ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸುವ ನೋಟುಗಳಲ್ಲಿ ಮಹಾತ್ಮ ಗಾಂಧಿ ಪೋಟೋ ಜತೆ ಗಣಪತಿ ಹಾಗೂ ಲಕ್ಷ್ಮೀ ದೇವಿಯ ಫೋಟೊವನ್ನು ಮುದ್ರಿಸಬೇಕು…ಇದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ತಡೆಯಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ!
ಇದನ್ನೂ ಓದಿ:ಶಿವಮೊಗ್ಗ: ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು
ಕರೆನ್ಸಿ(ನೋಟು)ಯಲ್ಲಿ ದೇವರ ಫೋಟೊಗಳನ್ನು ಹಾಕಿದರೆ ದೇಶದ ಜನರು ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನಕ್ಕೆ ಆಶೀರ್ವದಿಸಲು ಪ್ರಯತ್ನಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಒಂದು ವೇಳೆ ನೋಟುಗಳಲ್ಲಿ ದೇವರ ಚಿತ್ರ ಇದ್ದರೆ, ಇಡೀ ದೇಶವೇ ಆಶೀರ್ವದಿಸಲಿದೆ. ಲಕ್ಷ್ಮೀ ದೇವಿ ಸಮೃದ್ಧಿಯ ಸಂಕೇತ, ಗಣೇಶ ವಿಘ್ನ ನಿವಾರಕನಾಗಿದ್ದಾನೆ” ಎಂಬುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುವ ಮೂಲಕ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾಷಣ ಆರಂಭಿಸಿದ್ದ ಕೇಜ್ರಿವಾಲ್, ಆರ್ಥಿಕ ಚೇತರಿಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ, ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದರು.
ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಮಗೆ ಆರ್ಥಿಕ ಚೇತರಿಕೆಯಲ್ಲಿ ಹೆಚ್ಚು ಪರಿಣಾಮ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ದೇವರ ಆಶೀರ್ವಾದದ ಅಗತ್ಯವಿದೆ. ಉದ್ಯಮಿಗಳು ತಮ್ಮ ಕಾರ್ಯದ ಕ್ಷೇತ್ರದಲ್ಲಿ ಎರಡು ಹಿಂದೂ ದೇವರ ಮೂರ್ತಿಗಳನ್ನು ಇರಿಸಿ, ತಮ್ಮ ಕೆಲಸ ಆರಂಭಿಸುವ ಮುನ್ನ ಪ್ರತಿದಿನ ಪೂಜೆ ಸಲ್ಲಿಸಬೇಕು ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.