Advertisement

ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ಅಭಿವೃದ್ಧಿ ವಿವಿ

06:00 AM Jun 28, 2018 | Team Udayavani |

ಬೆಂಗಳೂರು: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “ನಾಡಪ್ರಭು ಕೆಂಪೇಗೌಡ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕಿದೆ. ಹೀಗಾಗಿ ಕೆಂಪೇಗೌಡರ ಹೆಸರಿನಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಅವರ ಹೆಸರು ಚಿರಾಯುವಾಗಿ ಉಳಿಯುವಂತೆ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗೆ ಕೆಂಪೇಗೌಡ ಹೆಸರಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವಿದ್ಯಾಲಯ ನಿರ್ಮಿಸಲು ಉದ್ದೇಶಿಸಿದ್ದು, ಇದರಿಂದ ಸಾಕಷ್ಟು ಕುಟುಂಬಗಳಿಗೆ ನೆರವಾಗಲಿದೆ. ಸರ್ಕಾರದ ವತಿಯಿಂದ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದು ಹೇಳಿದರು.

ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತರಾದವರಲ್ಲ. ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಅವರ ದೂರದೃಷ್ಟಿ ಕಾರಣವಾಗಿದೆ. ನಿರೀಕ್ಷೆಗೂ ಮೀರಿ ನಗರ ಬೆಳೆದ ಪರಿಣಾಮ, ವಸತಿ, ಕುಡಿಯುವ ನೀರು ಹಾಗೂ ಮೂಲಸೌಕರ್ಯದಂತಹ ಸಮಸ್ಯೆಗಳು ಎದುರಾಗಿದ್ದು, ಸರ್ಕಾರದಿಂದ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕೆಂಪೇಗೌಡ ವಸ್ತು ಸಂಗ್ರಹಾಲಯಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಚುನಾವಣಾ ಫ‌ಲಿತಾಂಶಕ್ಕೂ ಮೊದಲೇ ಡಿ.ಕೆ.ಶಿವಕುಮಾರ್‌ ಅವರು ಅತಂತ್ರ ವಿಧಾನಸಭೆ ರಚನೆಯಾದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದ್ದ ಮಾತುಗಳನ್ನು ಉಳಿಸಿಕೊಂಡಿದ್ದಾರೆ. ಅದೇ ರೀತಿ ಕುಮಾರಸ್ವಾಮಿಯವರು ಐದು ವರ್ಷ ಮುಖ್ಯಮಂತ್ರಿಯಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಿವಕುಮಾರ್‌ ವಹಿಸಿಕೊಳ್ಳಬೇಕೆಂದು ಸಮುದಾಯದ ಪರವಾಗಿ ಕೋರುತ್ತೇನೆ ಎಂದು ಹೇಳಿದರು.

Advertisement

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸಚಿವರಾದ ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ, ಜಮೀರ್‌ ಅಹ್ಮದ್‌ಖಾನ್‌, ಡಾ.ಜಯಮಾಲ ರಾಮಚಂದ್ರ, ಮೇಯರ್‌ ಆರ್‌.ಸಂಪತ್‌ರಾಜ್‌, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಗೋವಿಂದರಾಜು, ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.

ಉ.ಕ.ಭಾಗ ಕಡೆಗಣಿಸಿಲ್ಲ
ಬೆಂಗಳೂರಿನಿಂದಲೇ ರಾಜ್ಯ ಸರ್ಕಾರಕ್ಕೆ ಶೇ. 60ರಿಂದ ಶೇ.65ರಷ್ಟು ಆದಾಯ ಬರುತ್ತಿದ್ದು, ಅದನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆ, ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ. ಆದರೆ, ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದ್ದು, ಸರಿಯಾದ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಭಾವನೆ ಮೂಡಿಸುವ ಕೆಲಸವಾಗುತ್ತಿದೆ. ನಮ್ಮ ಸರ್ಕಾರ ರಚನೆಯಾಗಿ ಒಂದು ತಿಂಗಳಾಗಿದ್ದು, ಸಮ್ಮಿಶ್ರ ಸರ್ಕಾರ ಯಾವುದೇ ಒಂದು ಭಾಗಕ್ಕೆ ಸೀಮಿತವಾದ ಸರ್ಕಾರವಲ್ಲ. ಅಖಂಡ ಕರ್ನಾಟಕ ಅಭಿವೃದ್ಧಿಗೆ ರಚನೆಯಾದ ಸರ್ಕಾರವಾಗಿದೆ ಎಂದು ಹೇಳಿದರು.

