Advertisement

ನವನಗರ ನಿರ್ಮಾಣದ ಕನಸು ಹೊತ್ತ ಕೆಂಪೇಗೌಡರು

03:47 PM Jun 27, 2017 | |

ನವನಗರದ ನಿರ್ಮಾಣದ ಕನಸು ಕಂಡಿದ್ದ ಕೆಂಪೇಗೌಡರಿಗೆ ಯಲಹಂಕ ನಾಡಿನ ಸುತ್ತ ಇರುವ ಹಲಸೂರು, ವರ್ತೂರು, ಬೇಗೂರು, ಜಿಗಣಿ, ಕನ್ನಳ್ಳಿ, ತಲಘಟ್ಟಪುರ, ಕುಂಬಳಗೋಡು, ಕೆಂಗೇರಿ, ಹೆಸರಘಟ್ಟ, ಬಾಣಾವಾರ ಮೊದಲಾದ ಮೂವತ್ತು ಸಾವಿರ ಪಗೋಡಗಳ ಉತ್ಪನ್ನ ಬರುವ 12 ಹೋಬಳಿಗಳನ್ನ ವಿಜಯನಗರದ ಅಚ್ಯುತರಾಯರು ಕೆಂಪೇಗೌಡರಿಗೆ ಬಿಟ್ಟುಕೊಡುತ್ತಾನೆ. ಕೆಂಪೇಗೌಡರ ಧರ್ಮನಿರಪೇಕ್ಷತೆ ಮತ್ತು ದಕ್ಷತೆಗಳನ್ನು ಮೆಚ್ಚಿ ಧರ್ಮವೀರ ಎಂಬ ಬಿರುದನ್ನು ಸಹ ನೀಡುತ್ತಾನೆ.

Advertisement

ಕೆಂಪೇಗೌಡರ ಆಳ್ವಿಕೆಯ ಪ್ರಮುಖ ಘಟ್ಟವೆಂದರೆ ಬೆಂಗಳೂರಿನ ನಿರ್ಮಾಣ. ಅಂದು ವಿಜಯನಗರವನ್ನು ಕಂಡಾಗ ಚಿಗುರೊಡೆದ ಕನಸು ಆಗಾಗ ಅವರನ್ನು ಕಾಡುತ್ತಲೆ ಇರುತ್ತದೆ. ವಿಜಯನಗರದ ಅರಸರ ಅನುಮತಿ ಸಿಕ್ಕಮೇಲಂತೂ ಕೆಂಪೇಗೌಡರ ಆನಂದಕ್ಕೆ ಎಣೆಯೇ ಇಲ್ಲದಂತಾಗುತ್ತದೆ. ಪ್ರತಿದಿನ ಪ್ರತಿಕ್ಷಣ ನವನಗರದ ಬಗೆಗೆ ಯೋಚನೆ ಮತ್ತು ಯೋಜನೆಯಲ್ಲಿ ಮುಳುಗುತ್ತಾರೆ.

ಅದಕ್ಕಾಗಿ ಕೆಂಪೇಗೌಡರು ಒಂದು ಸೂಕ್ತ ಸ್ಥಳವನ್ನು ಬುದ್ಧಿಪೂರ್ವಕವಾಗಿ ಹುಡುಕುತ್ತಾರೆ. ಆ ಸ್ಥಳ ನಗರ ಬಯಸುವ ಎಲ್ಲ ಅನುಕೂಲಗಳನ್ನು ಸಹ ಹೊಂದಿರುತ್ತದೆ. ಸುಂದರ ಭೌಗೋಳಿಕ ಪರಿಸರ, ವ್ಯವಸಾಯ ಯೋಗ್ಯ ಭೂಮಿ, ಸುತ್ತಲೂ ದಟ್ಟ ಕಾಡು, ಮೈಸೂರು ಕುಣಿಗಲ್‌ ಮತ್ತು ಕೋಲಾರದ ಮಧ್ಯೆ ಇದ್ದ ನಿಸರ್ಗದ ರಕ್ಷಣೆ, ವ್ಯಾಪಾರ ಅಭಿವೃದ್ಧಿ ಹೊಂದಲು ಬೇಕಾದ ಪ್ರಶಾಂತ ವಾತಾವರಣ, ಈ ಎಲ್ಲ ಅಂಶಗಳು ಕೆಂಪೇಗೌಡರಿಗೆ ಬೆಂಗಳೂರು ನಿರ್ಮಿಸಲು ಪ್ರೇರಣೆಯಾಗುತ್ತವೆ.

