Advertisement

ಟೀಚರೇ ಫ್ಯೂಚರು!

06:00 AM Aug 28, 2018 | |

ಟೀಚರ್‌ ಆದವರಿಗೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂಥ ಮಹತ್ವದ ಜವಾಬ್ದಾರಿ ಇರುತ್ತದೆ. ಅದೇ ಕಾರಣಕ್ಕೆ ಶಿಕ್ಷಕನ ಸೇವೆ ಶಿವನಿಗೆ ಅರ್ಪಿತ ಎಂಬ ಮಾತುಂಟು. ಯಾವ ಹುದ್ದೆಗೆ ಡಿಮ್ಯಾಂಡ್‌ ಕಡಿಮೆಯಾದರೂ ಮೇಷ್ಟ್ರ ಕೆಲಸಕ್ಕೆ ಸದಾ ಬೇಡಿಕೆ ಇರುವುದೇ ಈ ಹುದ್ದೆಯ ಮಹತ್ವವನ್ನು ಸಾರುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಇದೀಗ ಕೇಂದ್ರೀಯ ವಿದ್ಯಾಲಯವು ಶಿಕ್ಷಣ ಕ್ಷೇತ್ರದ 8339 ಹುದ್ದೆಗಳಿಗೆ ಅರ್ಜಿ ಕರೆದಿದೆ.

Advertisement

“ಆ ಮಾಸ್ಟರ್‌ ಇದ್ರು, ಅವರು ಅಂದು ಮಾಡಿದ ಪಾಠ ಇಂದಿಗೂ ನೆನಪಿದೆ. ಅವರು ಅಂದು ಮಗ್ಗಿ ಹೇಳಿಕೊಡದಿದ್ದರೆ, ವ್ಯಾಕರಣ ಕಲಿಸದಿದ್ದರೆ ಇಂದು ನಾವು ಈ ರೀತಿ ಲೈಫ್ನಲ್ಲಿ ಸೆಟಲ್‌ ಆಗಲು, ಕೆಲಸ ಹಿಡಿಯಲು ಸಾಧ್ಯವಿತ್ತೆ?’ ಹೀಗೆಲ್ಲಾ ನಾವಿಂದು ಶಿಕ್ಷಕರನ್ನು ನೆನಪಿಸಿಕೊಳ್ಳುವುದಿದೆ.

 ಶಾಲೆಯಲ್ಲಿ ನಮ್ಮ ಯಶಸ್ಸನ್ನು ಮಾತ್ರ ಬಯಸುವ, ಅಂಕಗಳು ಹೆಚ್ಚು ಬಂದಾಗ ನಮಗಿಂತಲೂ ಹೆಚ್ಚು ಸಂತೋಷಪಡುವ, ಕಡಿಮೆಯಾದಾಗ ಆತ್ಮವಿಶ್ವಾಸ ತುಂಬುವ ಜೀವಿಯೊಂದಿದ್ದರೆ ಅವರನ್ನು ಶಿಕ್ಷಕರೆನ್ನಬಹುದು. ಪ್ರತಿಭಾವಂತ ಶಿಕ್ಷಕರು, ವಿದ್ಯಾರ್ಥಿಗಳ ದೋಷಗಳನ್ನು ಎಣಿಸದೆ ಅವರ ಗುಣ, ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಶಿಷ್ಯನ ಪ್ರತಿಭೆ ಹೊರಹೊಮ್ಮಲು ಕಾರಣವಾಗುತ್ತಾರೆ. ಶಿಕ್ಷಕ, ಪ್ರಿನ್ಸಿಪಾಲ್‌… ಇಂಥದೇ ವೃತ್ತಿಗೆ ಸೇರಬೇಕು ಎಂದು ಆಸೆ ಪಡುವವರಿಗೆ, ಕೇಂದ್ರೀಯ ವಿದ್ಯಾಲಯವು ಪ್ರಾಂಶುಪಾಲ, ಉಪ ಪ್ರಾಂಶುಪಾಲ, ಶಿಕ್ಷಕರು, ಗ್ರಂಥಪಾಲಕ, ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 8339 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. 

