Advertisement

ಭಾರತದ ವಿಸ್ತೀರ್ಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಸಮುದ್ರಾರಣ್ಯ

11:43 PM Oct 29, 2022 | Team Udayavani |

ಅಮೆಜಾನ್‌ ಮಳೆಕಾಡಿನಿಂದ ಹಿಡಿದು ಬೋರಿಯಲ್‌ ಕಾಡಿನವರೆಗೆ, ಪ್ರಪಂಚದ ಅತೀ ದೊಡ್ಡ ಕಾಡುಗಳ ಹೆಸರುಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ ಸಮುದ್ರದೊಳಗೆ ಯಾವುದಾದರೂ ಕಾಡಿನ ಬಗ್ಗೆ ಕೇಳಿದ್ದೀರಾ? ವಾಸ್ತವವಾಗಿ, ವೆಸ್ಟರ್ನ್ ಆಸ್ಟ್ರೇಲಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಪಂಚದ ಅನೇಕ ಸ್ಥಳಗಳಲ್ಲಿ ಸಾಗರ ಕಾಡುಗಳನ್ನು ಕಂಡುಹಿಡಿದಿದ್ದಾರೆ ಮತ್ತು ಅವುಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಈ ಎಲ್ಲ ಕಾಡುಗಳ ಗಾತ್ರವನ್ನು ನೋಡಿದರೆ ಅದು ಭಾರತದ ವಿಸ್ತೀರ್ಣಕ್ಕಿಂತ ಎರಡು ಪಟ್ಟು ಹೆಚ್ಚು ದೊಡ್ಡದಾಗಿದೆ. ಇದು ಕೇವಲ ಹೊರದೇಶಗಳಲ್ಲಿ ಕಂಡುಬಂದಿದ್ದು, ಇದರಿಂದ ಆಗುವ ಉಪಯೋಗಗಳ ಬಗ್ಗೆ ಜನರಿಗೆ ತಿಳಿಸಲು ಮುಂದಾಗಿದ್ದಾರೆ.

Advertisement

ಏನು?
ಸಾಗರದ ಆಳದಲ್ಲಿರುವ ಅರಣ್ಯವನ್ನು ಸಮುದ್ರಾರಣ್ಯ ಎಂದು ಕರೆಯಲಾಗುತ್ತದೆ. ಇವುಗಳನ್ನು ಕೆಲ್ಪ್ ಕಾಡುಗಳೆಂದು ಕರೆಯಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಕಡಲ ಕಳೆ ಯಿಂದ ನಿರ್ಮಾಣಗೊಂಡಿರುತ್ತದೆ. ಇದು ಒಂದು ರೀತಿಯ ಪಾಚಿ. ಇತರ ಸಸ್ಯಗಳಂತೆ ಅವು ಸಹ ಸೂರ್ಯನ ಶಕ್ತಿ ಮತ್ತು ಇಂಗಾಲದ ಡೈಆಕ್ಸೈಡ್ ಸಹಾಯದಿಂದ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಬದುಕುತ್ತವೆ. ಹಾಗಾಗಿ ಇವು ಬೆಳಕನ್ನು ಅವಲಂಬಿಸಿರುವುದರಿಂದ ಆಳ ವಿರುವಲ್ಲಿ ಬೆಳೆಯುವುದಿಲ್ಲ. ಭೂಮಿಯ ಮೇಲಿನ ಕಾಡಿ ನಂತೆ ದಟ್ಟವಾಗಿ ಬೆಳೆಯುತ್ತವೆ. ಇವು ನೀರೊಳಗಿನ ಮೀನು ಗಳು, ಅಕಶೇರುಕಗಳು ಮತ್ತು ಸಮುದ್ರ ಸಸ್ತನಿ ಪ್ರಭೇದಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತವೆ. ಅಲ್ಲದೆ ಇವು ಜಲಚರಗಳಿಗೆ ಬಿರುಗಾಳಿ ಯಿಂದ ರಕ್ಷಣೆ ನೀಡುತ್ತದೆ ಮತ್ತು ಇವುಗಳಿಗೆ ಆಹಾರವೂ ಇದೇ ಕೆಲ್ಪ್ ಕಾಡುಗಳು.

