Advertisement

ಕೆಮ್ಮಿಂಜೆ : ಈ ಮಳೆಗಾಲದಲ್ಲೂ ಸಾಹಸದಾಟ ಅನಿವಾರ್ಯ…!

03:12 PM Jun 25, 2018 | Team Udayavani |

ಕೆಮ್ಮಿಂಜೆ : ಹಲವು ಮಂದಿಯ ಸುಮಾರು 2 ದಶಕಗಳ ಬೇಡಿಕೆಯಾದ ಕಿರು ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಇರಿಸಲಾಗಿದೆ. ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ. ಆದರೆ ಕಾಮಗಾರಿಗೆ ಮುಹೂರ್ತ ಕೂಡಿಬರದೆ ಈ ಮಳೆಗಾಲಕ್ಕೂ ಜನತೆ ಸುತ್ತು ಬಳಸಿ ಸಂಚರಿಸುವುದು ಅನಿವಾರ್ಯವಾಗಿದೆ. ಇದು ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಕಿರು ಸೇತುವೆಯ ಬೇಡಿಕೆ ಇನ್ನೂ ಈಡೇರದ ವಿಚಾರ. ಕೆಮ್ಮಿಂಜೆ ದೇವಸ್ಥಾನದ ಬಳಿಯಿಂದ ಕೆಮ್ಮಿಂಜೆ, ಮೊಟ್ಟೆತ್ತಡ್ಕ, ಬೆದ್ರಾಳ ಸಂಪರ್ಕ ರಸ್ತೆಗೆ ನಗರಸಭೆಯ ನಗರೋತ್ಥಾನ ಯೋಜನೆಯಡಿ 1 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ಈ ಅನುದಾನದಲ್ಲಿ ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಾದ ಕೆಮ್ಮಿಂಜೆ ದೇವಸ್ಥಾನದ ಬಳಿಯ ಕಿರುಸೇತುವೆಯೂ ಸೇರಿದೆ. ಆದರೆ ಕಾಮಗಾರಿ ಆರಂಭಕ್ಕೆ ಮಾತ್ರ ಇನ್ನೂ ದಿನ ಕೂಡಿ ಬಂದಿಲ್ಲ.

Advertisement

ಅಪಾಯದ ಸ್ಥಿತಿ
ಕೆಮ್ಮಿಂಜೆ ಗ್ರಾಮ ಸೇರಿದಂತೆ ಮೊಟ್ಟೆತ್ತಡ್ಕ ಪರಿಸರದಲ್ಲಿ ಹಲವಾರು ಮನೆಗಳಿದ್ದು, ಇಲ್ಲಿಯ ಜನತೆ ನಗರಕ್ಕೆ ಬರಲು ಈ ರಸ್ತೆಯನ್ನೇ ಬಳಸಿಕೊಂಡಿದ್ದಾರೆ. ಮೂರು ಸಿಮೆಂಟ್‌ ಪೈಪ್‌ಗ್ಳನ್ನು ನೀರಿನ ತೋಡಿಗೆ ಹಾಕಿ ಮೇಲಿನಿಂದ ಮಣ್ಣು ಹಾಕಿದ ಸ್ಥಿತಿಯಲ್ಲಿರುವ ಈ ಕಾಲುಸಂಕವನ್ನು ದಾಟಿ ಬರಬೇಕು. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಸಂಕದ ಮೇಲೆ ಹಾಕಿದ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಅಪಾಯ ಸ್ಥಿತಿಯಲ್ಲಿತ್ತು. ಅನಂತರ ಸ್ಥಳೀಯರೇ ಕೆಂಪು ಕಲ್ಲು ಬಳಸಿ ತಾತ್ಕಾಲಿಕವಾಗಿ ದ್ವಿಚಕ್ರ ವಾಹನ ಸಾಗುವುದಕ್ಕೆ ಸಾಕಾಗುವಷ್ಟು ದುರಸ್ತಿ ಪಡಿಸಿದ್ದಾರೆ. ಭಾರೀ ಮಳೆ ಬಂದಲ್ಲಿ ಪೈಪ್‌ ಕೊಚ್ಚಿಕೊಂಡು ಹೋಗುವ ಭೀತಿ ಇದೆ.

ದೇವಸ್ಥಾನದ ಬಳಿ ಖಾಸಗಿ ಜಾಗವನ್ನು ರಸ್ತೆಗಾಗಿ ಸ್ವಾಧೀನ ಮಾಡಿಕೊಂಡು ಸಮರ್ಪಕಗೊಳಿಸಿದರೆ ಕೆಮ್ಮಿಂಜೆ ಮೂಲಕ ಮುಂಡೂರು, ಸುಬ್ರಹ್ಮಣ್ಯಕ್ಕೆ ಹೋಗುವವರಿಗೂ ಬಹುಪಯೋಗಿ ರಸ್ತೆಯಾಗಿಯೂ ಇದು ಪ್ರಯೋಜಕ್ಕೆ ಬರಲಿದೆ. ಆದರೆ ಯಾವಾಗಾ ಅಭಿವೃದ್ಧಿಯಾಗುತ್ತದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

ಕೊನೆಗೂ ಸ್ಪಂದನೆ
ರಸ್ತೆ ಅಭಿವೃದ್ಧಿ ಹಾಗೂ ಈ ಕಿರುಸೇತುವೆ ರಚನೆಗೆ ಸ್ಥಳೀಯರು ಹಲವು ವರ್ಷಗಳಿಂದ ಸಲ್ಲಿಸಿದ ಮನವಿಗಳಿಗೆ ಸ್ಪಂದಿಸಿದ ನಗರಸಭೆ ಕಳೆದ ಸಾಲಿನಲ್ಲಿ ಈ ಅನುದಾನ ಮಂಜೂರುಗೊಳಿಸಿ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಹಿಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಈ ರಸ್ತೆ ಕಾಮಗಾರಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಶೀಘ್ರ ಚಾಲನೆ
ನಗರೋತ್ಥಾನ ಯೋಜನೆಯಡಿ ಕೆಮ್ಮಿಂಜೆ ಬಳಿಯ ಈ ರಸ್ತೆಯ ಅಭಿವೃದ್ಧಿ ಹಾಗೂ ಕಿರುಸೇತುವೆ ನಿರ್ಮಿಸಲು 1 ಕೋಟಿ ರೂ. ಅನುದಾನ ಇರಿಸಲಾಗಿದೆ. ಹಿಂದಿನ ಶಾಸಕರು ಶಂಕುಸ್ಥಾಪನೆಯನ್ನೂ ಮಾಡಿದ್ದಾರೆ. ಮಳೆಗಾಲ ಬಂದಿರುವುದರಿಂದ ಕಾಮಗಾರಿ ನಡೆಸಲು ವಿಳಂಬವಾಗಿದೆ. ಮಳೆ ಕಡಿಮೆಯಾದ ಮೇಲೆ ಶೀಘ್ರ ರಸ್ತೆ ಅಭಿವೃದ್ಧಿ ಹಾಗೂ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು.
 - ರೂಪಾ ಟಿ. ಶೆಟ್ಟಿ, ಪೌರಾಯುಕ್ತರು, ಪುತ್ತೂರು ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next