Advertisement

ಕೇಂದ್ರೀಯ ವಿದ್ಯಾಲಯಕ್ಕೆ ಕಟ್ಟಡವೇ ಇಲ್ಲ!

02:54 PM Apr 30, 2019 | Suhan S |

ಮಂಡ್ಯ: ನಗರದ ಹೊರವಲಯದಲ್ಲಿ ಕೇಂದ್ರೀಯ ವಿದ್ಯಾಲಯ ಶುರುವಾಗಿ ನಾಲ್ಕು ವರ್ಷಗಳಾಗಿವೆ. ಇದುವರೆಗೂ ಸುಸಜ್ಜಿತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಕಟ್ಟಡಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕೆ ಪರದಾಡುವಂತಾಗಿವೆ. ಅವ್ಯವಸ್ಥಿತ ಪರಿಸರದೊಳಗೆ, ನೂರೆಂಟು ಅವಸ್ಥೆಗಳ ನಡುವೆ ಮಕ್ಕಳು ಪಾಠ ಕಲಿಯುವಂತಹ ದುಸ್ಥಿತಿ ಎದುರಾಗಿದೆ.

Advertisement

ರಮ್ಯಾ ಸಂಸದರಾಗಿದ್ದ ಅವಧಿಯಲ್ಲಿ ಮಂಡ್ಯಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಆನಂತರದಲ್ಲಿ ಸಂಸದರಾದವರು ಕೇಂದ್ರೀಯ ವಿದ್ಯಾಶಾಲೆಗೆ ಕಟ್ಟಡ ನಿರ್ಮಿಸಿಕೊಟ್ಟು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡುವ ಗೋಜಿಗೆ ಹೋಗಲೇ ಇಲ್ಲ. ಮಕ್ಕಳ ಪೋಷಕರು ನಾಲ್ಕು ವರ್ಷದಿಂದ ಸಂಸದರು, ಜಿಲ್ಲಾಧಿಕಾರಿಗೂ ಕಟ್ಟಡ ಕೊರತೆ ಹಾಗೂ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವಂತೆ ಮನವಿ ಮಾಡುತ್ತಲೇ ಬಂದಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಕಟ್ಟಡವಿರಲಿಲ್ಲ: ಕೇಂದ್ರೀಯ ವಿದ್ಯಾಲಯ ಮಂಡ್ಯಕ್ಕೆ ಮಂಜೂರಾದ ಸಮಯದಲ್ಲಿ ನಗರ ವ್ಯಾಪ್ತಿಯೊಳಗೆ ಸೂಕ್ತ ಕಟ್ಟಡಗಳಿರಲಿಲ್ಲ. ಅದೇ ಕಾರಣಕ್ಕೆ ನಗರದಿಂದ ಎಂಟು ಕಿ.ಮೀ. ದೂರದಲ್ಲಿರುವ ಬಿ.ಹೊಸೂರು ಕಾಲೋನಿಯಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ತಾತ್ಕಾಲಿಕ‌ವಾಗಿ ಕಟ್ಟಡದ ವ್ಯವಸ್ಥೆ ಮಾಡಲಾಯಿತು. ಆರಂಭದಲ್ಲಿ 1ರಿಂದ 4ನೇ ತರಗತಿಯವರೆಗೆ ತರಗತಿಗಳನ್ನು ನಡೆಸಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ತರಗತಿಗಳು ಸೇರ್ಪಡೆಗೊಳ್ಳುತ್ತಿವೆಯೇ ಹೊರತು ಕಟ್ಟಡ ಮಾತ್ರ ಮೇಲೇಳಲೇ ಇಲ್ಲ. ಪ್ರಸ್ತುತ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯವರೆಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ತರಗತಿ ನಡೆಸುವುದಕ್ಕೆ ಬೇಕಾದ ಕೊಠಡಿಗಳೇ ಇಲ್ಲ.