ಹೇಗೆ?
ಕಡಲಕಳೆಯಲ್ಲಿ ನಾನಾ ರೀತಿಯ ಜಾತಿ ಸಸ್ಯಗಳಿದ್ದು, ಇವುಗಳಲ್ಲಿ ಅತಿದೊಡ್ಡ ಜಾತಿಯ ಸಸ್ಯಗಳು ಸುಮಾರು 10 ಮೀಟರ್‌ ಅಥವಾ 32 ಅಡಿ ಎತ್ತರದವರೆಗೆ ಬೆಳೆಯು ತ್ತವೆ. ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ಸಸ್ಯಗಳು ನೀರಿನ ಹರಿವಿನಿಂದಾಗಿ ಚಲಿಸು ತ್ತಲೇ ಇರುತ್ತವೆ. ಭೂಮಿಯ ಮೇಲಿನ ಜೀವಿ ಗಳಿಗೆ ಭೂಮಿಯಲ್ಲಿರುವ ಸಸ್ಯಗಳು ಹೇಗೆ ಆಹಾರ ಮತ್ತು ವಾಸಿಸಲು ಸ್ಥಳವನ್ನು ಒದಗಿ ಸುತ್ತವೆಯೋ ಅದೇ ರೀತಿ ಕಡಲ ಕಳೆಯು ಸಮುದ್ರ ಜೀವಿಗಳಿಗೆ ಆಶ್ರಯ ಮತ್ತು ಆಹಾರ ನೀಡುತ್ತದೆ.

ಎಷ್ಟು?
ಈ ಸಂಶೋಧನೆಯನ್ನು ಪೂರ್ಣಗೊಳಿಸಲು, ಸಂಶೋಧಕರು ಸಮುದ್ರ ಕಾಡುಗಳು, ಸಮುದ್ರ ಪಾಚಿ ಇತ್ಯಾದಿಗಳ ಡೇಟಾವನ್ನು ವಿಶ್ಲೇಷಿಸುತ್ತಿದ್ದಾರೆ. ಹಲವಾರು ದೇಶಗಳ ಸ್ಥಳೀಯ ಡೇಟಾವನ್ನು ಪರಿಶೀಲಿಸಿದ್ದಾರೆ. ಆ ಅಧ್ಯಯನಗಳ ಪ್ರಕಾರ ಸಾಗರ ಅರಣ್ಯಗಳು 60 ರಿಂದ 7.2 ಮಿಲಿಯನ್‌ ಚದರ ಕಿಲೋಮೀಟರ್‌ ವಿಸ್ತೀರ್ಣವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಅಂದರೆ ಇದರ ವಿಸ್ತೀರ್ಣ ಅಮೆಜಾನ್‌ ಕಾಡುಗಳಿಗಿಂತ ಹೆಚ್ಚು. ಅಲ್ಲದೆ ಈ ಕಾಡುಗಳು ಸಾಕಷ್ಟು ಫ‌ಲವತ್ತಾದವು ಎಂದು ಸಂಶೋಧನೆಯಿಂದ ಕಂಡುಬಂದಿದೆ. ಅವು ಅಕ್ಕಿ, ಗೋಧಿ ಮತ್ತು ಜೋಳದ ಬೆಳೆಗಳಿಗಿಂತ ಹೆಚ್ಚು ಫ‌ಲಪ್ರದವಾಗಿವೆ. ಕಡಲಕಳೆ ಭೂಮಿಯ ಮೇಲೆ ವೇಗವಾಗಿ ಬೆಳೆಯುವ ಸಸ್ಯವೆಂದು ಪರಿಗಣಿಸಲಾಗಿದೆ. ಆದಾಗ್ಯೂ ಅದು ಎಷ್ಟು ಪ್ರದೇಶವನ್ನು ಆವರಿಸಿದೆ ಎಂದು ಅಂದಾಜು ಮಾಡುವುದು ವಿಜ್ಞಾನಿಗಳಿಗೆ ಇನ್ನೂ ತುಂಬಾ ಕಷ್ಟಕರವಾಗಿದೆ. ಇದಕ್ಕೆ ಕಾರಣವೆಂದರೆ ಭೂಮಿಯ ಮೇಲಿನ ಅರಣ್ಯ ಪ್ರದೇಶವನ್ನು ಉಪಗ್ರಹದ ಮೂಲಕ ಅಳೆಯಲಾಗುತ್ತದೆ. ಆದರೆ ಈ ತಂತ್ರವು ಸಮುದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ವಿಜ್ಞಾನಿಗಳು ಕೆಲ್ಪ… ಕಾಡುಗಳನ್ನು ಅಧ್ಯಯನ ಮಾಡುತ್ತಾರೆ. ಇವು ಕಾಲಾನಂತರದಲ್ಲಿ ಬದಲಾಗುತ್ತಿದೆಯೇ ಎಂದು ನಿರ್ಧರಿಸಲು ಮತ್ತು ನೈಸರ್ಗಿಕ ಅಥವಾ ಇನ್ನಿತರ ಬದಲಾವಣೆಗಳನ್ನು ಗುರುತಿಸಲು ಮಾನಿಟರಿಂಗ್‌ ಮಾಡುತ್ತಾರೆ.