ಪೂರ್ವಭಾವಿಯಾಗಿ ಯೋಜನಾ ನಕ್ಷೆಯೊಂದನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ರಾಜಬೀದಿಗಳು, ಅರಮನೆ, ದ್ವಾರಗಳು, ಪೇಟೆ ಬೀದಿಗಳು ಎಲ್ಲೆಲ್ಲಿ ಎಷ್ಟೆಷ್ಟು ವಿಸ್ತಾರದಲ್ಲಿರಬೇಕು ಎಂಬುದನ್ನು ಅಧಿಕಾರಿಗಳೊಡನೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಆ ಯೋಜನೆಯಂತೆ 1537ರಲ್ಲಿ ನಗರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಾರೆ.
ಇಂದಿನ ಚಿಕ್ಕಪೇಟೆ ವೃತ್ತದಿಂದ ನಾಲ್ಕೂ ದಿಕ್ಕಿಗೆ ನಾಲ್ಕು ನೇಗಿಲುಗಳನ್ನು ಕಟ್ಟಿ ಪೂಜೆ ಮಾಡಿ ಬಿಡುತ್ತಾರೆ. ಅವು ಸಾಗಿದವರೆಗೂ ನಗರ ವಿಸ್ತಾರವೆಂದು ತೀರ್ಮಾನಿಸುತ್ತಾರೆ. ನಾಲ್ಕು ದಿಕ್ಕಿನಲ್ಲೂ ಏರುಗಳು ನಿಂತ ಸ್ಥಳವನ್ನು ನಗರದ ಎಲ್ಲೆಯೆಂದು ಗುರುತಿಸಲಾಗುತ್ತದೆ.

ನಾಲ್ಕು ಕಡೆಗೂ ನಾಲ್ಕು ದ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು ಹೆಬ್ಟಾಗಿಲು, ಕೆಂಗೇರಿ ಹೆಬ್ಟಾಗಿಲು, ಯಶವಂತಪುರ ಹೆಬ್ಟಾಗಿಲು ಮತ್ತು ಯಲಹಂಕ ಹೆಬ್ಟಾಗಿಲೆಂದು ಹೆಸರಿಡುತ್ತಾರೆ. ಯಾವ ಬಾಗಿಲಿನಿಂದ ಯಾವ ಊರಿಗೆ ಹೊರಡಬಹುದು ಆ ದ್ವಾರಗಳಿಗೆ ಆ ಊರಿನ ಹೆಸರುಗಳನ್ನೆ ಇಡಲಾಗುತ್ತದೆ. ಕೋಟೆ ನಿರ್ಮಿಸುವಾಗ ಮುಖ್ಯ ದ್ವಾರದ ಬಾಗಿಲು ನಿಲ್ಲದೇ ಬೀಳುತ್ತಿರಲು ಸೊಸೆ ಲಕ್ಷಿದೇವಿ ಆತ್ಮಾರ್ಪಣೆ ಮಾಡಿಕೊಂಡ ಐತಿಹ್ಯವೂ ಇದೆ. ಕೋರಮಂಗಲದಲ್ಲಿ ಇರುವ ಈಕೆಯ ಸಮಾಧಿಯ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯ ಇರುವುದಿಲ್ಲ.

Advertisement

ಬೆಂಗಳೂರು ರಕ್ಷಣೆಗೆ ಕೋಟೆಗಳ ನಿರ್ಮಾಣ: ಆಯಕಟ್ಟಿನ ಸ್ಥಳಗಳಲ್ಲಿ ದುರ್ಗಮವಾದ ಬೆಟ್ಟಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೋಟೆಗಳನ್ನು ಕಟ್ಟು ತ್ತಾರೆ. ರಾಮಗಿರಿಯಲ್ಲಿ ಕೋಟೆ ಕಟ್ಟಿದಾಗ ಅದು ರಾಮ ಗಿರಿದುರ್ಗವಾಗುತ್ತದೆ. ಶಿವಗಂಗೆಯಲ್ಲೂ ಕೋಟೆ ಕಟ್ಟಿದ ಬಗೆಗೆ ಭಕ್ತಜನಾನಂದಭಾಸ್ಕರ ಮತ್ತಿತರ ಕೃತಿಗಳು. ಹಲವು ಖಚಿತ ಸುಳಿವುಗಳನ್ನು ನೀಡುತ್ತವೆ. ಸಾವನ ದುರ್ಗದಲ್ಲಿ ಸಹ ಕೋಟೆ ನಿರ್ಮಿಸುತ್ತಾರೆ. ಹುತ್ತರೀ ದುರ್ಗದಲ್ಲಿ ಹಲವು ಸುತ್ತಿನ ಕೋಟೆಯನ್ನು ನಿರ್ಮಿಸು ತ್ತಾರೆ.