ಹುದ್ದೆಗಳು
ಪ್ರಾಂಶುಪಾಲ(ಗ್ರೂಪ್‌ ಎ) – 76
ಉಪ ಪ್ರಾಂಶುಪಾಲ(ಗ್ರೂಪ್‌ ಎ) – 220
ಸ್ನಾತಕೋತ್ತರ ಪದವಿ ಶಿಕ್ಷಕ(ಪಿಜಿಟಿ) – 592
ತರಬೇತಿ ಪಡೆದ ಪದ ಶಿಕ್ಷಕರು(ಟಿಜಿಟಿ) – 1900
ಗ್ರಂಥಪಾಲಕರು – 50
ಪ್ರಾಥಮಿಕ ಶಿಕ್ಷಕರು(ಗ್ರೂಪ್‌ ಬಿ) – 5300
ಪ್ರಾಥಮಿಕ ಶಿಕ್ಷಕರು-ಮ್ಯಾಜಿಕ್‌ (ಗ್ರೂಪ್‌ ಬಿ) – 201
ಈ ಹುದ್ದೆಗಳನ್ನು ಯುಆರ್‌, ಒಬಿಸಿ, ಎಸ್ಸಿ, ಎಸ್ಟಿ ಮೀಸಲಾತಿಗೆ ಅನುಕ್ರಮವಾಗಿ ವಿಂಗಡನೆ ಮಾಡಲಾಗಿದೆ.
ಶಿಕ್ಷಕ ಹುದ್ದೆಗಳಲ್ಲಿ ಹಿಂದಿ, ಆಂಗ್ಲ, ಗಣಿತ ಸೇರಿದಂತೆ ವಿಷಯಗಳನ್ನು ವಿಭಾಗಿಸಿ ಹುದ್ದೆಯನ್ನು ಹಂಚಲಾಗಿದೆ.

ವಿದ್ಯಾರ್ಹತೆ
ಪ್ರಾಂಶುಪಾಲ, ಉಪಪ್ರಾಂಶುಪಾಲ ಹುದ್ದೆಗೆ ಬಿ.ಎಡ್‌, ಶೈಕ್ಷಣಿಕ ಅನುಭವ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ. ವಯೋಮಿತಿಯನ್ನು ಕನಿಷ್ಠ 35 ವರ್ಷದಿಂದ ಗರಿಷ್ಠ 50 ವರ್ಷಗಳವರೆಗೆ ನಿಗದಿ ಪಡಿಸಲಾಗಿದೆ.
ಸ್ನಾತಕೋತ್ತರ ಪದವಿ(ಪಿಜಿಟಿ), ತರಬೇತಿ ಪಡೆದ ಪದವಿ ಶಿಕ್ಷಕರ ಹುದ್ದೆಗೆ ಆಯಾ ವಿಷಯ ಸಂಬಂಧಿತ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಸೇರಿ ಅಗತ್ಯ ಶೈಕ್ಷಣಿಕ ವಿದ್ಯಾರ್ಹತೆ ಅವಶ್ಯವಿದ್ದು, ಗರಿಷ್ಠ 35-40ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಗ್ರಂಥಪಾಲಕ ಹುದ್ದೆಗೆ ಗ್ರಂಥಪಾಲನೆ ವಿಷಯ ಸಂಬಂಧಿತ ಸ್ನಾತಕೋತ್ತರ ಪದವಿ ಅವಶ್ಯವಿದ್ದು, ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

Advertisement

ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಪದವಿ ಸಹಿತ ಅಗತ್ಯ(ಟಿಸಿಎಚ್‌, ಬಿಎಡ್‌) ಶೈಕ್ಷಣಿಕ ವಿದ್ಯಾರ್ಹತೆ, ಆಯಾ ವಿಷಯ ಸಂಬಂಧಿತ ಪ್ರಾವೀಣ್ಯತೆ ಅಗತ್ಯ. ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 
ಇದೆಲ್ಲದರ ಜೊತೆಗೆ ಎಲ್ಲ ಹುದ್ದೆಗಳಿಗೂ ಕಂಪ್ಯೂಟರ್‌ ಸಂಬಂಧಿತ ಜ್ಞಾನ ಅತ್ಯಗತ್ಯ.

