Advertisement

ಇತಿಹಾಸ ಸೃಷ್ಟಿಸಿ ಜನಮಾನಸದಲ್ಲಿ ಉಳಿದ ಕೆಂಪೇಗೌಡ

11:39 AM Jun 28, 2018 | |

ಮಂಡ್ಯ: ಇತಿಹಾಸ ಎನ್ನುವುದು ಬಲ್ಲವರು ಮಾಡಿದ ದಾಖಲೆ. ದೂರದೃಷ್ಟಿ, ಶಕ್ತಿ-ಸಾಮರ್ಥ್ಯ, ಉತ್ತಮ ಆಡಳಿತದಿಂದ ಇತಿಹಾಸ ಸೃಷ್ಟಿಸಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರಲ್ಲಿ ಕೆಂಪೇಗೌಡರೂ ಒಬ್ಬರು ಎಂದು ಶಂಕರಗೌಡ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಎಸ್‌.ಬಿ.ಶಂಕರೇಗೌಡ ತಿಳಿಸಿದರು.

Advertisement

ಜಿಲ್ಲಾಡಳಿತದ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಇತಿಹಾಸದ ಅರಿವು ನಮ್ಮನ್ನು ಐತಿಹಾಸಿಕ ಗೊಳಿಸುತ್ತದೆ. ನಮ್ಮ ಅಸ್ಮಿತೆ ಗುರುತಿಸಿಕೊಳ್ಳಲು ಅವಕಾಶ ನೀಡುತ್ತದೆ. ಹೊಸದಾಗಿ ಇತಿಹಾಸ ಸೃಷ್ಟಿಸುವವರು ಇತಿಹಾಸ ಅರಿತಿರಬೇಕು. ಅವರಿಂದಷ್ಟೇ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ನುಡಿದರು. 

ಭೈರವ ನಾಣ್ಯ ಚಾಲ್ತಿಗೆ: ಕೆಂಪೇಗೌಡರು ವಿಜಯನಗರ ಅರಸರ ಸಾಮಂತ ಅರಸರಾಗಿದ್ದುಕೊಂಡು ಅಭಿವೃದ್ಧಿಯ ಹೊಸ ಪರ್ವವನ್ನೇ ಸೃಷ್ಟಿಸಿದರು. ಅದು ವಿಜಯನಗರ ಅರಸರ ಮೆಚ್ಚುಗೆಗೂ ಪಾತ್ರವಾಗಿತ್ತು. ವಾಣಿಜ್ಯ ಕೇಂದ್ರಗಳನ್ನು ಗುರುತಿಸಲು ಪೇಟೆಗಳನ್ನು ಸೃಷ್ಟಿಸಿದರು. ಅಂಥ ಪೇಟೆಗಳಲ್ಲಿ ಚಿಕ್ಕಪೇಟೆ, ಬಳೆಪೇಟೆ, ಅಕ್ಕಿ ಪೇಟೆ, ಉಪ್ಪಾರಪೇಟೆ ಸೇರಿದಂತೆ ಹಲವು ಇಂದಿಗೂ ಅದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಿವೆ. ಕೆಂಪೇಗೌಡರ ಅಭಿವೃದ್ಧಿ ಒಪ್ಪಿದ್ದ ವಿಜಯನಗರದ ಅರಸರು ಭೈರವ ನಾಣ್ಯ ಚಾಲ್ತಿಗೆ ತಂದಿದ್ದರು ಎಂದು ತಿಳಿಸಿದರು.

ಕೆಂಪೇಗೌಡರು ವೈಷ್ಣವ ಮತ್ತು ಶೈವ ಪಂಥದ ಅನುಯಾಯಿಯಾಗಿದ್ದರೂ ಅನ್ಯಧರ್ಮದ ವಿರುದ್ಧ ಅಸಹಿಷ್ಣುತೆ ಪ್ರದರ್ಶಿಸಲಿಲ್ಲ. ಧರ್ಮ ಸಾಮರಸ್ಯ, ಸಮನ್ವಯದ ಆಡಳಿತ ನಡೆಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದ ಅವರು, ಇವರ ಅಭಿವೃದ್ಧಿ ಹಾಗೂ ಜನಪ್ರಿಯತೆ ಸಹಿಸದ ಚನ್ನಪಟ್ಟಣದ ಸಾಮಂತ ರಾಜ ವಂಚನೆಯಿಂದ ಕೆಂಪೇಗೌಡರನ್ನು ಜೈಲಿಗಟ್ಟುತ್ತಾನೆ. ಅಲ್ಲಿಂದ ತಪ್ಪಿಸಿಕೊಳ್ಳುವುದು ರಾಜದ್ರೋಹವಾಗುವುದೆಂದು ಭಾವಿಸಿದ್ದ ಕೆಂಪೇಗೌಡರು ಸುಮಾರು ಐದು ವರ್ಷಗಳ ಕಾಲ ಜೈಲಿನಲ್ಲಿದ್ದರು. ಇದು ಅವರ ರಾಜಭಕ್ತಿಗೆ ಇರುವ ದೊಡ್ಡ ನಿದರ್ಶನ ಎಂದು ಹೇಳಿದರು. 