ಕಾರಣ?
ಇಲ್ಲಿಯವರೆಗೆ ಭೂಮಿಯ ಮೇಲೆ ಉತ್ಪತ್ತಿಯಾಗುವ 2,400 ಗಿಗಾಟನ್‌ ಹಸುರುಮನೆ ಅನಿಲವು ನಮ್ಮ ಸಾಗರಗಳಿಗೆ ಮಾತ್ರ ಹೋಗುತ್ತದೆ. ಇದರರ್ಥ ಸಮುದ್ರ ಕಾಡುಗಳು ಬಹಳ ಕಷ್ಟದಲ್ಲಿವೆ. ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಕೆನಡಾ ಮತ್ತು ಕ್ಯಾಲಿಫೋರ್ನಿಯಾದಿಂದ ಅನೇಕ ಸಾಗರ ಕಾಡುಗಳು ಅಳಿವಿನಂಚಿನಲ್ಲಿವೆ. ಈ ಕಾರಣದಿಂದಾಗಿ ಸಮುದ್ರ ಜೀವಿಗಳ ಆವಾಸಕ್ಕೆ ಕಷ್ಟವಾಗಿದೆ ಮತ್ತು ಇಂಗಾಲದ ಪ್ರಮಾಣವನ್ನು ಹೆಚ್ಚಿಸುವ ಅಪಾಯವೂ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಮುದ್ರದ ಮಂಜುಗಡ್ಡೆ ಕರಗಿ ನೀರಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಆಕ್ಟಿìಕ್‌ ಸಾಗರ ಪ್ರದೇಶದಲ್ಲಿ ಅರಣ್ಯ ಹೆಚ್ಚಾಗುವ ಭೀತಿಯು ಎದುರಾಗಿದೆ.

Advertisement

ಏಕೆ ಮುಖ್ಯ
ಕೆಲ್ಪ್ ಕಾಡುಗಳು ಮೀನುಗಳು ಸೇರಿದಂತೆ ನೂರಾರು ಸಮುದ್ರ ಜಲಚರಗಳಿಗೆ ಪ್ರಮುಖ ಆವಾಸಸ್ಥಾನವಾಗಿದೆ. ಹವಾಮಾನ ಬದಲಾವಣೆಯಾದಾಗ ಮೀನು ಪ್ರಭೇದಗಳು ತಮ್ಮ ವ್ಯಾಪ್ತಿಯನ್ನು ಬದಲಾಯಿಸುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳಿಗೆ ಬೆಚ್ಚನೆಯ ಆವಾಸಸ್ಥಾನ ಬೇಕಾಗಿರುತ್ತದೆ. ನೀಲಿ ಇಂಗಾಲವನ್ನು ಸಂಗ್ರಹಿಸುವುದರ ಜತೆಗೆ ಸಾಗರ ಕಾಡುಗಳು ಸಮುದ್ರದ ಆಮ್ಲಿàಕರಣವನ್ನು ಎದುರಿಸಲು ಸಹಾಯ ಮಾಡುತ್ತವೆ. ಸಾಗರ ಕಾಡುಗಳು ನೀರಿನಿಂದ ಇಂಗಾಲದ ಡೈಆಕ್ಸೆ„ಡ್‌ ಅನ್ನು ಹೊರಗೆ ಹಾಕಲು ಸಹಾಯ ಮಾಡುತ್ತವೆ ಮತ್ತು ಬೇಸಗೆಯಲ್ಲಿ ತಾಪಮಾನ ಹೆಚ್ಚಾದಾಗ ಅಲ್ಲಿ ವಾಸಿಸುವ ಜೀವಿಗಳಿಗೆ ಆಧಾರವಾಗಿರುತ್ತವೆ.