ಅಲ್ಲಿ ಸೈನ್ಯವನ್ನು ಜಮಾವಣೆ ಮಾಡುತ್ತಾರೆ. ರಾಮನಗರದ ಬಳಿ ಮದ್ದು ಗುಂಡಿನ ಕಾರ್ಖಾನೆ ಸ್ಥಾಪಿಸುತ್ತಾರೆ. ದೇವನಹಳ್ಳಿಯಲ್ಲಿ ಸೈನಿಕ ತರಬೇತಿ ಕೇಂದ್ರ ಸ್ಥಾಪಿಸುತ್ತಾರೆ. ಗಡಿ ಸಂರಕ್ಷಣೆಗಾಗಿ ವಿಶೇಷ ತರಬೇತಿ ಹೊಂದಿದ ಗುಪ್ತ ಸೈನಿಕರನ್ನು ನೇಮಕ ಮಾಡುತ್ತಾರೆ. ಮಾನವ ಸಂಪತ್ತು ನಷ್ಟವಾಗದಂತೆ ಸದೃಢ‌ವಾದ ಯುವಕರಿಗೆ ವಿವಿಧ ಬಗೆಯ ತರಬೇತಿಗಳನ್ನು ನೀಡುತ್ತಾರೆ. ಬೆಂಗಳೂರು ನಗರದ ರಕ್ಷಣೆಗಾಗಿ ಕೋಟೆಯನ್ನು ನಿರ್ಮಿಸಿದ ತರುವಾಯ ಅದನ್ನು ಶತ್ರುಗಳಿಂದ ಸಂರಕ್ಷಿಸಲು ಆಯಕಟ್ಟನ ಸ್ಥಳಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸುತ್ತಾರೆ. 

ಬೆಂಗಳೂರಿನ ಈಗಿನ ಲಾಲ್‌ಬಾಗ್‌ನಲ್ಲಿ ಬಂಡೆಯ ಮೇಲೆ, ಗವಿ ಗಂಗಾಧರೇಶ್ವರ ದೇವಾಲಯದ ಹತ್ತಿರ ವಿರುವ ಬಂಡಿಮಾಂಕಾಳಮ್ಮ ದೇವಾಲಯದ ಬಳಿ, ಹಲಸೂರು ಕೆರೆಯ ದಂಡೆಯ ಮೇಲೆ ಮತ್ತು ಈಗಿನ ಮೇಖೀ ಸರ್ಕಲ್‌ ಬಳಿ ಇರುವ ರಮಣಶ್ರೀ ಉದ್ಯಾನದಲ್ಲಿ ಗೋಪುರಗಳನ್ನು ಈಗಲೂ ಕಾಣಬಹುದು. ಕೆಂಪೇ ಗೌಡರು ನಿರ್ಮಿಸಿದ ಇಂತಹದೇ ಗೋಪುರಗಳು ಶಿವಗಂಗೆ, ಮಾಗಡಿ, ಸಾವನದುರ್ಗ, ಮುಂತಾದ ಸ್ಥಳಗಳಲ್ಲೂ ಇವೆ.

ಮಳೆ ನೀರು ಸಂಗ್ರಹಕ್ಕೆ ಒತ್ತು: ಬೆಂಗಳೂರು ನಗರ ಪ್ರದೇಶದ ಸುತ್ತಮುತ್ತ ಯಾವುದೇ ನದಿಯಾಗಲಿ, ಇತರೆ ನೈಸರ್ಗಿಕ ಜಲಮೂಲಗಳಾಗಲಿ ಇರಲಿಲ್ಲ. ಹಾಗಾಗಿ ಮಳೆಯ ನೀರನ್ನು ಸಂಗ್ರಹಿಸಿ ಬಳಸದೆ ಬೇರೆ ವಿಧಿಯಿಲ್ಲ ಎಂಬ ಅಂಶ ಕೆಂಪೇಗೌಡರಿಗೆ ಮನದಟ್ಟಾಗಿತ್ತು. ಹಾಗಾಗಿಯೇ ಅವರು ಬೆಂಗಳೂರು ಮತ್ತು ಅದರ ಸುತ್ತಲೂ ಹಲವಾರು ಕೆರೆಗಳನ್ನು ನಿರ್ಮಿಸಿದರು. ಕೃಷಿಗೆ ಪೋ›ತ್ಸಾಹ ನೀಡುವುದಕ್ಕಾಗಿ ನಾಡಿನ ಎಲ್ಲೆಡೆ ಕೆರೆ, ಕಾಲುವೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದಲ್ಲದೆ ಮೊದಲಿದ್ದ ಕೆರೆಗಳನ್ನು ಸಹ ಜೀರ್ಣೋದ್ಧಾರ ಮಾಡಿಸಿದರು.