ವೇತನ
ಪ್ರಾಂಶುಪಾಲ- 78,800-2,09,200 ರೂ.
ಉಪ ಪ್ರಾಂಶುಪಾಲ- 56,100- 1,77,500 ರೂ.
ಸ್ನಾತಕೋತ್ತರ ಪದವಿ ಶಿಕ್ಷಕ- 47,600- 1,51,100 ರೂ.
ತರಬೇತಿ ಪಡೆದ ಪದವಿ ಶಿಕ್ಷಕರು- 44,900- 1,42,400 ರೂ.
ಗ್ರಂಥಪಾಲಕರು- 44,900- 1,42,400 ರೂ.
ಪ್ರಾಥಮಿಕ ಶಿಕ್ಷಕ/ ಸಂಗೀತ ಶಿಕ್ಷಕ (ಗ್ರೂಪ್‌ ಬಿ)- 35,400- 1,12,400 ರೂ. 

ಆಯ್ಕೆ ಹೇಗೆ? 
ಅಭ್ಯರ್ಥಿಗಳನ್ನು ಲಿಖೀತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಎಲ್ಲ ಹುದ್ದೆಗಳಿಗೂ ಆಯಾ ಹುದ್ದೆ ಮತ್ತು ವಿಷಯಗಳಿಗೆ ಅನುಗುಣವಾಗಿ 150 ಅಂಕಗಳಿಗೆ 150 ಪ್ರಶ್ನೆಗಳುಳ್ಳ ಪರೀಕ್ಷೆ ನಡೆಸಲಾಗುವುದು. ಪ್ರಶ್ನೆಗಳು ಮಲ್ಟಿಪಲ್‌ ಚಾಯ್ಸ ಮಾದರಿಯಲ್ಲಿರುತ್ತವೆ. ಅಭ್ಯರ್ಥಿಯು 60 ಅಂಕಗಳನ್ನು ಒಳಗೊಂಡ ಒಂದು ಸಂದರ್ಶನವನ್ನು ಎದುರಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯದ ಜಾಲತಾಣದ(www.kvsangathan.nic.in)  ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಜಾಲತಾಣದಲ್ಲಿ ರಿಜಿಸ್ಟ್ರೇಷನ್‌ ಮಾಡಿಕೊಂಡು ಮಾಹಿತಿಯನ್ನು (ಭಾವಚಿತ್ರ, ಅಂಕಪಟ್ಟಿ, ಸಹಿ, ದಾಖಲೆ) ತುಂಬಬೇಕು. ಜತೆಗೆ ಆನ್‌ಲೈನ್‌ ಮೂಲಕವೇ ಶುಲ್ಕ ಪಾವತಿಸಬೇಕು. ಪ್ರಾಂಶುಪಾಲ- ಉಪಪ್ರಾಂಶುಪಾಲ ಹುದ್ದೆಗೆ 1500 ರೂ., ಇತರ ಹುದ್ದೆಗಳಿಗೆ 1000 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ ಶುಲ್ಕದಲ್ಲಿ ಸಡಿಲಿಕೆಯಿದೆ. ಶುಲ್ಕ ಪಾವತಿ ಬಳಿಕ ಅಪ್ಲಿಕೇಷನ್‌ ಪ್ರತಿಯೊಂದಿಗೆ ಅಟೆಸ್ಟ್‌ ಮಾಡಿದ ದಾಖಲೆಗಳ ಒಂದು ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಇದು ಸಂದರ್ಶನ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್‌ 13 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ:
goo.gl/HmQuxh

ಎನ್. ಅನಂತನಾಗ್ 

Advertisement

Udayavani is now on Telegram. Click here to join our channel and stay updated with the latest news.

Next