ, ಅಡುಗೆ ಮನೆ ಮತ್ತಿತರೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಶನಿವಾರ ವಿವಿಧ ಖಾಸಗಿ ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ದ್ವಾರಬಾಗಿಲು, ಕಾಂಪೌಂಡ್, ಶೌಚಾಲಯ, ಅಡುಗೆ ಮನೆ, ವಿದ್ಯುತ್, ಫ್ಯಾನ್ ಮತ್ತಿತರೆ ಅಗತ್ಯ ಸೌಲಭ್ಯಗಳ ನಿರ್ಮಾಣದ ಸುಮಾರು 1 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಿತ್ರದುರ್ಗಕ್ಕೆ ಕೇಂದ್ರಿಯ ವಿದ್ಯಾಲಯ ಮಂಜೂರಾಗಿದೆ. ಕೆವಿ ನಿಯಮಾನುಸಾರ ಮೊದಲು ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಮೊದಲು ಅನುಮೋದನೆ ನೀಡಿ ತರಗತಿ ಆರಂಭವಾಗುತ್ತವೆ. ಅದಕ್ಕೆ ಸುಸಜ್ಜಿತವಾದ 12 ಕೊಠಡಿಗಳ ಅಗತ್ಯವಿತ್ತು. ಹುಡುಕಿದಾಗ ವಿಜ್ಞಾನ ಕಾಲೇಜಿನ ಹೊಸ ಕಟ್ಟಡ ಲಭ್ಯವಾಯಿತು. ಆದರೆ ಇಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದ ಕಾರಣಕ್ಕೆ ವಿದ್ಯಾಲಯದ ಮುಖ್ಯಸ್ಥರು ಎನ್‌ಒಸಿ ನೀಡಿಲ್ಲ. ಈ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಾಣ ಮಾಡಲು ಮನವಿ ಮಾಡಿದ್ದು, 15 ದಿನಗಳಲ್ಲಿ ಕಾಮಗಾರಿ ಮುಗಿಸಿದರೆ ಜಿಲ್ಲಾಕಾರಿ ಮೂಲಕ ಎನ್‌ಒಸಿ ಪಡೆದುಕೊಂಡು ಈ ವರ್ಷವೇ ತರಗತಿಗಳನ್ನು ಆರಂಭಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಬ್ಲಾಕ್‌ಸ್ಪಾಟ್ ಬಗ್ಗೆ ವರದಿ ತರಿಸಿಕೊಳ್ಳುವೆ
ಪಾವಗಡ ತಾಲೂಕಿನ ಬಸ್ ದುರಂತದ ಬಗ್ಗೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲೆಯಲ್ಲಿರುವ ಬ್ಲಾಕ್‌ಸ್ಪಾಟ್‌ಗಳ ಕುರಿತು ಉನ್ನತ ಮಟ್ಟದ ಅ ಧಿಕಾರಿಯಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು. ಒಂದೇ ಸ್ಥಳದಲ್ಲಿ ಹಲವು ಸಲ ಅಪಘಾತಗಳಾಗುತ್ತಿದ್ದರೆ ಅವುಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ಮತ್ತೆ ಅಪಘಾತ ಸಂಭವಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೂಚನಾ ಫಲಕ ಮತ್ತಿತರೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದ ಸಾರಿಗೆ ಪ್ರಾ ಧಿಕಾರ ಇರುತ್ತದೆ. ಈ ಬಗ್ಗೆ ಏನಾಗಿದೆ ಎನ್ನುವುದನ್ನು ಕೆಲ ದಿನಗಳಲ್ಲೇ ಸಭೆ ನಡೆಸಿ ತಿಳಿದುಕೊಳ್ಳುತ್ತೇನೆ. ಚಿತ್ರದುರ್ಗದಲ್ಲೂ ಸಭೆ ನಡೆಸುತ್ತೇನೆ ಎಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ| ಗೋಪಾಲ್ ಇತರರು ಇದ್ದರು.