Advertisement

ಇತಿಹಾಸದ ರೇಖೆ ವಿಸ್ತಾರವಾಗಲಿ: ಕೆಂಪೇಗೌಡರು ಕೇವಲ ಬೆಂಗಳೂರು ಪ್ರಾಂತ್ಯಕ್ಕೆ, ಒಕ್ಕಲಿಗರಿಗೆ ಸೀಮಿತರಾದ ವ್ಯಕ್ತಿಯಲ್ಲ. ಅವರು ಎಲ್ಲ ಧರ್ಮ, ಸಮುದಾಯದವರಿಗೆ ಸಲ್ಲುವಂತಹವರು. ಈ ನಾಡಿನ ಆಸಕ್ತಿಯೂ ಆಗಿದ್ದಾರೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಒಬವ್ವ ಸೇರಿದಂತೆ ಅನೇಕ ಹೋರಾಟಗಾರರನ್ನು ಆಯಾ ಪ್ರಾಂತ್ಯಕ್ಕೆ ಸೀಮಿತಗೊಳಿಸದೆ ಅವರ ಸಾಧನೆಯನ್ನು ನಾಡಿಗೆ, ದೇಶಕ್ಕೆ ವಿಸ್ತರಿಸಬೇಕು. ಇತಿಹಾಸ ಎನ್ನುವುದು ಸ್ಥಳೀಯತೆ ಮೂಲಕ ಸೃಷ್ಟಿಯಾಗಬೇಕು. ಅದರೊಂದಿಗೆ ಇತಿಹಾಸದ ರೇಖೆ ವಿಸ್ತಾರವಾಗಬೇಕು. ಇಲ್ಲವಾದರೆ ಈ ನಾಡು, ದೇಶದ ಭದ್ರತೆ ಕಾಪಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನುಡಿದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್‌, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಜಿ.ರಾಧಿಕಾ, ನಗರಸಭೆ ಪ್ರಭಾರ ಅಧ್ಯಕ್ಷೆ ಸುಜಾತಾಮಣಿ, ಜಿಪಂ ಯೋಜನಾಧಿಕಾರಿ ಗಣಪತಿ ನಾಯಕ್‌, ಉಪವಿಭಾಗಾಧಿಕಾರಿ ರಾಜೇಶ್‌, ತಾಪಂ ಸದಸ್ಯ ಮಂಜೇಗೌಡ, ತಹಶೀಲ್ದಾರ್‌ ನಾಗೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ, ಸ್ವಾಭಿಮಾನಿ ಒಕ್ಕಲಿಗರ ವೇದಿಕೆ ಬಾಣಸವಾಡಿ ನಾಗಣ್ಣಗೌಡ, ಜೋಗಿಗೌಡ, ಯಶೋಧಾ, ಶಕುಂತಲಾ ಇತರರಿದ್ದರು.

ಮೆರವಣಿಗೆ: ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ಕಲಾಮಂದಿರದವರೆಗೆ ಸಾಗಿಬಂದಿತು. ಕೆಂಪೇಗೌಡರ ಪೋಷಾಕಿನಲ್ಲಿ ನಾಗೇಗೌಡರು ಕುದುರೆ ಏರಿ ಬಂದು ಗಮನಸೆಳೆದರು.

ಪೂಜಾ ಕುಣಿತ, ಡೊಳ್ಳು ಕುಣಿತ, ತಮಟೆ, ಗೊರವರ ಕುಣಿತ, ವೀರಗಾಸೆ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆ ಯಲ್ಲಿ ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next