ಕೆಂಭಾವಿ: ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯನ ಜೀವನದ ಅಂತಿಮ ಗುರು ಮುಕ್ತಿಯಾಗಿದೆ. ಮುಕ್ತಿ ಪಡೆಯಲು ಶ್ರವಣ ಭಕ್ತಿ ಅತ್ಯಂತ ಶ್ರೇಷ್ಠ ಸಾಧನವಾಗಿದೆ ಎಂದು ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಮುದನೂರ ಕಂಠಿ ಹನುಮಾನ ದೇವರ 21ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ಮುಕ್ತಿ ಸಾಧನಗಳಲ್ಲಿ ಭಕ್ತಿ ಪ್ರಮುಖವಾಗಿದೆ. 9 ವಿಧಾನಗಳ ಭಕ್ತಿಯಲ್ಲಿ ಶ್ರವಣ ಭಕ್ತಿಯೇ ಶ್ರೇಷ್ಠವಾಗಿದೆ.
ಜನ್ಮ ತಾಳಿದ ಪ್ರತಿಯೊಬ್ಬ ಜೀವಿಗೆ 12ನೇ ದಿನಕ್ಕೆ ನಾಮಕರಣ ಸಂಸ್ಕಾರ ಮಾಡುತ್ತಾರೆ. ಅಂದು ಆ ಮಗುವಿಗೆ ಒಂದು ಅಂಕಿತನಾಮ ಕೊಡಲಾಗುತ್ತದೆ. ಪ್ರತಿಯೊಂದು ಮಗುವಿಗೆ ಅದೇ ನಾಮ ಬಳಸಲಾಗುತ್ತದೆ. ಆದ್ದರಿಂದ ಮಗು ಆ ನಾಮದ ಅಭಿಮಾನ ಮಾಡಿಕೊಳ್ಳುತ್ತ ಹೋಗುತ್ತದೆ. ತನ್ನ ಬಂಧು ಪರಿವಾರ ಸಂಬಂಧವನ್ನು ಕಿವಿಗಳ ಮೂಲಕ ಕೇಳುತ್ತ ಅವುಗಳ ಮೇಲೆ ನನ್ನದು ಎಂಬ ಅಭಿಮಾನ ಮಾಡುವುದು. ಅಹಂಕಾರ ಮಮಕಾರಗಳು ಜೀವಿಗಳ ಬಂಧನಕ್ಕೆ ಕಾರಣವಾಗುವವು. ಅನೇಕ ಜನ್ಮಗಳಿಂದ ಬಂದಿರುವ ಅನಾದಿ ಅಹಂಕಾರ ಮಮಕಾರಗಳು ತೊಲಗಬೇಕಾದರೆ ಗುರುವಿನ ಉಪದೇಶವೇ ಮುಖ್ಯವಾಗಿದೆ. ಸದ್ಗುರು ಉಪದೇಶದ ಮೂಲಕ ಮನುಷ್ಯನಲ್ಲಿ ಬಂದಿರುವ ನಾನು ಮತ್ತು ನನ್ನದು ಎಂಬ ತಪ್ಪು ತಿಳಿವಳಿಕೆ ದೂರ ಮಾಡುತ್ತಾರೆ. ಹೀಗೆ ಗುರುವಿನ ಉಪದೇಶದ ಮೂಲಕ ಶ್ರವಣವೇ ಮುಕ್ತಿ ಸಾಧನವಾಗಿದೆ ಎಂದು ಹೇಳಿದರು.
ಎಸ್. ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗನಗೌಡ ಪಾಟೀಲ ಕಂಠಿ ಮಠದ ಮಹತ್ವದ ಕುರಿತು ವಿವರಿಸಿದರು. ಪೀಠಾಧಿಪತಿ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಬ್ರಹ್ಮ ಮಠದ ಗಿರಿಧರ ಶಿವಾಚಾರ್ಯರು, ಕಾಂತೇಶ್ವರ ಮಠದ ಚನ್ನಬಸವ ಶಿವಾಚಾರ್ಯರು, ಯಡ್ರಾಮಿ ಹಿರೇಮಠದ ಗುರುಶಾಂತ ಮೂರ್ತಿ ಶಿವಾಚಾರ್ಯರು, ಭೀಮರಾಯ ಸಾಹು ಹೊಟ್ಟಿ, ಪ್ರಭುಗೌಡ ಹರನಾಳ, ಚನ್ನಪ್ಪಗೌಡ ಬೆಕಿನಾಳ, ಬಸವರಾಜ ಹೊಸಮನಿ, ಬಾಬುಗೌಡ ಪಾಟೀಲ, ಸಿದ್ಧಣ್ಣ ಹೊಟ್ಟಿ, ಜಿಪಂ ಮಾಜಿ ಸದಸ್ಯ ಎಚ್.ಸಿ. ಪಾಟೀಲ, ಸಿಪಿಐ ವೀರಭದ್ರಯ್ಯಸ್ವಾಮಿ ಕಾಚಾಪುರ, ಪಿಎಸ್‌ಐ ಸುದರ್ಶನರೆಡ್ಡಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇದ್ದರು.
ಶರಣುಕುಮಾರ ಯಾಳಗಿ, ಯಮನೇಶ ಯಾಳಗಿ ಹಾಗೂ ಈಶ್ವರ ಬಡಿಗೇರ ಅವರಿಂದ ಸಂಗೀತ ಸೇವೆ ನೆಡಯಿತು. ಮಡಿವಾಳಯ್ಯ ಶಾಸ್ತ್ರಿಗಳು ನಿರೂಪಿಸಿದರು. ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿ, ವಂದಿಸಿದರು.