ಇಂತಹ ನೀರಾವರಿ ವ್ಯವಸ್ಥೆಯಲ್ಲಿಯೂ ಕೆಂಪೇಗೌಡರ ಯೋಜನೆ ವೈಜ್ಞಾನಿಕವಾಗಿತ್ತು. ಒಂದು ಕೆರೆ ತುಂಬಿದ ನಂತರ ಅದರಿಂದ ಹೊರಹರಿಯುವ ನೀರು ಮತ್ತೂಂದು ಕೆರೆಗೆ ಹೋಗುವಂತೆ ಸರಣೀ ಜಾಲದ ವ್ಯವಸ್ಥೆಯಲ್ಲಿ ಕೆರೆಗಳನ್ನು ನಿರ್ಮಿಸಿದರು. ಬೆಂಗಳೂರಿನಿಂದ ಹರಿದು ಹೋಗುವ ನೀರು ಕೋರಮಂಗಲ ಆಡುಗೋಡಿಗಳ ಮೂಲಕ ಹರಿದು ಚಳ್ಳಘಟ್ಟದ ಕೆರೆಗೆ ಹೋಗಿ ಅಲ್ಲಿಂದ ಯಮಲೂರು ಮತ್ತು ಬೆಳ್ಳಂದೂರು ಕೆರೆಗಳನ್ನು ಸೇರುವಂತೆ ವ್ಯವಸ್ಥೆ ಮಾಡಿದರು.

ಅಲ್ಲಿಂದ ಮುಂದೆ ಹರಿದ ನೀರಿಗೆ ವರ್ತೂರಿನ ಬಳೆ ಅಡ್ಡಗಟ್ಟಿ ವರ್ತೂರು ಕೆರೆಯನ್ನು ನಿರ್ಮಿಸಿದರು. ಈ ಕೆರೆಯ ಕೋಡಿಯಿಂದ ಹರಿದ ನೀರು ದಕ್ಷಿಣ ಪಿನಾಕಿನಿಯನ್ನು ಸೇರುವಂತೆ ವ್ಯವಸ್ಥೆ ಮಾಡಿದರು. ಇಂತಹ ವ್ಯವಸ್ಥೆಯಿಂದ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾದವು ಮತ್ತು ಭತ್ತ ಮುಂತಾದ ಧಾನ್ಯಗಳಲ್ಲಿ ಉತ್ಪತ್ತಿಯೂ ಹೆಚ್ಚಾಯಿತು. ವೃಷಭಾವತಿ ನದಿಗೆ ಅಡ್ಡಗಟ್ಟೆ ಹಾಕಿ ಮನೆದೇವತೆ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುದಿ ಕೆರೆಯನ್ನು ಕಟ್ಟಿಸಿದರು.

ಮೆಜೆಸ್ಟಿಕ್‌ ಬಳಿ ಇರುವ ಧರ್ಮಾಂಬುದಿ ಕೆರೆಯನ್ನು ಕಟ್ಟಿಸಿದರು. ಅದು ಇಂದು ಬಸ್‌ ನಿಲ್ದಾಣವಾಗಿದೆ. ಪತ್ನಿ ಚೆನ್ನಮ್ಮನ ಹೆಸರಿನಲ್ಲಿ ಚೆನ್ನಮ್ಮನ ಕೆರೆಯನ್ನು ಕಟ್ಟಿಸಿದರು. ಸಂಪಂಗಿರಾಮನಗರದಲ್ಲಿ ಸಂಪಂಗಿ ಕೆರೆಯನ್ನು ನಿರ್ಮಿಸಿದರು. ಇಲ್ಲಿ ಈಗ ಕಂಠೀರವ  ಸ್ಟೇಡಿಯಂ ಇದೆ. ಜಕ್ಕರಾಯನ ಕೆರೆ, ಕಾರಂಜಿ ಕೆರೆ,  ಕೆಂಪಾಪುರ ಅಗ್ರಹಾರ ಕೆರೆ, ಹಕ್ಕಿ ತಿಮ್ಮನಹಳ್ಳಿ ಕೆರೆ, ಯಡಿಯೂರು ಕೆರೆ ಹೀಗೆ ಸಾಲುಸಾಲಾಗಿ ಕೆರೆಗಳನ್ನು ನಿರ್ಮಾಣ ಮಾಡಿದರು.  ಇನ್ನೂ ಹಲವಾರು ಕೆರೆಗಳನ್ನು ಬೆಂಗಳೂರಿನ ಸುತ್ತ ನಿರ್ಮಿಸಿದ ಮತ್ತು ಅಭಿವೃದ್ಧಿ ಪಡಿಸಿದ ಕೀರ್ತಿ ಕೇಪೇಗೌಡರಿಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next