ಕೊಠಡಿ ನಿರ್ಮಾಣ ವಿಳಂಬ: ಪ್ರತಿ ವರ್ಷ ಒಂದು ಕೊಠಡಿಯಂತೆ ನಿರ್ಮಾಣ ಮಾಡಲಾಗುತ್ತಿದೆ. ಅದೂ ಸಹ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಕೊಠಡಿ ಸಮಸ್ಯೆಯಿಂದ ಕಳೆದ ಸಾಲಿನಲ್ಲಿ ಒಂದನೇ ತರಗತಿಯನ್ನು ವಿಳಂಬವಾಗಿ ಪ್ರಾರಂಭಿಸಲಾಗಿತ್ತು. ಇದು ಪ್ರತಿ ವರ್ಷವೂ ಮುಂದುವರೆಯುತ್ತಿದೆ. ಕಟ್ಟಡದ ವಿಳಂಬದಿಂದಾಗಿ ಮಕ್ಕಳಿಗೆ ಪೂರಕವಾದ ಶಿಕ್ಷಣ ನೀಡಲಾಗುತ್ತಿಲ್ಲ. ಮೂಲ ಸೌಲಭ್ಯಗಳಿಲ್ಲದ ಕಾರಣ ಮಕ್ಕಳು ಆತಂಕದಲ್ಲಿಯೇ ಪಾಠ-ಪ್ರವಚನಗಳನ್ನು ಕಲಿಯುವಂತಾಗಿದೆ.

ಪ್ರತಿ ತರಗತಿಯಲ್ಲಿ 40 ಮಕ್ಕಳು ಇರಬೇಕೆಂಬುದು ನಿಯಮ. ಆದರೆ, ಮಂಡ್ಯದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರತಿ ತರಗತಿಯಲ್ಲಿ 60 ಮಕ್ಕಳನ್ನು ದಾಖ ಲಿಸಿಕೊಳ್ಳಲಾಗಿದೆ. ನಿಗದಿತ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ.

Advertisement

ಅಪಾಯಕಾರಿ ಪ್ರಾಣಿಗಳ ಅವಾಸಸ್ಥಾನ: ಶಾಲಾ ಆವರಣದ ಸುತ್ತ ಗಿಡ-ಗಂಟೆಗಳು ಆಳೆತ್ತರಕ್ಕೆ ಬೆಳೆದಿವೆ. ಅಪಾಯಕಾರಿ ಪ್ರಾಣಿಗಳ ಅವಾಸ ಸ್ಥಾನವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ ಹಾವಳಿಯೂ ಹೆಚ್ಚಾಗಿದ್ದು, ಕುರಿ-ಮೇಕೆಗಳ ಮೇಲೆ ರಾಜಾರೋಷವಾಗಿ ದಾಳಿ ಮಾಡುತ್ತಿರುವ ನಿದರ್ಶನಗಳಿಂದ ಪೋಷಕರು ಮಕ್ಕ ಳನ್ನು ಅಲ್ಲಿಗೆ ಕಳುಹಿಸುವುದಕ್ಕೆ ಆತಂಕಪಡುತ್ತಿದ್ದಾರೆ.

ಇಲ್ಲೇಕೆ ಸಾಧ್ಯವಾಗಿಲ್ಲ?: ಮಂಡ್ಯದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾದ ಸಮಯದಲ್ಲೇ ಚಾಮರಾಜನಗರದಲ್ಲೂ ಕೇಂದ್ರೀಯ ವಿದ್ಯಾಲಯ ಆರಂಭಿಸಲಾಯಿತು. ಅಲ್ಲಿ ಈಗಾಗಲೇ ನೂತನ ಹಾಗೂ ಸುಸ ಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯೂ ಆಗಿದೆ. ಆದರೆ, ಮಂಡ್ಯದಲ್ಲಿ ಮಾತ್ರ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲವೇಕೆ ಎನ್ನುವುದು ಪೋಷಕರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಶಾಲಾ ಕಟ್ಟಡ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಕೇಂದ್ರೀಯ ಖಾಯಂ ಶಿಕ್ಷಕರೂ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಶಿಕ್ಷಕರ ಕೊರತೆಯೂ ಎದುರಾಗಿದೆ. ಶಾಲಾ ಆವರಣದ ಸುತ್ತ ಕಾಂಪೌಂಡ್‌ ವ್ಯವಸ್ಥೆಯೂ ಇಲ್ಲ. ಕೇಂದ್ರೀಯ ಶಾಲೆಯ ವಾತಾವರಣ ಹೇಗಿರಬೇಕೆಂಬ ಪರಿಕಲ್ಪನೆಯೇ ಯಾರೊಬ್ಬರಿಗೂ ಇಲ್ಲದಂತಾಗಿದೆ. ಕಲಿಕೆಗೆ ಪೂರಕವಲ್ಲದ ವಾತಾವರಣದೊಳಗೆ ಮಕ್ಕಳು ಕಲಿಯುವುದಾದರೂ ಹೇಗೆ ಎಂಬ ಬಗ್ಗೆ ಪೋಷಕರು ಚಿಂತೆಗೀಡಾಗಿದ್ದಾರೆ.