ರೈತರಿಗೆ ಶಕ್ತಿ ತುಂಬುವ ಕೆಲಸವಾಗಿದೆ
ರಾಜ್ಯದ ಅಭಿವೃದ್ಧಿ ಕುಂಠಿತವಾಗದಂತೆ, ಆರ್ಥಿಕ ಶಿಸ್ತು ಉಲ್ಲಂಘನೆಯಾಗದಂತೆ ರೈತರನ್ನು ಉಳಿಸಿಕೊಳ್ಳಲು ಸಾಲಮನ್ನಾ ಮಾಡಲಾಗುವುದು. ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗುವುದಿಲ್ಲ ಎಂಬ ವಾದ ಒಪ್ಪುತ್ತೇನೆ. ಆದರೆ, ಕಷ್ಟದಲ್ಲಿರುವ ರೈತರಿಗೆ ಶಕ್ತಿ ತುಂಬುವುದು ಅನಿವಾರ್ಯ. ಜತೆಗೆ ಮುಂದಿನ ದಿನಗಳಲ್ಲಿ ರೈತರನ್ನು ಆರ್ಥಿಕವಾಗಿ ಸದೃಢವಾಗಿಸುವ ಉದ್ದೇಶದಿಂದ ಕೃಷಿ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಖ್ಯಾತೆ ತೆಗೆಯುವುದು ತಪ್ಪುತ್ತದೆ
ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯ ಭರ್ತಿಯಾಗಲಿದೆ. ಇದರಿಂದ ತಮಗೆ ಹಾಗೂ ಡಿ.ಕೆ.ಶಿವಕುಮಾರ್‌ಗೆ ತಲೆನೋವು ಕಡಿಮೆಯಾಗುತ್ತದೆ. ಜತೆಗೆ ತಮಿಳುನಾಡು ನೀರು ಬಿಡುವಂತೆ ಖ್ಯಾತೆ ತೆಗೆಯುವುದು ತಪ್ಪುತ್ತದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೆಂಪೇಗೌಡ ಜಯಂತಿ ಯಾವುದೇ ಒಂದು ಜಾತಿ ಅಥವಾ ಪಕ್ಷದ ಹಬ್ಬವಾಗಿರದೆ ನಾಗರಿಕರ ಹಬ್ಬವಾಗಿದ್ದು, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಜಯಂತಿ ನಡೆಯಬೇಕಿದೆ. ಇದರೊಂದಿಗೆ ಯುವ ಪೀಳಿಗೆಗೆ ಕೆಂಪೇಗೌಡರ ಕುರಿತು ತಿಳಿಸುವ ಉದ್ದೇಶದಿಂದ ಪಠ್ಯಪುಸ್ತಕದಲ್ಲಿ ಅವರ ಕುರಿತ ವಿಷಯವನ್ನು ಸೇರಿಸಬೇಕಿದೆ.
– ಡಿ.ಕೆ.ಶಿವಕುಮಾರ್‌, ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಸಚಿವ

ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿಯ ಕುರಿತು ಹಲವು ಕನಸುಗಳನ್ನು ಹೊಂದಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರ ನೀಡಬೇಕು. ಒಂದೊಮ್ಮೆ ಕುಮಾರಸ್ವಾಮಿಯವರ ವಿರುದ್ಧ ಪ್ರಹಾರಕ್ಕೆ ಮುಂದಾದರೆ, ಯಾರನ್ನೂ ಕ್ಷಮಿಸುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಪ್ರತಿರೋಧ ಎದುರಿಸಬೇಕಾಗುತ್ತದೆ.
– ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠ

ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಬೇಡಿಕೆಗಳು
– ಪಠ್ಯ ಪುಸ್ತಕದಲ್ಲಿ ಕೆಂಪೇಗೌಡ ವಿಚಾರ ಸೇರ್ಪಡೆ ಮಾಡುವುದು
– ಅಹಮದಾಬಾದ್‌ನಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರ ಪ್ರತಿಮೆ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟವರ್‌ ಅಥವಾ ಸೌಧ ನಿರ್ಮಿಸಬೇಕು
– ಬಸವೇಶ್ವರರ ಭಾವಚಿತ್ರದಂತೆ ಕೆಂಪೇಗೌಡರ ಭಾವಚಿತ್ರವನ್ನೂ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು
– ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರು ನಾಮಕರಣ ಮಾಡಬೇಕು
– ಕೆಂಪೇಗೌಡರ ಜಯಂತಿಯನ್ನು ದಸರಾ ಮಾದರಿಯಲ್ಲಿ ಆಚರಿಸಬೇಕು
– ಕೆಂಪೇಗೌಡರ ಕೋಟೆಗಳ ಒತ್ತುವರಿ ತಡೆದು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next