ಕೋಟ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈಚಾರಿಕ ಸಾಹಿತಿ ಸಾಲಿಗ್ರಾಮ ಗುಂಡ್ಮಿಯ ಡಾ.ಭಾಸ್ಕರ್ ಮಯ್ಯ(70) ತೀವ್ರ ಅಸೌಖ್ಯದಿಂದ ಹೃದಯಾಘಾತಕ್ಕೊಳಗಾಗಿ ಗುರುವಾರ (6-5-2021) ಬೆಳಗಿನ ಜಾವ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ಕುಂದಾಪುರದ ಭಂಡಾರಕರ ಕಾಲೇಜು ಮತ್ತು ಮುಲ್ಕಿ ಕಾಲೇಜುಗಳಲ್ಲಿ ಒಟ್ಟು ನಾಲ್ಕು ದಶಕಗಳಿಗೂ ಮೀರಿ ಸಂಸ್ಕೃತ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳನ್ನೂ, ತತ್ವಶಾಸ್ತ್ರ, ಪ್ರಾಕ್ತನಶಾಸ್ತ್ರಗಳನ್ನು ಬೋಧಿಸಿದ್ದರು ಮತ್ತು, ಹಿಂದಿ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದ್ದರು.
ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದ ಇವರು ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅಧ್ಯಯನಮಾಡಿದ್ದರು. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ ಮತ್ತು 52 ಪುಸ್ತಕಗಳನ್ನು, ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಬೀಡಿ ಕಟ್ಟಿ ಉಳಿಸಿದ 2 ಲಕ್ಷ ರೂಪಾಯಿಯನ್ನು ಕೋವಿಡ್ ನಿಧಿಗೆ ಕೊಟ್ಟ 63 ರ ವೃದ್ಧ.!
ಒಂಟಿತನ, ಪರಕೀಯಪ್ರಜ್ಞೆ ಕುರಿತ ಅವರ ಗ್ರಂಥ ಅಜನಬೀಪನ್:ಏಕ್ ಸೈದ್ಧಾಂತಿಕ್ ಅನುಶೀಲನ್-2002ರಲ್ಲಿ ಆಗಿನ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸನ್ಮಾನ ಪಡೆದಿದ್ದರು. ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.