ದಾಖಲಾತಿಗೆ ಬೇಡಿಕೆ: ಕೇಂದ್ರೀಯ ವಿದ್ಯಾಲಯಕ್ಕೆ ಮಕ್ಕಳನ್ನು ದಾಖಲಿಸಲು ಸಾಕಷ್ಟು ಬೇಡಿಕೆ ಇದೆ. ಇದಕ್ಕಾಗಿ ದಾಖಲಾತಿಗೆ ಎಂಟು ತಿಂಗಳು ಮುನ್ನವೇ ಸಂಸದರು, ಜಿಲ್ಲಾಧಿಕಾರಿಗಳ ಬೆನ್ನುಹತ್ತಿ ಸೀಟು ಗಿಟ್ಟಿಸಿಕೊಳ್ಳಲು ಪೋಷಕರು ಹರಸಾಹಸವನ್ನೇ ನಡೆಸುತ್ತಾರೆ. ಶಾಲೆಯ ದಾಖಲಾತಿ ಹೆಚ್ಚಿದ್ದರೂ, ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುತ್ತಿದ್ದರೂ ಅಲ್ಲಿನ ಸೌಲಭ್ಯಗಳು ಸರ್ಕಾರಿ ಶಾಲೆಗಳಿಗಿಂತಲೂ ಕಳಪೆಯಾಗಿದೆ. ಇದರಿಂದ ಪೋಷಕರೂ ತೀವ್ರ ಚಿಂತೆಗೀಡಾಗಿದ್ದಾರೆ.

ಈ ಹಿಂದೆ ಸಂಸದರಾದವರು ಕೇಂದ್ರದ ಮೇಲೆ ಒತ್ತಡ ತಂದು ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುವುದಕ್ಕೆ ಆಸಕ್ತಿ ತೋರಲಿಲ್ಲ. ಆರು ತಿಂಗಳಿಗೆ ಸಂಸದರಾದ ಎಲ್.ಆರ್‌.ಶಿವರಾಮೇಗೌಡರು ಒಮ್ಮೆ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದನ್ನು ಬಿಟ್ಟರೆ ಅಲ್ಲಿ ಯಾವ ಬದಲಾವಣೆಯನ್ನೂ ತರಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇಂದ್ರೀಯ ಶಾಲೆ ಸೌಲಭ್ಯಗಳಿಲ್ಲದೆ ಬಡವಾಗುತ್ತಲೇ ಇದೆ.

ಮಕ್ಕಳ ಟೀಸಿ ಪಡೆಯುತ್ತಿರುವ ಪೋಷಕರು:

ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡ ಬೇಕೆಂಬ ಮಹದಾಸೆಯಿಂದ ಉತ್ಸಾಹದಿಂದಲೇ ಕೇಂದ್ರೀಯ ಶಾಲೆಗೆ ದಾಖಲಿಸಿದ್ದ ಪೋಷಕರೇ ಈಗ ಬೇಸತ್ತು ಅಲ್ಲಿಂದ ಟೀಸಿ ಪಡೆದು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. ಕೊಠಡಿ ವ್ಯವಸ್ಥೆಯಿಲ್ಲದೆ ಮಕ್ಕಳು ಅವ್ಯವಸ್ಥಿತ ಪರಿಸರದೊಳಗೆ ಪಾಠ ಕಲಿಯುತ್ತಿರುವುದನ್ನು ನೋಡಲಾಗದೆ ಪೋಷಕರು ಟೀಸಿ ಪಡೆಯಲು ಮುಂದಾಗಿದ್ದಾರೆ. ಇಲ್ಲಿ ಪಾಠ ಕಲಿಯಲು ಬರುವ ಮಕ್ಕಳೆಲ್ಲರೂ ಸರ್ಕಾರಿ ನೌಕರರ ಮಕ್ಕಳೇ ಆಗಿದ್ದಾರೆ. ಕಟ್ಟಡ ಹಾಗೂ ಸೌಲಭ್ಯಗಳನ್ನು ಗಟ್ಟಿ ಧ್ವನಿಯಲ್ಲಿ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳನ್ನು ಕೇಳಲಾಗು ತ್ತಿಲ್ಲ. ಕೇಂದ್ರೀಯ ಶಾಲೆಗೆ ಕಾಯಕಲ್ಪ ಕೊಡುವುದಕ್ಕೂ ಅಧಿಕಾರದಲ್ಲಿರುವವರು ಬದ್ಧತೆ ಪ್ರದರ್ಶಿಸುತ್ತಿಲ್ಲ. ಇದರ ನಡುವೆ ಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವುದಂತೂ ಸತ್ಯಸಂಗತಿಯಾಗಿದೆ.
ಇಂದು ಡೀಸಿ ಭೇಟಿ:
ಕೇಂದ್ರೀಯ ವಿದ್ಯಾಶಾಲೆಯಲ್ಲಿರುವ ಅವಸ್ಥೆಗಳು ಹಾಗೂ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಲು ಮಂಗಳವಾರ (ಏ.30) ಜಿಲ್ಲಾಧಿಕಾರಿ ಪಿ.ಸಿ.ಜಾಫ‌ರ್‌ ಅವರು ಕೇಂದ್ರೀಯ ವಿದ್ಯಾಶಾಲೆಗೆ ಭೇಟಿ ನೀಡಲಿದ್ದಾರೆ. ಮಕ್ಕಳ ಪೋಷಕರು ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಲ್ಲಿನ ಸೌಲಭ್ಯಗಳ ಕೊರತೆ, ಶಿಕ್ಷಣ ಕಲಿಯುವುದಕ್ಕೆ ಪೂರಕ ವಾತಾವರಣವಿಲ್ಲದಿರುವುದು, ಕಟ್ಟಡಗಳ ಕೊರತೆ ಹಾಗೂ ನಿಗದಿಗಿಂತ ಅಧಿಕ ಮಕ್ಕಳನ್ನು ದಾಖಲಿಸಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಯವರ ಗಮನಸೆಳೆದರು. ಆ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮರದ ಕೆಳಗೇ ಪಾಠ:
ಕೊಠಡಿಗಳ ಸಮಸ್ಯೆ ಕಾಡುತ್ತಿರುವುದರಿಂದ ಮಕ್ಕಳನ್ನು ಶಾಲೆಯ ಮುಂಭಾಗ ಹಾಗೂ ಮರದ ಕೆಳಗಡೆ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲಿ ಇರುವ ಕೊಠಡಿಗಳೂ ಸುಭದ್ರವಾಗಿಲ್ಲ. ಯಾವ ಸಮಯದಲ್ಲಿ ಕುಸಿದು ಬೀಳುವುದೋ ಹೇಳಲಾಗದು. ಅದರಿಂದ ಉಂಟಾಗಬಹುದಾದ ಅನಾಹುತ ತಪ್ಪಿಸಲು ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಮಳೆ, ಗಾಳಿ, ಬಿಸಿಲಿನಲ್ಲಿಯೇ ಮಕ್ಕಳು ಪಾಠ ಕಲಿಯುವಂತಾಗಿದೆ. ಬಿರುಗಾಳಿ ಸಹಿತ ಮಳೆ-ಗಾಳಿಗೆ ಮರಗಳು ಯಾವುದೇ ಸಮಯದಲ್ಲಿ ಧರೆಗುರುಳುವ ಸಾಧ್ಯತೆ ಇದ್ದು ಅನಾಹುತ ಸಂಭವಿಸಿದರೂ ಆಶ್ಚರ್ಯಪಡುವಂತಿಲ್ಲ.
● ಮಂಡ್ಯ ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next