ಸಮುದ್ರಾರಣ್ಯ ಅಪಾಯದಲ್ಲಿದೆಯೇ?
ಅರ್ಚಿನ್‌ಗಳು(ಹೊರ ಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಒಂದು ಸಮುದ್ರ ಪ್ರಾಣಿ) ಕೆಲ್ಪ… ಅರಣ್ಯವನ್ನು ತ್ವರಿತವಾಗಿ ನಾಶ ಮಾಡುತ್ತವೆ. ಅದಲ್ಲದೆ ಮಿತಿಮೀರಿದ ಮೀನುಗಾರಿಕೆ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಮಾನವ ಚಟುವಟಿಕೆಗಳು ಕೂಡ ಅಡೆತಡೆಗಳನ್ನು ಉಂಟುಮಾಡಬಹುದು.

ಸಮುದ್ರಾರಣ್ಯ ಅಭಿವೃದ್ಧಿ ಹೇಗಿದೆ?
ಲೆರಾಯ್‌ ಸೀಫ‌ುಡ್‌ ಗ್ರೂಪ್‌ ಮತ್ತು ಬೆಲ್ಲೋನಾ ಫೌಂಡೇಶನ್‌ ಕಂಪೆನಿಯು ಓಶಿಯನ್‌ ಫಾರೆಸ್ಟ್‌ ಅನ್ನು ರೂಪಿಸಲು ಕೈ ಜೋಡಿಸಿದ್ದು, ಇದರ ಗುರಿಯು ಜಲಚರ ಸಾಕಣೆಗೆ ಸಂಬಂಧಿಸಿದ ಹೊಸ ರೀತಿಯ ಜೀವರಾಶಿ ಉತ್ಪಾದನೆಗೆ ಪೂರಕ ವ್ಯವಸ್ಥೆ ಮಾಡುವುದರ ಜತೆಗೆ ಸಮುದ್ರದಲ್ಲಿ ಜೈವಿಕ ಉತ್ಪಾದನ ವೆಚ್ಚ ಕಡಿಮೆ ಮಾಡಲು ಪರಿಹಾರಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ಕಂಪೆನಿಯು ಆಹಾರ, ಶಕ್ತಿ ಮತ್ತು ಕೈಗಾರಿಕೆ ಮತ್ತು ಕೃಷಿಗೆ ಕಚ್ಚಾ ವಸ್ತುಗಳ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ. ಓಶಿಯನ್‌ ಫಾರೆಸ್ಟ್‌ ಪುನಶ್ಚೇತನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕಟ್ಟುನಿಟ್ಟಾದ ಸಮರ್ಥನೀಯ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಜಗತ್ತಿನಲ್ಲಿ ಆಹಾರ, ಮೀನು ಮತ್ತು ಪ್ರಾಣಿಗಳಿಗೆ ಆಹಾರದಂತಹ ಹೊಸ ಉತ್ಪನ್ನಗಳನ್ನು ಸೃಷ್ಟಿಸುತ್ತದೆ.

- ಪ್ರೀತಿ ಭಟ್‌ ಗುಣವಂತೆ

 

Advertisement

Udayavani is now on Telegram. Click here to join our channel and stay updated with the latest news.

Next