Advertisement

ನಗರದಲ್ಲಿ ಸಂಭ್ರಮ-ಸಡಗರದ ಕೆಂಪೇಗೌಡರ ದಿನಾಚರಣೆ

12:35 PM Apr 12, 2017 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಗರದಲ್ಲಿ ಮಂಗಳವಾರ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ನಗರದ ನಾಲ್ಕು ಕಡೆಗಳಲ್ಲಿರುವ ಕೆಂಪೇಗೌಡರ ಗೋಪುರಗಳಿಂದ ಕೆಂಪೇಗೌಡರ ಜ್ಯೋತಿಯನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ತರಲಾಯಿತು. 

Advertisement

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮೇಯರ್‌ ಜಿ.ಪದ್ಮಾವತಿ ಅವರು ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡರ ಜಯಂತಿಗೆ ಚಾಲನೆ ನೀಡಿದರು. ಬಳಿಕ ಲಾಲ್‌ಬಾಗ್‌ನಲ್ಲಿರುವ ಗಡಿಗೋಪುರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಆ ನಂತರ ಕೋರಮಂಗಲದಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಅವರ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಟನಮನ ಸಲ್ಲಿಸಿದರು. 

ನಗರದ ನಾಲ್ಕು ದಿಕ್ಕುಗಳಲ್ಲಿರುವ ಕೇಂಪೆಗೌಡರ ಗೋಪುರನ್ನು ತಳಿರು, ತೋರಣ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಲಾಲ್‌ಬಾಗ್‌, ಹಲಸೂರು, ಕೆಂಪಾಂಬುಧಿ ಕೆರೆ, ರಮಣಶ್ರೀ ಉದ್ಯಾನ (ಮೇಖೀÅ ವೃತ್ತ) ಗೋಪುರಗಳಿಂದ ಹೊರಟ ಕೆಂಪೇಗೌಡರ ಜ್ಯೋತಿಯನ್ನು 11.30ರ ಸುಮಾರಿಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ಮೆರವಣಿಗೆಯ ಮೂಲಕ ತರಲಾಯಿತು. 

ನಾಡಪ್ರಭು ಕೆಂಪೇಗೌಡರ ಐಕ್ಯ ಸ್ಥಳವಾದ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಿಂದಲೂ ಕೆಂಪೇಗೌಡರ ಜ್ಯೋತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಸಮ್ಮುಖದಲ್ಲಿ ತೆರೆದ ವಾಹನದಲ್ಲಿ ಕೇಂದ್ರ ಕಚೇರಿಗೆ ತರಲಾಯಿತು.  ಎಲ್ಲ ಭಾಗಗಳಿಂದ ಬಂದ ಕೆಂಪೇಗೌಡರ ಜ್ಯೋತಿಗಳನ್ನು ಗೌರವದಿಂದ ಬರಮಾಡಿಕೊಂಡ ಮೇಯರ್‌ ಪದ್ಮಾವತಿ ಅವರು ನಂತರ ಅವುಗಳನ್ನು ಸ್ವೀಕರಿಸಿದರು.

ಅದಾದ ಬಳಿಕ ಪಾಲಿಕೆಯ ಆವರಣದಲ್ಲಿದ್ದ ಜ್ಯೋತಿಯನ್ನು ಬೆಳಗಿದ ಅವರು ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.  ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಇತಿಹಾಸವನ್ನು ತಿಳಿಸುವ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ವೀಕ್ಷಕರಿಗೆ ಬೆಂಗಳೂರಿನ ಸಂಪೂರ್ಣ ಇತಿಹಾಸ ಒಮ್ಮೆ ಕಣ್ಣಮುಂದೆ ಹಾದುಹೋದ ಅನುಭವ ನೀಡಿತು. 

Advertisement

1537 ರಿಂದ 2017ರವರೆಗಿನ ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಛಾಯಾಚಿತ್ರಗಳು ಪ್ರದರ್ಶನದಲ್ಲಿದ್ದವು. ಬೆಂಗಳೂರು ನಿರ್ಮಾಪಕರಾದ ಕೆಂಪೇಗೌಡರ ಹುಟ್ಟು, ಅವರು ನಡೆಸಿದ ಆಡಳಿತ ವೈಖರಿ, ಬೆಂಗಳೂರು ನಗರ ಕಟ್ಟಿದ ಬಗೆ ಮತ್ತು ಅವರ ಆಡಳಿತದ ಪ್ರಮುಖ ಮೈಲಿಗಲ್ಲುಗಳನ್ನು ನೆನಪಿಸುವ ಮಾಹಿತಿಯುಳ್ಳ ಛಾಯಾಚಿತ್ರಗಳು ಆಕರ್ಷಣೀಯವಾಗಿದ್ದವು. 

ಪ್ರದರ್ಶನದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುಟ್ಟ ಕಟೌಟ್‌ ಕೂಡ ಪ್ರಮುಖ ಆಕರ್ಷಣೀಯವಾಗಿತ್ತು. ನಗರದ ಅಭಿವೃದ್ಧಿಗಾಗಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡ ಕಾರ್ಯಕ್ರಮಗಳು, ಮೇಲ್ಸೇತುವೆಗಳು, ಕೆಳ ಸೇತುವೆಗಳು, ಮೆಟ್ರೋ ಸೇರಿದಂತೆ ಮತ್ತಿತರ ಮಾಹಿತಿ ಗಳನ್ನು ಒಳಗೊಂಡ ಛಾಯಾಚಿತ್ರಗಳು ಪ್ರದರ್ಶನದಲ್ಲಿದ್ದವು. ಕೆಂಪೇಗೌಡರ ಜಯಂತಿ ಯೊಂದಿಗೆ ವಿಶ್ವವಿಖ್ಯಾತ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬಿಬಿಎಂಪಿ ಸುತ್ತಮುತ್ತಲಿನ ಭಾಗಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next