ಕೆಂಭಾವಿ: ಸಂಗೀತದಲ್ಲಿ ಹಲವು ಔಷಧಿಯ ಗುಣಗಳಿದ್ದು, ಮನುಷ್ಯನ ಮಾನಸಿಕ ನೆಮ್ಮದಿಗೆ ಸಂಗೀತ ಸಹಕಾರಿಯಾಗಿದೆ ಎಂದು ನಿವೃತ್ತ ಶಿಕ್ಷಕ ಪ್ರಹ್ಲಾದಾಚಾರ್ಯ ಜೋಶಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಗಾಯತ್ರಿ ಯುವತಿ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಸಂಗೀತದಿಂದಲೆ ಮಳೆ ತರೆಸುವ ಹಾಗೂ ದೀಪ ಹಚ್ಚುವ ಕೆಲಸ ನೆರವೇರುತ್ತಿದ್ದು ಎಂದು ವೇದ-ಪುರಾಣಗಳಲ್ಲಿ ಉಲ್ಲೇಖವಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ದಾಸರು, ಶರಣರು, ವಚನಕಾರರು, ಸಂತರು ಸೇರಿದಂತೆ ಹಲವು ಸಂಗೀತ ದಿಗ್ಗಜರು ಆಗಿ ಹೋಗಿದ್ದು, ಅಂಥ ದಾಸರ ಸಾಲಿನಲ್ಲಿ ಕೆಂಭಾವಿಯ ಭೀಮದಾಸರು ಒಬ್ಬರಾಗಿದ್ದಾರೆ ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಮನರಾವ್ ದೇಶಪಾಂಡೆ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಕೆಂಭಾವಿ ಪಟ್ಟಣದಲ್ಲಿ ಹಲವು ಪ್ರತಿಭೆಗಳು ಹೊರ ಬರುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಲ್ಲಿನ ಸಂಗೀತ ಪರಿಸರ. ಜಿಲ್ಲೆಯಲ್ಲಿ ಸಂಗೀತದ ಹೊಸ ಪೀಳಿಗೆ ಹೊರ ತರುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ದತ್ತಪ್ಪ ಸಾಗನೂರ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯ ಬಸವರಾಜ ಭಂಟನೂರ ಪ್ರಾಸ್ತಾವಿಕ ಮಾತನಾಡಿದರು. ಹಳ್ಳೇರಾವ್ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಇಂದಿರಾ ಕುಲಕರ್ಣಿ ಅವರಿಂದ ತತ್ವಪದ, ಪೂರ್ಣಿಮಾ ಹಳ್ಳೇರಾವ್ ಕುಲಕರ್ಣಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಬಸವರಾಜ ಭಂಟನೂರ ಹಾರ್ಮೋನಿಯಂ, ಯಮುನೇಶ ಯಾಳಗಿ ಹಾಗೂ ಕಾಳಪ್ಪ ವಿಶ್ವಕರ್ಮ ತಬಲಾ ಹಾಗೂ ವಾದಿರಾಜ ಕುಲಕರ್ಣಿ ತಾಳ ಸಾಥ್ ನೀಡಿದರು.
ಗಾಯತ್ರಿ ಯುವತಿ ಮಂಡಳಿ ಅಧ್ಯಕ್ಷೆ ಲತಾಬಾಯಿ ಸಂಜೀವರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪಿಯು ಕಾಜೇಜಿನ ಉಪನ್ಯಾಸಕ ನರಸಿಂಹರಾವ್ ಕುಲಕರ್ಣಿ, ತಿರುಮಲಾಚಾರ್ಯ ಜೋಶಿ ಕೃಷ್ಣಾಜಿ ಕುಲಕರ್ಣಿ ಇದ್ದರು. ವಿಜಯಾಚಾರ್ಯ ಪುರೋಹಿತ ನಿರೂಪಿಸಿ, ವಂದಿಸಿದರು.