ಬಾಗಲಕೋಟೆ: ಕೂಲಿ ಅರಿಸಿ ಮಂಗಳೂರು, ಗೋವಾ ಹಾಗೂ ಬೆಂಗಳೂರಿಗೆ ದುಡಿಯಲು ಹೋಗುವವರ ಊರೆಂದೇ ಖ್ಯಾತಿ ಪಡೆದ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರ ಗ್ರಾಮ ಒಳಗೊಂಡ ಕೆಲವಡಿ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಹಾಗೂ ಅನುದಾನ ಖರ್ಚು ಮಾಡುವಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ.
ಹೌದು, ಇದು ಆಶ್ಚರ್ಯ ಎನಿಸಿದರೂ ಸತ್ಯ. ಪ್ರಸಕ್ತ 2020-21ನೇ ಸಾಲಿನಲ್ಲಿ ಕೆಲವಡಿ ಗ್ರಾಪಂನಿಂದ ಒಟ್ಟು 98,081 ಮಾನವ ದಿನ ಸೃಜನೆ ಮಾಡಲಾಗಿದೆ. ಇದಕ್ಕಾಗಿ ಸುಮಾರು 3 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಜಿಲ್ಲೆಯ 198 ಗ್ರಾಪಂಗಳಲ್ಲಿ ಕೆಲವಡಿ ಗ್ರಾಪಂ ಜಿಲ್ಲೆಯಲ್ಲೇ ಅತಿ ಹೆಚ್ಚು ಮಾನವ ದಿನ ಸೃಜನೆ ಮಾಡಿದ ಖ್ಯಾತಿ ಹೊಂದಿದೆ.
ಇನ್ನು ಹುನಗುಂದ ತಾಲೂಕಿನ ಮರೋಳ ಗ್ರಾಪಂ ಜಿಲ್ಲೆಯಲ್ಲೇ ಅತಿ ಕಡಿಮೆ 3594 ಮಾನವ ದಿನ ಸೃಜನೆ ಮಾಡಿದೆ. ಹೀಗಾಗಿ ಇದು ಜಿಲ್ಲೆಯಲ್ಲಿ ಅತಿ ಕಡಿಮೆ ಮಾನವ ದಿನ ಸೃಜನೆ ಮಾಡಿದ ಗ್ರಾಪಂ ಪಟ್ಟಿಗೆ ಸೇರಿದೆ. ನಿಗದಿತ ಗುರಿಗಿಂತ ಹೆಚ್ಚು ಸಾಧನೆ: ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಂಡಿತ್ತು. ಹೀಗಾಗಿ ಜಿಲ್ಲೆಯಲ್ಲೂ ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿತ ಗುರಿಗಿಂತ ಕಡಿಮೆ ಮಾನವ ದಿನ ಸೃಜನೆಯಾಗಲಿವೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಲಾಕ್‌ಡೌನ್ ಇದ್ದರೂ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆ ಹಿಂದೆ ಬಿದ್ದಿಲ್ಲ. ಅತಿ ಹೆಚ್ಚು ಮಾನವ ದಿನಗಳ ಸೃಜನೆಯಲ್ಲಿ ಇಳಕಲ್ಲ ತಾಲೂಕು ಮೊದಲ ಸ್ಥಾನ ಪಡೆದಿದ್ದರೆ, ಗುಳೇದಗುಡ್ಡ ತಾಲೂಕು 2ನೇ ಸ್ಥಾನದಲ್ಲಿದೆ. ಹುನಗುಂದ ತಾಲೂಕು ಜಿಲ್ಲೆಯಲ್ಲೇ ಕೊನೆಯ ಸ್ಥಾನದಲ್ಲಿದೆ.
19ಸಾವಿರ ಕಾಮಗಾರಿ:
ಜಿಲ್ಲೆಯ ಈ ವರ್ಷ 9ತಾಲೂಕು ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 19,217 ಕಾಮಗಾರಿ ಕೈಗೊಳ್ಳಲಾಗಿದೆ. ಬಾದಾಮಿ ತಾಲೂಕಿನಲ್ಲಿ 2357, ಬಾಗಲಕೋಟೆ-2377, ಬೀಳಗಿ-1257, ಗುಳೇದಗುಡ್ಡ-975, ಹುನಗುಂದ-1624, ಇಳಕಲ್ಲ-1462, ಜಮಖಂಡಿ-4135, ಮುಧೋಳ-2871, ರಬಕವಿ-ಬನಹಟ್ಟಿ-2159 ಸೇರಿದಂತೆ ಒಟ್ಟು ಜಿಲ್ಲೆಯ 19,217 ಕಾಮಗಾರಿ ಕೈಗೊಂಡಿದ್ದು, ಈ ಕಾಮಗಾರಿಗೆ ಒಟ್ಟು 18855.37 (188.55 ಕೋಟಿ ) ಲಕ್ಷ ಖರ್ಚು ಮಾಡಲಾಗಿದೆ.
ಜಿಲ್ಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿಗೆ 21376.52 ಲಕ್ಷ ಅನುದಾನದ ಗುರಿ ನೀಡಲಾಗಿದ್ದು, ಅದರಲ್ಲಿ 18855.37 ಲಕ್ಷ ಖರ್ಚಾಗಿದೆ. ಮಾನವ ದಿನಗಳ ಸೃಜನೆಗಾಗಿ 12946.93 ಲಕ್ಷ ಹಣವನ್ನು ಕೂಲಿಕಾರರಿಗೆ ಪಾವತಿಸಿದ್ದು, 5559.04 ಲಕ್ಷ ಸಾಮಗ್ರಿಗಾಗಿ ಪಾವತಿ ಮಾಡಲಾಗಿದೆ. ಒಟ್ಟಾರೆ ಕೊರೊನಾ ವೇಳೆ ಲಾಕ್‌ಡೌನ್ ಹೇರಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ನೀಡುವಲ್ಲಿ ಸಮಸ್ಯೆಯಾಗುತ್ತದೆ ಎಂಬ ಆತಂಕ ಹುಸಿಯಾಗಿದ್ದು, ಜಿಲ್ಲೆಯಲ್ಲಿ ಈ ವರ್ಷ ಬರೋಬ್ಬರಿ ಶೇ.109 ಸಾಧನೆ ಮಾಡಲಾಗಿದೆ.
ಶ್ರೀಶೈಲ ಕೆ. ಬಿರಾದಾರ